ಥಾಣೆ: ವಿವಿಧ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರ ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆ ಕಂಡುಬಂದಿದೆ ಎಂಬುದಾಗಿ ಥಾಣೆಯ “ಆಕೃತಿ ಹಾಸ್ಪಿಟಲ್’ನ ವೈದ್ಯ ಡಾ| ವಿವೇಕ್ ತ್ರಿವೇದಿ ಹೇಳಿದ್ದಾರೆ.
ಜತೆಗೆ, ಅವರಿಗೆ ಜೀವನ ಪರ್ಯಂತ ಉಚಿತ ಚಿಕಿತ್ಸೆ ನೀಡಲು ಆಸ್ಪತ್ರೆಯ ಉಸ್ತುವಾರಿಯಾಗಿರುವ ಎಸ್. ಸಿಂಗ್ ನಿರ್ಧರಿಸಿದ್ದಾರೆ ಎಂದರು.
“ನಾವು ವಿನೋದ್ ಕಾಂಬ್ಳಿ ಅವರಿಗೆ ಜೀವನ ಪರ್ಯಂತ ಉಚಿತ ಚಿಕಿತ್ಸೆ ನೀಡಲಿದ್ದೇವೆ. ಹೀಗಾಗಿ ಅವರ ಬಗ್ಗೆ ಯಾರೂ ಚಿಂತಿಸಬೇಕಿಲ್ಲ’ ಎಂದು ತ್ರಿವೇದಿ ಹೇಳಿದರು.
ಆಸ್ಪತ್ರೆಯ ಚಿಕಿತ್ಸೆ ಕುರಿತು ಮಾತನಾಡಿದ ವಿನೋದ್ ಕಾಂಬ್ಳಿ, “ವೈದ್ಯರು ಹೇಳುವುದನ್ನು ಚಾಚೂ ತಪ್ಪದೇ ಪಾಲಿಸುತ್ತೇನೆ. ಈ ವೈದ್ಯರಿಂದಾಗಿ ನಾನಿಂದು ಜೀವಂತವಾಗಿದ್ದೇನೆ’ ಎಂದು ಭಾವುಕರಾದರು.
“ನನಗೀಗ ಚೇತರಿಕೆಯ ಅನುಭವ ಆಗುತ್ತಿದೆ. ನಾನು ಕ್ರಿಕೆಟನ್ನು ಬಿಡುವುದಿಲ್ಲ. ನಾನು ಹೊಡೆದ ಶತಕ ಹಾಗೂ ದ್ವಿಶತಕಗಳ ಸಂಖ್ಯೆಯನ್ನು ನೆನಪಿಸಿಕೊಳ್ಳುತ್ತಿದ್ದೇನೆ. ನಮ್ಮ ಕುಟುಂಬದಲ್ಲಿ ಮೂವರು ಎಡಗೈ ಆಟಗಾರರಿದ್ದರು. ನಾನು ಸಚಿನ್ ತೆಂಡುಲ್ಕರ್ ಅವರಿಗೆ ಕೃತಜ್ಞನಾಗಿದ್ದೇನೆ. ಅವರ ಆಶೀರ್ವಾದ ಸದಾ ನನ್ನ ಮೇಲಿರಲಿದೆ’ ಎಂದರು.
ಶೀಘ್ರ ಬಿಡುಗಡೆ: ಕಾಂಬ್ಳಿ ವಿಶ್ವಾಸ
ಥಾಣೆ: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಇನ್ನೊಂದೆರಡು ದಿನಗಳಲ್ಲಿ ಆಸ್ಪತ್ರೆಯಿಂದ ಹೊರಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೂತ್ರನಾಳದ ಸೋಂಕಿನಿಂದ ಇಲ್ಲಿನ “ಆಕೃತಿ ಆಸ್ಪತ್ರೆ’ಗೆ ದಾಖಲಾಗಿರುವ ಅವರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ.
ಸದ್ಯ ಅವರ ಮೆದುಳಿನ ಸ್ಥಿತಿ ಸ್ಥಿಮಿತದಲ್ಲಿಲ್ಲ ಎಂದು ವೈದ್ಯ ವಿವೇಕ್ ದ್ವಿವೇದಿ ಹೇಳಿದ್ದಾರೆ. ಕಾಂಬ್ಳಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ಆಸ್ಪತ್ರೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರ ಮೆದುಳಲ್ಲಿ ರಕ್ತ ಹೆಪ್ಪುಗಟ್ಟಿದೆ ಎಂದು ಆರಂಭಿಕ ವರದಿಗಳಲ್ಲಿ ಹೇಳಲಾಗಿತ್ತು.