Advertisement

ಖಾಸಗಿ ಫ್ಲೆಕ್ಸ್‌ಗಳಿಗೂ ಬಿತ್ತು ಕೊಕ್ಕೆ!

03:34 PM Mar 29, 2018 | Team Udayavani |

ರಾಯಚೂರು: ನೀತಿ ಸಂಹಿತೆ ನೆಪದಲ್ಲಿ ಸರ್ಕಾರಿ ಮತ್ತು ರಾಜಕಾರಣಿಗಳ ಜಾಹೀರಾತು ಫ್ಲೆಕ್ಸ್‌ಗಳ ಜತೆಗೆ ಖಾಸಗಿ ಜಾಹೀರಾತು ಫಲಕಗಳನ್ನು ತೆರವು ಮಾಡಿದ್ದು, ತೀವ್ರ ಟೀಕೆಗೆ ಗುರಿಯಾಗಿದೆ.

Advertisement

ಕೇಂದ್ರ ಚುನಾವಣಾ ಆಯೋಗ ಮಾ.27ರಂದು ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ದಿನಾಂಕ ಘೋಷಿಸುತ್ತಿದ್ದಂತೆ ನೀತಿ ಸಂಹಿತೆಯನ್ನು ತಕ್ಷಣಕ್ಕೆ ಜಾರಿಗೆ ತರುವಂತೆ ಆಯೋಗ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸರ್ಕಾರ ಮತ್ತು ರಾಜಕಾರಣಿಗಳು ಪ್ರಚಾರಾರ್ಥವಾಗಿ ಅಳವಡಿಸಿದ ಎಲ್ಲ ಜಾಹೀರಾತುಗಳನ್ನು ತೆರವುಗೊಳಿಸಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. 

ತೆರವಿಗೆ ಮುಂದಾದ ಕಾರ್ಮಿಕರು ಸರ್ಕಾರಿ ಜಾಹೀರಾತುಗಳ ಜತೆಗೆ ಖಾಸಗಿ ಫ್ಲೆಕ್ಸ್‌, ಬ್ಯಾನರ್‌ಗಳನ್ನು ಕೂಡ ತೆರವು ಮಾಡಿದ್ದಾರೆ. ಇದರಿಂದ ಈಗಾಗಲೇ ಜಾಹೀರಾತಿಗಾಗಿ ಮುಂಗಡ ಹಣ ಪಾವತಿಸಿದವರು ಜಿಲ್ಲಾಡಳಿತದ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ.

ನಗರದ ಬಸವೇಶ್ವರ ವೃತ್ತ, ಅಂಬೇಡ್ಕರ್‌ ವೃತ್ತ, ಗಂಜ್‌ ರಸ್ತೆ, ಚಂದ್ರಮೌಳೇಶ್ವರ ವೃತ್ತ, ಪಟೇಲ ರಸ್ತೆ, ಬಿಆರ್‌ಬಿ ವೃತ್ತ, ಸ್ಟೇಶನ್‌ ರಸ್ತೆ ಮತ್ತು ವೃತ್ತ, ಲಿಂಗಸುಗೂರು ರಸ್ತೆ ಹೀಗೆ ನಗರದ ಪ್ರಮುಖ ವೃತ್ತಗಳು, ರಸ್ತೆ ಮತ್ತು ಜಿಲ್ಲೆಯ ಎಲ್ಲ ನಗರ, ಪಟ್ಟಣಗಳಲ್ಲೂ ಮಂಗಳವಾರದಿಂದಲೇ ಫ್ಲೆಕ್ಸ್‌ಗಳ ತೆರವು ಮಾಡಲಾಗುತ್ತಿದೆ.

ಮುಂಗಡ ಹಣ ಪಾವತಿ: ಜಾಹೀರಾತು ಫಲಕಗಳ ಅಳವಡಿಕೆಗೆ ಖಾಸಗಿ ಏಜೆನ್ಸಿಗಳಿಗೆ ಪರವಾನಗಿ ನೀಡಲಾಗಿರುತ್ತದೆ. ಏಜೆನ್ಸಿಗಳವರು ಜಾಹೀರಾತುಗಳಿಗಾಗಿ ಸಂಸ್ಥೆಗಳಿಂದ ಅಥವಾ ಸಾರ್ವಜನಿಕರಿಂದ ತಿಂಗಳಿಗೆ ಇಂತಿಷ್ಟು ಎಂದು ಹಣ ಪಡೆದಿರುತ್ತಾರೆ. ನಗರಸಭೆಗೆ ವರ್ಷಕ್ಕೆ ಇಂತಿಷ್ಟು ಎಂದು ತೆರಿಗೆ ಪಾವತಿಸುತ್ತಾರೆ.

Advertisement

ಆದರೆ, ನೀತಿ ಸಂಹಿತೆ ನೆಪದಲ್ಲಿ ಹೀಗೆ ಎಲ್ಲ ಜಾಹೀರಾತು ತೆಗೆದಿರುವುದರಿಂದ ಏಜೆನ್ಸಿಗಳು ಅಡಕತ್ತರಿಗೆ ಸಿಲುಕುವಂತಾಗಿದೆ. ಅತ್ತ ಜಾಹೀರಾತು ಸಂಸ್ಥೆಗಳಿಗೂ ಇತ್ತ ನಗರಸಭೆಗೂ ಹಣ ಪಾವತಿಸಬೇಕಿದೆ. ಅಲ್ಲದೇ, ಕೆಲ ಸಂಸ್ಥೆಗಳು ಎರಡೂಮೂರು ತಿಂಗಳಿನ ಹಣ ಮುಂಗಡವಾಗಿ ಪಾವತಿಸಿದ್ದರಿಂದ ಸಮಸ್ಯೆ ತಲೆದೋರಿದೆ.

ನಗರದಲ್ಲಿ ನನಗೆ ಸೇರಿದ 40ಕ್ಕೂ ಹೆಚ್ಚು ಬೋರ್ಡ್‌ಗಳಿವೆ. ಆದರೆ, ಯಾವುದೇ ಮಾಹಿತಿ ಇಲ್ಲದೇ ಸಾಕಷ್ಟು ಫ್ಲೆಕ್ಸ್‌ ತೆರವು
ಮಾಡಲಾಗಿದೆ. ಆದರೆ, ಅದರಲ್ಲಿ ಖಾಸಗಿ ಜಾಹೀರಾತುದಾರರು ಸಾಕಷ್ಟು ಜನ ಇದ್ದರು. ಹೀಗಾಗಿ ಅವರಿಗೆ ಉತ್ತರಿಸಲಾಗದೆ ಸಾಕಾಗಿದೆ. 
 ಹೆಸರು ಹೇಳಲಿಚ್ಛಿಸದ ಫ್ಲೆಕ್ಸ್‌ ಬೋರ್ಡ್‌ ಮಾಲಿಕ

ಚುನಾವಣೆಗೆ ಅಡ್ಡಿಯಾಗುವ ಫ್ಲೆಕ್ಸ್‌ಗಳ ತೆರವಿಗೆ ಸೂಚಿಸಲಾಗಿತ್ತು. ಆದರೆ, ಡಿ ಗ್ರೂಪ್‌ ನೌಕರರು ತಿಳಿವಳಿಕೆ ಇಲ್ಲದೇ ಎಲ್ಲವನ್ನು ತೆರವು ಮಾಡಿರಬಹುದು. ಪರವಾನಗಿ ಇದ್ದವರು ಫ್ಲೆಕ್ಸ್‌ಗಳನ್ನು ಅಳವಡಿಸಬಹುದು. ಆದರೆ, ಚುನಾವಣೆ ಮೇಲೆ ಪರಿಣಾಮ ಬೀರುವಂತಿರಬಾರದು.
 ಡಾ| ಬಗಾದಿ ಗೌತಮ್‌ ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next