Advertisement
ಆರಕ್ಷಕರಿಗೆ ಸರಕಾರ ಗಾಂಧಿ ಮೈದಾನದ ಬಳಿ 1 ಕೋಟಿ ರೂ. ವೆಚ್ಚದಲ್ಲಿ ನೂತನ ಸುಸಜ್ಜಿತ ವಸತಿ ಗೃಹ ನಿರ್ಮಿಸಿತ್ತು. ಆದರೆ ಇದನ್ನು ನಿರ್ಮಿಸಿದ ಇಲಾಖೆ ನೀರಿನ ಮೂಲದ ಬಗ್ಗೆ ಗಮನಹರಿಸದಿದ್ದರಿಂದ ಆರಕ್ಷಕ ಕುಟುಂಬಗಳು ನಿತ್ಯ ಪರಿತಪಿಸ ಬೇಕಾಗಿದೆ. ಇಲ್ಲಿ ಎರಡು ವಸತಿ ಗೃಹಗಳಿದ್ದು, ಬಾವಿ ರಚನೆಗೂ ಮುನ್ನ ಗೃಹ ನಿರ್ಮಾಣ ಮಂಡಳಿ ವಸತಿಗೃಹ ಹಸ್ತಾಂತರಿಸಿದೆ. ಆದ್ದರಿಂದ ಇರುವ ಹಳೆಯ ಬಾವಿಯನ್ನೇ ನೀರಿಗೆ ಬಳಸಿಕೊಳ್ಳಬೇಕಾಗಿದೆ. ಈಗ ಅದರಲ್ಲೂ ನೀರಿಲ್ಲ.
ಠಾಣೆಯಲ್ಲಿ ಒಟ್ಟು 35ಕ್ಕೂ ಅಧಿಕ ಸಿಬಂದಿಗಳಿದ್ದು ಅವರಲ್ಲಿ 24 ಕುಟುಂಬಗಳು ವಸತಿಗೃಹದಲ್ಲಿ ವಾಸಿಸುತ್ತಿದೆ. ಕಳೆದೊಂದು ತಿಂಗಳಿಂದ ಇರುವ ಹಳೆಯ ಬಾವಿಯಲ್ಲಿ ನೀರಿಲ್ಲದ ಪರಿಣಾಮ ಯಾತನೆ ಪಡಬೇಕಾಗಿದೆ. ಸ್ಥಳೀಯ ಪಂಚಾಯತ್ ಅಧಿಕಾರಿಗಳು ಹೇಳುವಂತೆ ಸಾರ್ವಜನಿಕರಿಗೇ ಸಮರ್ಪಕ ನೀರು ಪೂರೈಕೆಗೆ ಹರಸಾಹಸ ಪಡಬೇಕಾಗಿದೆ. ಹೀಗಾಗಿ ಆರಕ್ಷಕ ವಸತಿ ಗೃಹದವರು ನೀರಿನ ಸೌಲಭ್ಯದ ಬಗ್ಗೆ ಅವರ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದಿದ್ದಾರೆ. ಹಿರಿಯ ಅಧಿಕಾರಿಗಳು ವರ್ಷ ಕ್ಕೊಮ್ಮೆ ದಾನಿಗಳಿಂದ ಬಾವಿ ರಿಪೇರಿ ಕುರಿತು ನೆರವು ಪಡೆದರೂ ಈವರೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಹಗಲಿರುಳು ಹತ್ತಾರು ಸಮಸ್ಯಗಳಿಗೆ ಸ್ಪಂದಿಸಿ ವಿರಾಮದ ವೇಳೆ ವಿಶ್ರಾಂತಿ ಪಡೆಯಲು ವಸತಿಗೃಹಕ್ಕೆ ತೆರಳಿದರೆ ಮನೆಯಲ್ಲಿ ನೀರಿಗಾಗಿ ಕುಟುಂಬದ ಕಿರಿಕಿರಿ ಪೊಲೀಸರ ನೆಮ್ಮದಿಯನ್ನು ಕೆಡಿಸಿದೆ.