Advertisement

ಗದಗ: ನೀರು ಸೋರಿಕೆ- ನದಿಯಲ್ಲಿ ನೀರಿದ್ದರೂ ತಪ್ಪದ ಹಾಹಾಕಾರ!

06:02 PM Jan 02, 2025 | Team Udayavani |

ಉದಯವಾಣಿ ಸಮಾಚಾರ
ಗದಗ: ಕಳೆದ 20 ದಿನಗಳಿಂದ ಅವಳಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ನಗರದ 35 ವಾರ್ಡ್‌ಗಳ ಬಹುತೇಕ ಪ್ರದೇಶಗಳಲ್ಲಿ 15ರಿಂದ 25 ದಿನಗಳಿಗೊಮ್ಮೆ ನೀರು ಪೂರೈಕೆ ಆಗುತ್ತಿರುವುದರಿಂದ ಮಹಿಳೆಯರು, ವೃದ್ಧರು, ಮಕ್ಕಳು ಜೀವಜಲಕ್ಕಾಗಿ ಪರದಾಡುವಂತಾಗಿದೆ.ತುಂಗಭದ್ರಾ ನದಿಪಾತ್ರದಲ್ಲಿ ನೀರಿದ್ದರೂ ಜಿಲ್ಲೆಯಲ್ಲಿ ಜೀವಜಲಕ್ಕೆ ಹಾಹಾಕಾರ ಎದುರಾಗಿದೆ.

Advertisement

ಪದೇ ಪದೆ ಮುಖ್ಯ ಕೊಳವೆ ಪೈಪ್‌ಗ್ಳಲ್ಲಿ ನೀರು ಸೋರಿಕೆಯಾಗಿತ್ತಿದ್ದು, ನೀರು ಪೂರೈಕೆ ಕಳೆದ 20 ದಿನಗಳಿಂದ ಸ್ಥಗಿತಗೊಂಡಿದೆ. ಪರಿಣಾಮ ಹೊಸ ವರ್ಷದ ಆರಂಭದಲ್ಲೇ ಅವಳಿ ನಗರದ ಜನತೆ ವಾಟರ್‌ ಶಾಕ್‌ ಅನುಭವಿಸುವಂತಾಗಿದೆ. ಜಿಲ್ಲೆಯ ಮುಂಡರಗಿ ತಾಲೂಕಿನ ಸಿಂಗಟಾಲೂರು ಬ್ಯಾರೇಜ್‌ನಿಂದ ಪೈಪ್‌ಲೈನ್‌ ಮೂಲಕ ಅವಳಿ ನಗರಕ್ಕೆ ತುಂಗಭದ್ರಾ ನದಿ ನೀರನ್ನು ಪೂರೈಸಲಾಗುತ್ತದೆ. ಮುಖ್ಯ ಕೊಳವೆ ಪೈಪ್‌ಲೈನ್‌ಗಳಲ್ಲಿ ನೀರು ಸೋರಿಕೆಯಾಗುತ್ತಿರುವುದರಿಂದ ಕಳೆದ ನಾಲ್ಕು ದಶಕಗಳಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತಿಲ್ಲ.

ಗದಗ-ಬೆಟಗೇರಿ ನಗರಸಭೆಯಲ್ಲಿ ಸದ್ಯ ಜಿಲ್ಲಾಧಿಕಾರಿಗಳು ಆಡಳಿತ ನಡೆಸುತ್ತಿದ್ದಾರೆ. ಪೌರಾಯುಕ್ತರಾಗಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಪ್ರಭಾರ ಅಧಿಕಾರ ವಹಿಸಲಾಗಿದೆ. ಆದರೆ, ಅಧಿಕಾರಿಗಳ ನಡುವಿನ ಸಮನ್ವಯತೆ ಕೊರತೆಯಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದ್ದು, ಸಮಸ್ಯೆಗೆ ಪರಿಹಾರ ಇಲ್ಲದಂತಾಗಿದೆ.

ಅಲ್ಲದೇ, ಅವಳಿ ನಗರದಲ್ಲಿ ಈಗಾಗಲೇ ಹಲವು ವಾರ್ಡ್‌ಗಳಲ್ಲಿ ಕೊಳವೆಬಾವಿ ಪೈಪ್‌ ಮತ್ತು 24/7 ನೀರಿನ ಪೈಪಲೈನ್‌ ಒಡೆದು ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಜತೆಗೆ ಅವಳಿ ನಗರಕ್ಕೆ ಸಗಟು ನೀರು ಸರಬರಾಜು ಮಾಡುವ ಹಮ್ಮಗಿ ಜ್ಯಾಕ್‌ವೆಲ್‌ ದಿಂದ ಡಂಬಳ ಮಧ್ಯಂತರ ಪಂಪಿಂಗ್‌ ಸ್ಟೇಷನ್‌ಗೆ ಬರುವ ಸಿಂಗಟಾಲೂರು ಹಿಂಭಾಗದಲ್ಲಿ ಮುಖ್ಯ ಕೊಳವೆ ಮಾರ್ಗಗಳ ದುರಸ್ತಿ ಕಾರ್ಯ ಕೈಗೆತ್ತಿಕೊಂಡಿದ್ದರಿಂದ ನೀರಿನ ಸಮಸ್ಯೆ ಮುಂದುವರಿದಿದೆ.

ಈಗಾಗಲೇ ನಗರದ 35 ವಾರ್ಡ್‌ಗಳಲ್ಲಿ ಬೋರ್‌ ವೆಲ್‌ ಪೈಪ್‌ ಹಾಗೂ 24/7 ಪೈಪ್‌ಲೈನ್‌ ಹೊಸದಾಗಿ ಹಾಕುವುದು ಮತ್ತು ರಿಪೇರಿ ಮಾಡಲು ಪ್ರತಿ ವಾರ್ಡ್ ಗೆ ತಲಾ 5 ಲಕ್ಷ ರೂ. ಟೆಂಡರ್‌ ಕರೆಯಲಾಗಿದ್ದು, ಈವರೆಗೂ ಟೆಂಡರ್‌ ತೆರೆದಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದು, ಟೆಂಡರ್‌ ತೆರೆಯಲು ಪೌರಾಯುಕ್ತರು ಮುಂದಾಗುತ್ತಿಲ್ಲ. ಆದ್ದರಿಂದ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಟೆಂಡರ್‌ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಬೇಕೆಂದು ನಗರಸಭೆ ಕಾಂಗ್ರೆಸ್‌ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

Advertisement

ಅವಳಿ ನಗರದಲ್ಲಿ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆ ಹದಗೆಟ್ಟಿದೆ. ಕುಡಿಯುವ ನೀರಿನ ತೊಂದರೆಯಾದರೆ ತಕ್ಷಣ ಸಂಬಂಧಿಸಿದ ವಾರ್ಡ್‌ಗಳಿಗೆ ನೀರು ಪೂರೈಸಲು 5 ಟ್ಯಾಂಕರ್‌ಗಳನ್ನು ಬಾಡಿಗೆ ರೂಪದಲ್ಲಿ ಪಡೆದುಕೊಳ್ಳಲು ಕ್ರಮ ಜರುಗಿಸಬೇಕು.
ಬಿ.ಬಿ. ಅಸೂಟಿ, ಶಹರ ಕಾಂಗ್ರೆಸ್‌
ಸಮಿತಿ ಅಧ್ಯಕ್ಷ

35 ವಾರ್ಡ್‌ಗಳಲ್ಲಿ ಬೋರ್‌ವೆಲ್‌ ಪೈಪ್‌ ಹಾಗೂ 24/7 ಪೈಪ್‌ಲೈನ್‌ ಹೊಸದಾಗಿ ಹಾಕುವುದು ಮತ್ತು ರಿಪೇರಿ ಮಾಡಲು ಹಾಗೂ ಪ್ರತಿಯೊಂದು ವಾರ್ಡ್‌ಗೆ ನಿಗದಿಯಾಗಿರುವ 5 ಲಕ್ಷ ರೂ. ಮೊತ್ತದ ಟೆಂಡರ್‌ ತೆರೆಯಲಾಗುವುದು. ಜತೆಗೆ ಕಾಲುವೆ ಮೂಲಕ ಡಂಬಳ ಕಿನಾಲ್‌ಗೆ ನೀರು ಹರಿಸಿ ಅವಳಿ ನಗರದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ಜರುಗಿಸಲಾಗುವುದು.
ಗೋವಿಂದರೆಡ್ಡಿ, ಜಿಲ್ಲಾಧಿಕಾರಿ

ಅರುಣಕುಮಾರ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next