Advertisement
ಹೊಸ ಮಾರ್ಪಾಡಿನಂತೆ ಮಣಿಪಾಲ ಕಡೆಯಿಂದ ಮಂಗಳೂರು ಹಾಗೂ ಕಾಪು ಕಡೆ ಹೋಗುವವರು ಶಾರದಾ ಕಲ್ಯಾಣ ಮಂಟಪದ ಕಡೆಯಿಂದ ಹೋಗುತ್ತಿದ್ದಾರೆ. ಗುಂಡಿಬೈಲು ಕಡೆಯಿಂದ ಬರುವ ವಾಹನಗಳು ಕಡಿಯಾಳಿ ಎದುರು ತಿರುಗಿಸಿಕೊಂಡು ಕೃಷ್ಣ ಮಠ ಮತ್ತು ಉಡುಪಿ ಕಡೆ ಬರುತ್ತಿದ್ದು, ಮಣಿಪಾಲ ಕಡೆಯಿಂದ ಬಂದು ಗುಂಡಿಬೈಲು ಕಡೆ ಹೋಗುವವರು ಸಿಟಿ ಬಸ್ ನಿಲ್ದಾಣದ ಹತ್ತಿರ ತಿರುಗಿಸಿಕೊಂಡು ಬರುತ್ತಿದ್ದಾರೆ. ಮಲ್ಪೆಯಿಂದ ಬರುವವರು ಕರಾವಳಿ ಜಂಕ್ಷನ್ಗೆ ಬಂದು ಎಡಕ್ಕೆ ತಿರುಗಿ ಸರ್ವಿಸ್ ರಸ್ತೆಯಲ್ಲಿ ಚಲಿಸಿ ನಿಟ್ಟೂರಿನ ಆಭರಣ ಮೋಟಾರ್ಸ್ ಎದುರಿಗೆ ಯೂ ಟರ್ನ್ ಮಾಡಿಕೊಂಡು ನಗರದ ಕಡೆಗೆ ಬರುತ್ತಿದ್ದಾರೆ. ಮಂಗಳೂರು ಕಡೆಯಿಂದ ಬಂದು ಮಲ್ಪೆಗೆ ಹೋಗುವವರನ್ನು ಹೊರತುಪಡಿಸಿ ಉಳಿದೆಲ್ಲರೂ ನಿಟ್ಟೂರಿನ ಆಭರಣ ಮೋಟಾರ್ಸ್ ಎದುರು ತಿರುಗಿಸಿ ಉಡುಪಿಗೆ ಬರುತ್ತಿದ್ದಾರೆ. ಮಲ್ಪೆ ಬೀಚ್ ಕಡೆಯಿಂದ ಉಡುಪಿಗೆ ಬರುವವರು ಬಲರಾಮ ಸರ್ಕಲ್ನಿಂದ ಹೊರಟು ಹೂಡೆ, ನೇಜಾರು ಮಾರ್ಗ ಬಳಸಿ ಸಂತೆಕಟ್ಟೆಯಿಂದ ರಾ.ಹೆ. ಸೇರುತ್ತಿದ್ದಾರೆ.
ಪ್ರಸ್ತುತ ಕಡಿಯಾಳಿ ಬಳಿ ದಟ್ಟಣೆೆ ಕಂಡುಬರುತ್ತಿದೆ. ಗುರುವಾರ ಹಾಗೂ ಶುಕ್ರವಾರ ಕಡಿಯಾಳಿಯ ಓಶಿಯನ್ ಪರ್ಲ್ ಹೊಟೇಲ್ ಬಳಿ ಯೂಟರ್ನ್ಗೆ ಅವಕಾಶ ಮಾಡಿಕೊಡಲಾಗಿತ್ತು. ಶುಕ್ರವಾರ ಸಂಜೆಯ ಬಳಿಕ ಅಲ್ಲಿಯೂ ಯೂಟರ್ನ್ ಅನ್ನು ಬಂದ್ ಮಾಡಲಾಗಿದ್ದು, ಕಡಿಯಾಳಿ ಜಂಕ್ಷನ್ ಬಳಿ ವಾಹನಗಳು ತಿರುವು ಪಡೆದುಕೊಳ್ಳಬೇಕಿದೆ. ಇಲ್ಲಿ ಕೂಡ ಸ್ಥಳಾವಕಾಶ ಕಿರಿದಾದ ಕಾರಣ ಕಲ್ಸಂಕದ ಸಮಸ್ಯೆ ಇಲ್ಲಿಗೆ ಸ್ಥಳಾಂತರ ಆದಂತಾಗಿದೆ. ಶನಿವಾರ ಅಂಬಲಪಾಡಿ, ಶಿರಿಬೀಡು, ಸಿಟಿಬಸ್ ನಿಲ್ದಾಣ, ಸಂತೆಕಟ್ಟೆ, ಗುಂಡಿಬೈಲು, ಕಡಿಯಾಳಿ ಭಾಗದಲ್ಲಿ ಸಂಚಾರದಟ್ಟಣೆೆ ಕಂಡುಬಂತು. ಯಾವಾಗಲೂ ಗಿಜಿಗುಡುತ್ತಿದ್ದ ಕಲ್ಸಂಕದಲ್ಲಿ ಅಷ್ಟೊಂದು ಪ್ರಮಾಣದ ದಟ್ಟಣೆೆ ಉಂಟಾಗಲಿಲ್ಲ. ಕಲ್ಸಂಕ, ಕಡಿಯಾಳಿ, ಶಿರಿಬೀಡು, ಬನ್ನಂಜೆ, ಕರಾವಳಿ ಬೈಪಾಸ್, ಅಂಬಲಪಾಡಿ, ಸಂತೆಕಟ್ಟೆಯ ಬಳಿ ದಟ್ಟಣೆೆ ನಿಯಂತ್ರಣಕ್ಕೆ ಹೆಚ್ಚುವರಿ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.
Related Articles
ಶಿರಿಬೀಡು ಜಂಕ್ಷನ್ನಿಂದ ಶಾರದಾ ಕಲ್ಯಾಣ ಮಂಟಪದವರೆಗೆ ಹಾಗೂ ಕಲ್ಸಂಕದಿಂದ ಗುಂಡಿಬೈಲು ಪರಿಸರದವರೆಗೆ ಎಲ್ಲ ತಿರುವಿನಲ್ಲಿಯೂ ಘನ ವಾಹನಗಳು ಪೂರ್ಣ ಪ್ರಮಾಣದಲ್ಲಿ ತಿರುವು ಪಡೆದುಕೊಳ್ಳಲಾಗದೆ ಇತರ ವಾಹನಗಳಿಗೂ ಅಡಚಣೆ ಆಗುತ್ತಿದೆ.
Advertisement
ಸಮಸ್ಯೆ ಆಗುತ್ತಿರುವುದೆಲ್ಲಿ?ಪ್ರಸ್ತುತ 1ರಿಂದ 3 ಮಂದಿ ಪೊಲೀಸ್ ಸಿಬಂದಿಗಳು ಕಲ್ಸಂಕ ಜಂಕ್ಷನ್ನಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿದ್ದಾರೆ. ಬೆಳಗ್ಗೆ ಹಾಗೂ ಸಂಜೆಯ ವೇಳೆಗೆ ಕನಿಷ್ಠ 5 ಮಂದಿ ಪೊಲೀಸ್ ಸಿಬಂದಿ ಬೇಕಿದೆ. ದಟ್ಟಣೆೆ ನಿಯಂತ್ರಣಕ್ಕೆ ಇಲ್ಲಿವೆ ಸಲಹೆಗಳು
1 ಸಿಟಿ ಬಸ್ ನಿಲ್ದಾಣ ಮಾರ್ಗವಾಗಿ ಗುಂಡಿಬೈಲ್ಗೆ ಹೋಗುವವರಿಗೆ ಕಲ್ಸಂಕದಲ್ಲಿ ಫ್ರೀ ಲೆಫ್ಟ್ ವಿಸ್ತರಣೆಗೊಳಿಸಿದರೆ ತಕ್ಕ ಮಟ್ಟಿಗೆ ಸಮಸ್ಯೆ ಪರಿಹಾರವಾಗಲಿದೆ. ಅದೇ ರೀತಿ ಮಣಿಪಾಲದಿಂದ ಶ್ರೀಕೃಷ್ಣ ಮಠಕ್ಕೆ ತೆರಳುವಾಗ ಸಿಗುವ ಕಲ್ಸಂಕ ಸೇತುವೆ ಬಳಿ ಇರುವ ಜಾಗವನ್ನು ಭೂಸ್ವಾಧೀನ ಪಡಿಸಿಕೊಂಡು ಸುಮಾರು 15 ಅಡಿಗಳಷ್ಟು ವಿಸ್ತರಿಸಿದರೆ ತಿರುವು ಪಡೆಯಲು ಸ್ಥಳಾವಕಾಶ ಸಿಗಲಿದೆ. 2 ಸಿಟಿ ಬಸ್ ನಿಲ್ದಾಣ, ಗುಂಡಿಬೈಲು, ಮಣಿಪಾಲದಿಂದ ಕಲ್ಸಂಕ ಸಂಧಿಸುವಾಗ ಈ ಮೂರೂ ರಸ್ತೆಯಲ್ಲಿ ವಾಹನಗಳನ್ನು ತಡೆಹಿಡಿದು ಶ್ರೀಕೃಷ್ಣ ಮಠದಿಂದ ಗುಂಡಿಬೈಲು ಹಾಗೂ ಸಿಟಿ ಬಸ್ ತಂಗುದಾಣಕ್ಕೆ ಹೋಗುವ ವಾಹನಗಳನ್ನು ಬಿಡುವ ವ್ಯವಸ್ಥೆ ಮಾಡಬೇಕು. ಮಣಿಪಾಲದಿಂದ ವಾಹನಗಳನ್ನು ಬಿಡುವ ಸಂದರ್ಭದಲ್ಲಿ ಶ್ರೀಕೃಷ್ಣ ಮಠದಿಂದಹಾಗೂ ಗುಂಡಿಬೈಲಿನಿಂದ ಬರುವ ವಾಹನಗಳನ್ನು ತಡೆಯಬೇಕು. ಇತ್ತ ಉಡುಪಿ ಸಿಟಿ ಬಸ್ ತಂಗುದಾಣದಿಂದ ಮಣಿಪಾಲ, ಶ್ರೀಕೃಷ್ಣ ಮಠ ಹಾಗೂ ಉಡುಪಿಯತ್ತ ತೆರಳುವ ವಾಹನಗಳನ್ನು ಬಿಡುವಾಗ ಮಣಿಪಾಲ ಕಡೆಯಿಂದ ಗುಂಡಿಬೈಲಿನಿಂದ ಆಗಮಿಸುವ ವಾಹನಗಳನ್ನು ನಿಲ್ಲಿಸಬೇಕು. 3 ಕಲ್ಸಂಕ ಆಸುಪಾಸು ಭಾಗದಲ್ಲಿ ನೋ ಪಾರ್ಕಿಂಗ್ ಝೋನ್ ಮಾಡಿದರೆ ಇತರ ವಾಹನಗಳ ಓಡಾಟಕ್ಕೆ ಅನುಕೂಲವಾಗಲಿದೆ. 4 ಕಲ್ಸಂಕದಿಂದ ಗುಂಡಿಬೈಲು ಮೂಲಕ ದೊಡ್ಡಣಗುಡ್ಡೆ ಹೋಗುವ ತಿರುವಿನವರೆಗೆ ಇರುವ ಎಲ್ಲ ಯೂಟರ್ನ್ ಕಿರಿದಾಗಿದ್ದು, ವಾಹನಗಳು ತಿರುವು ಪಡೆಯಲು ಕಷ್ಟಪಡಬೇಕಾದಂತಹ ಸ್ಥಿತಿ ಎದುರಾಗುತ್ತಿದೆ. ದೊಡ್ಡಣಗುಡ್ಡೆಗೆ ಹೋಗಲು ಇರುವ ಯೂ ಟರ್ನ್ ನಲ್ಲಿ ವಾಹನಗಳು ಸುಲಭದಲ್ಲಿ ತಿರುವು ಪಡೆಯುವ ಕಾರಣ ಅದನ್ನು ಉಳಿಸಿಕೊಂಡು ಅಲ್ಲಿಯೇ ತಿರುವುದು ಪಡೆದುಕೊಂಡರೆ ಮತ್ತಷ್ಟು ಅನುಕೂಲವಾಗಲಿದೆ. ತಾತ್ಕಾಲಿಕ ಬದಲಾವಣೆ
ಹೊಸ ವರ್ಷಾಚರಣೆ ಹಿನ್ನೆಲೆ, ಸಾಲು-ಸಾಲು ರಜೆ ಹಾಗೂ ಅಂಬಲಪಾಡಿ ಮತ್ತು ಮಲ್ಪೆಯಲ್ಲಿ ರಾ.ಹೆ.ಕಾಮಗಾರಿ ನಡೆಯುತ್ತಿರುವ ಕಾರಣ ನಗರದೆಲ್ಲೆಡೆ ವಾಹನದಟ್ಟಣೆೆ ಕಂಡುಬರುತ್ತಿದ್ದು, ಇದನ್ನು ನಿಯಂತ್ರಿಸುವ ಸಲುವಾಗಿ ಹಲವಾರು ರೀತಿಯ ಮಾರ್ಪಾಡುಗಳನ್ನು ನಗರದಲ್ಲಿ ಮಾಡಲಾಗಿದೆ. ಈಗಾಗಲೇ ಇದು ಅನುಷ್ಠಾನಕ್ಕೆ ಬಂದಿದ್ದು, ಪ್ರತಿದಿನ ಸಂಜೆ 4ರಿಂದ ರಾತ್ರಿ 9ರವರೆಗೆ ಈ ವ್ಯವಸ್ಥೆ ಮುಂದುವರಿಯಲಿದೆ. ಉಳಿದ ಸಂದರ್ಭದಲ್ಲಿ ವಾಹನಗಳ ದಟ್ಟಣೆೆ ಅಧಿಕವಿದ್ದರೆ ಇದೇ ವ್ಯವಸ್ಥೆ ಇರಲಿದೆ. ಜ.1ರ ರಾತ್ರಿ 9 ಗಂಟೆಯವರೆಗೆ ಈ ನಿಯಮವನ್ನು ಎಲ್ಲರೂ ಪಾಲಿಸಿ ಪೊಲೀಸರೊಂದಿಗೆ ಸಹಕರಿಸಬೇಕು.
-ಡಾ| ಕೆ.ಅರುಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ