Advertisement

Editorial: ಕುಂದಾಪುರದ ಹೆದ್ದಾರಿ ಸಮಸ್ಯೆ ಸರಿಪಡಿಸಿ

01:33 PM Jan 06, 2025 | Team Udayavani |

ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಮಾತ್ರವಲ್ಲದೆ ತಾಲೂಕಿನ ವಿವಿಧೆಡೆ ಕೂಡ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಇದೆ. ಸರಿಪಡಿಸಲು ಎಷ್ಟು ಸಮಯ ಬೇಕಾಗುತ್ತದೆ ಎಂಬ ಮಾಹಿತಿ ಯಾರಿಗೂ ಇಲ್ಲ.

Advertisement

ಈಚೆಗೆ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಉತ್ತರಿಸಬೇಕಾದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗುತ್ತಿಗೆದಾರ ಸಂಸ್ಥೆಗಳ ಪ್ರತಿನಿಧಿಗಳನ್ನು ಕಳುಹಿಸಿದ್ದರು. ಕುಂದಾಪುರ ನಗರದಲ್ಲಿ ಅರ್ಧ ಭಾಗ ಐಆರ್‌ಬಿ ಹಾಗೂ ಅರ್ಧ ಭಾಗ ನವಯುಗ ಸಂಸ್ಥೆ ಕಾಮಗಾರಿ ನಡೆಸಿದೆ. ಈ ಪೈಕಿ ನವಯುಗ ಸಂಸ್ಥೆ ನಿರ್ವಹಣೆ ಮಾಡುವಲ್ಲಿ ಸರ್ವಿಸ್‌ ರಸ್ತೆಗಳ ಸಮಸ್ಯೆಯಿದೆ. ಚರಂಡಿ ಸಮಸ್ಯೆಯಿದ್ದು, ರಸ್ತೆಯಲ್ಲೇ ನೀರು ಹರಿಯುತ್ತಿದೆ.

ಶಾಸಕರಾಗಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟರು ಸ್ವಂತ ಖರ್ಚಿಯಲ್ಲಿ ಇದರ ದುರಸ್ತಿ ಮಾಡಿಸಿದ್ದರು. ಆಗ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರು ವೀಕ್ಷಿಸಿ ಸರಿಪಡಿಸುವ ಭರವಸೆ ನೀಡಿದ್ದರು. ಈಗ ಹಾಲಾಡಿಯವರು ಮಾಜಿಯಾಗಿ ಎರಡು ವರ್ಷಗಳಾಗುತ್ತಾ ಬಂದಿದೆ. ಹೊಸ ಶಾಸಕರು ಸೂಚನೆ ನೀಡಿ ವರ್ಷಗಳಾಗುತ್ತಾ ಬಂತು. ಅವರು ನೀಡಿದ ಸೂಚನೆ ಈವರೆಗೂ ಅನುಷ್ಠಾನ ಆಗಿಲ್ಲ. ಒಂದು ಗುತ್ತಿಗೆದಾರ ಸಂಸ್ಥೆ ಉಪವಿಭಾಗದ ನಗರದಲ್ಲಿ ಇಂತಹ ಸಮಸ್ಯೆ ಇದ್ದರೂ ಕನಿಷ್ಠ ಸ್ಪಂದಿಸುವ ಸೌಜನ್ಯವನ್ನೂ ತೋರಿಸುವುದಿಲ್ಲ, ಜನಪ್ರತಿನಿಧಿಗಳ ಮಾತಿಗೆ ಗೋಣಲ್ಲಾಡಿಸುವುದು ಬಿಟ್ಟರೆ ಬೇರೇನೂ ಮಾಡುವುದಿಲ್ಲ ಎಂದರೆ ವ್ಯವಸ್ಥೆಯ ಕುರಿತು ಜನರಿಗೆ ಅಸಹನೆ ಮೂಡುವುದು ತಪ್ಪಲ್ಲ. ಟೋಲ್‌ ರಿಯಾಯಿತಿ ಮಾಡಲು ಸಾಧ್ಯವಿಲ್ಲದ, ಹೊಂಡ ಗುಂಡಿಯ ನಿರ್ವಹಣೆ ಇಲ್ಲದ ರಸ್ತೆಯಲ್ಲಿ ವಾಹನ ಕೊಂಡೊಯ್ದದ್ದಕ್ಕೂ ಟೋಲ್‌ ಕೇಳುವ ಸಂಸ್ಥೆಯಿಂದ ಇನ್ನೇನು ಅಭಿವೃದ್ಧಿ ನಿರೀಕ್ಷೆ ಮಾಡಬಹುದು? ಎಂಬ ಸಾರ್ವಜನಿಕರ ಪ್ರಶ್ನೆ ಸರಿಯಾದುದೇ ಆಗಿದೆ.

ಇತ್ತ ಕೆಎಸ್‌ಆರ್‌ಟಿಸಿ ಬಳಿ ಸರ್ವಿಸ್‌ ರಸ್ತೆ ಆಗಿಲ್ಲ. ಭೂಸ್ವಾಧೀನ ಆಗಿಯೇ ಮೂರು ವರ್ಷಗಳಾಗುತ್ತ ಬಂದವು. ಇಷ್ಟು ಬಾರಿ ಸಭೆಗಳಾದರೂ ಈ ಬಗ್ಗೆ ಸ್ಪಷ್ಟನೆ ಇರಲಿಲ್ಲ. ಈಗ ಸರ್ವೇ ಇಲಾಖೆಯವರು ಮಾಹಿತಿ ನೀಡಿ ಪರಿಹಾರ ವ್ಯಾಜ್ಯ ನ್ಯಾಯಾಲಯದ ಕಟೆಕಟೆ ಏರಿದೆ ಎನ್ನುತ್ತಿದ್ದಾರೆ. ಹೆದ್ದಾರಿಗೆ ಭೂಸ್ವಾಧೀನ ಮಾಡುವಾಗಲೇ ಭೂಸ್ವಾಧೀನ ಮಾಡದೆ ಇದ್ದದ್ದು, 50 ಮೀ. ರಸ್ತೆಯನ್ನು ಯಾವ ಗುತ್ತಿಗೆದಾರ ಮಾಡಬೇಕು ಎಂದು ತೀರ್ಮಾನಿಸದೆ ಇದ್ದದ್ದು ಅಧಿಕಾರಿಗಳ ತಪ್ಪು. ಇಂತಹ ತಪ್ಪುಗಳಿಗೆ ಕೂಡಲೇ ಪರಿಹಾರ ಸಿಗಬೇಕಿದೆ. ಜನರಿಗೆ ಮೂಲ ಸೌಕರ್ಯ ಒದಗಿಸುವಲ್ಲಿ ಯಾವುದೇ ರೀತಿಯ ವಿಳಂಬ ಸಲ್ಲದು.

Advertisement

Udayavani is now on Telegram. Click here to join our channel and stay updated with the latest news.

Next