Advertisement

ಹಾವೇರಿ: ನಿರ್ವಹಣೆ ಇಲ್ಲದೇ ನೀರಿನ ಘಟಕ ಬಂದ್‌-ಸವಾಲಾದ ಶುದ್ಧ ನೀರು ಪೂರೈಕೆ…

05:40 PM Dec 24, 2024 | Team Udayavani |

ಉದಯವಾಣಿ ಸಮಾಚಾರ
ಹಾವೇರಿ: ನಗರದ ಜನರಿಗೆ ಶುದ್ಧ ನೀರು ಪೂರೈಸುವ ಸದುದ್ದೇಶದಿಂದ ಸ್ಥಳೀಯ ನಗರಸಭೆ ವತಿಯಿಂದ ನಗರದಲ್ಲಿ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಸೂಕ್ತ ನಿರ್ವಹಣೆ ಇಲ್ಲದೇ ಬಂದ್‌ ಆಗಿದ್ದು, ಧೂಳು ತಿನ್ನುತಿವೆ.

Advertisement

ಸ್ಥಳೀಯ ನಗರಸಭೆ ವತಿಯಿಂದ ಲಕ್ಷಾಂತರ ರೂ. ಖರ್ಚು ಮಾಡಿ ನಗರದ ವಿವಿಧೆಡೆ 6 ಶುದ್ಧ ಕುಡಿಯುವ ನೀರಿನ ಘಟಕಗಳನ್ನು
ಸ್ಥಾಪಿಸಲಾಗಿದೆ. ಆದರೆ ನಗರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ದಿಂದ ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ವಹಣೆ ಇಲ್ಲದೇ ಬಂದ್‌ ಆಗಿವೆ.

ನಗರದಲ್ಲಿ 31 ವಾರ್ಡ್‌ಗಳಿದ್ದು, ಸುಮಾರು 15 ಸಾವಿರಕ್ಕೂ ಅಧಿಕ ವಸತಿ ಮನೆಗಳಿದ್ದು, ಸುಮಾರು ಒಂದು ಲಕ್ಷದವರೆಗೆ ಜನಸಂಖ್ಯೆ ಇದೆ. ನಗರ ವೇಗವಾಗಿ ಬೆಳೆಯುತ್ತಿದ್ದು, ನಗರದ ಜನತೆಗೆ ಶುದ್ಧ ಕುಡಿಯುವ ನೀರನ್ನು ಪೂರೈಸುವುದು ಕೂಡ ನಗರಸಭೆಗೆ ಸವಾಲಿನ ಕೆಲಸವಾಗಿದೆ.

ಇದುವರೆಗೆ ನಗರಸಭೆ ವತಿಯಿಂದ ನಿರ್ಮಿಸಿದ ಆರು ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ ಎರಡು ಘಟಕಗಳು ಮಾತ್ರ
ಕಾರ್ಯನಿರ್ವಹಿಸುತ್ತಿವೆ. ಉಳಿದ ನಾಲ್ಕು ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ವಹಣೆ ಇಲ್ಲದೇ ಸಂಪೂರ್ಣ ಬಂದ್‌ ಆಗಿವೆ. ಬಂದ್‌ ಆಗಿರುವ ನೀರಿನ ಘಟಕಗಳನ್ನು ಮರು ದುರಸ್ತಿ ಮಾಡಬೇಕೆ ಅಥವಾ ಹೊಸದಾಗಿ ಶುದ್ಧ ಕುಡಿವ ನೀರಿನ ಘಟಕಗಳನ್ನು ಸ್ಥಾಪಿಸಬೇಕೆ ಎಂಬ ಗೊಂದಲದಲ್ಲಿದ್ದಾರೆ ನಗರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು.

ಖಾಸಗಿ ಘಟಕಗಳೇ ಹೆಚ್ಚು: ಪಂಚಾಯತ್‌ರಾಜ್‌ ಮತ್ತು ಕುಡಿಯುವ ನೀರು ವಿಭಾಗ (ಪಿಆರ್‌ ಡಿಡಬ್ಲ್ಯೂಡಿ) ಹಾಗೂ ಶಾಸಕರ ವಿಶೇಷ ಅನುದಾನದಡಿ ನಗರಾದ್ಯಂತ 18ಕ್ಕೂ ಹೆಚ್ಚು ನೀರಿನ ಘಟಕ ಸ್ಥಾಪಿಸಲಾಗಿದೆ. ಇದರ ಜತೆಗೆ ವಿವಿಧ ಸಂಘ-ಸಂಸ್ಥೆಗಳು, ಖಾಸಗಿಯವರು ಕೂಡ ಶುದ್ಧ ಕುಡಿವ ನೀರಿನ ಘಟಕಗಳನ್ನು ಹಾಕಿಕೊಂಡಿದ್ದಾರೆ. ಇಂತಹವುಗಳೇ ಬಹಳಷ್ಟಿದ್ದು, ಹೆಚ್ಚಿನ ಸಂಖ್ಯೆಯ ಜನರು ಈ ನೀರಿನ ಘಟಕಗಳನ್ನು ಅವಲಂಬಿಸಿದ್ದಾರೆ.

Advertisement

ಬೇಡಿಕೆಗೆ ತಕ್ಕಂತೆ ಅನುಷ್ಠಾನ: ಈಗಾಗಲೇ ನಗರಸಭೆಯಿಂದ ಸ್ಥಾಪಿಸಿದ್ದ ನೀರಿನ ಘಟಕಗಳು ಸೂಕ್ತ ನಿರ್ವಹಣೆ ಇಲ್ಲದೇ, ಕಿಡಿಗೇಡಿಗಳಿಂದ ಹಾಳಾಗಿವೆ. ಇವುಗಳನ್ನು ದುರಸ್ತಿ ಮಾಡಿಸಬೇಕಾದರೆ ಕನಿಷ್ಟ 2.50 ಲಕ್ಷ ರೂ. ದಿಂದ 3 ಲಕ್ಷ ರೂ. ಬೇಕಾಗುತ್ತವೆ. ಹೊಸದಾಗಿ ಆರ್‌ಒ ಘಟಕ ಸ್ಥಾಪಿಸಬೇಕಾದರೆ 4.50 ಲಕ್ಷದಿಂದ 5 ಲಕ್ಷ ರೂ. ಬೇಕಾಗುತ್ತವೆ. ಹಾಗಾಗಿ ಜನರ ಬೇಡಿಕೆಗೆ ತಕ್ಕಂತೆ ಆರ್‌ಒ ಘಟಕ ಸ್ಥಾಪಿಸಬೇಕೆಂಬ ಚಿಂತನೆ ಇದೆ. ಈ ಬಗ್ಗೆ ಇತ್ತೀಚೆಗೆ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಲು ವಿಷಯ
ಉಲ್ಲೇಖೀಸಲಾಗಿತ್ತು. ಆದರೆ ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸುವ ಬಗ್ಗೆ ನಿರ್ಧರಿಸಲಾಗಿದೆ ಎಂದು ನಗರಸಭೆಯ
ಜ್ಯೂನಿಯರ್‌ ಎಂಜನೀಯರ್‌ ಮಹ್ಮದ್‌ ಸಮೀರ್‌ ಮಾಹಿತಿ ನೀಡಿದರು.

ನಗರಸಭೆಯ ಆರ್‌ಒ ಘಟಕಗಳು
ಸ್ಥಳೀಯ ನಗರಸಭೆ ವತಿಯಿಂದ ನಗರದ 6 ಸ್ಥಳಗಳಲ್ಲಿ ನೀರಿನ ಘಟಕಗಳು ಸ್ಥಾಪಿಸಲಾಗಿದೆ. ಪ್ರಮುಖವಾಗಿ ನಗರದ ಸಿಂದಗಿಮಠ ಬಳಿ, ವಾರ್ಡ್‌ ನಂ. 23 ಪುರದ ಓಣಿ ಸಮೀಪ, ವಾರ್ಡ್‌ ನಂ. 12 ಎಸ್‌.ಎಂ.ಎಸ್‌ ಸ್ಕೂಲ್‌ ಹಿಂಭಾಗ, ಶಿವಾಜಿನಗರ ಒಂದನೇ ಕ್ರಾಸ್‌,
ಅಕ್ಕಮಹಾದೇವಿ ಹೊಂಡ ಹಾಗೂ ನಾಗೇಂದ್ರನಮಟ್ಟಿಯಲ್ಲಿ ಸ್ಥಾಪಿಸಿದೆ. ಇವುಗಳಲ್ಲಿ ಅಕ್ಕಮಹಾದೇವಿ ಹೊಂಡ ಮತ್ತು ಶಿವಾಜಿನಗರ ಒಂದನೇ ಕ್ರಾಸ್‌ನಲ್ಲಿರುವ ಆರ್‌ಒಗಳು ಮಾತ್ರ ಚಾಲ್ತಿಯಲ್ಲಿದ್ದು, ಉಳಿದವು ಬಂದ್‌ ಆಗಿವೆ.

ನಗರಸಭೆ ವತಿಯಿಂದ ಸ್ಥಾಪಿಸಲಾದ ಶುದ್ಧ ಕುಡಿಯುವ ನೀರಿನ ಘಟಕಗಳು ಸಂಪೂರ್ಣವಾಗಿ ಹಾಳಾಗಿವೆ. ದುರಸ್ತಿಗೆ ಅಧಿ ಕಾರಿಗಳು ಮುಂದಾಗದೇ ಇರುವುದರಿಂದ ಶೆಡ್‌ಗಳು, ಸಾಮಗ್ರಿಗಳು ಗುಜರಿ ಸೇರುವಂತಾಗಿದೆ. ಹೊಸದಾಗಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ ಜನರಿಗೆ ನೀರು ಪೂರೈಸಬೇಕು.
●ಅರುಣ ಸವಣೂರ, ಸ್ಥಳೀಯರು

ನಗರದಲ್ಲಿ ಹಾಳಾದ ಶುದ್ಧ ಕುಡಿವ ನೀರಿನ ಘಟಕಗಳನ್ನು ತೆರವುಗೊಳಿಸುವ ಬಗ್ಗೆ ಚರ್ಚಿಸಲು ಇತ್ತೀಚೆಗೆ ನಡೆದ ಸಾಮಾನ್ಯ
ಸಭೆಯ ಅಜೆಂಡಾದಲ್ಲಿ ವಿಷಯ ಪ್ರಸ್ತಾಪಿಸಲಾಗಿತ್ತು. ಆದರೆ ಚರ್ಚೆ ನಡೆಯಲಿಲ್ಲ, ಮತ್ತೂಮ್ಮೆ ಸಾಮಾನ್ಯ ಸಭೆ ನಡೆಸಿ ಚರ್ಚಿಸಲಾಗುವುದು. ಜನರ ಬೇಡಿಕೆಗೆ ತಕ್ಕಂತೆ ಆರ್‌ಒ ಘಟಕಗಳನ್ನು ಸ್ಥಾಪಿಸಲಾಗುವುದು.
●ಶಶಿಕಲಾ ಮಾಳಗಿ, ನಗರಸಭೆ ಅಧ್ಯಕ್ಷೆ, ಹಾವೇರಿ

Advertisement

Udayavani is now on Telegram. Click here to join our channel and stay updated with the latest news.

Next