ಹೊಸದಿಲ್ಲಿ: ದೇಶದ 11 ರಾಜ್ಯಗಳ 31 ವಿಧಾನಸಭಾ ಕ್ಷೇತ್ರಗಳಿಗೆ ಬುಧವಾರ ಉಪಚುನಾವಣೆ ನಡೆದಿದ್ದು, ಈ ವೇಳೆ ಪಶ್ಚಿಮ ಬಂಗಾಲದಲ್ಲಿ ಭಾರೀ ಹಿಂಸಾಚಾರ ನಡೆದಿದೆ. ರಾಜಸ್ಥಾನದಲ್ಲೂ ಗಲಾಟೆ ನಡೆದಿದ್ದು, ಇದನ್ನು ಹೊರತುಪಡಿಸಿದರೆ ಬಹುತೇಕ ರಾಜ್ಯಗಳಲ್ಲಿ ಮತದಾನ ಶಾಂತಿಯುತವಾಗಿತ್ತು ಎಂದು ಚುನಾವಣ ಆಯೋಗ ತಿಳಿಸಿದೆ.
ಪಶ್ಚಿಮ ಬಂಗಾಲದ 6 ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಭಟಪಾರಾದಲ್ಲಿ ದುಷ್ಕರ್ಮಿಗಳು ಕಚ್ಚಾಬಾಂಬ್ ದಾಳಿ ನಡೆಸಿದ್ದಾರೆ. ಇದರಿಂದಾಗಿ ಟಿಎಂಸಿ ನಾಯಕ ಅಶೋಕ್ ಸಾಹು ಮೃತಪಟ್ಟಿದ್ದಾರೆ. ಮದಾರಿಹಾಟ್‌ನಲ್ಲಿ ಬಿಜೆಪಿ ಅಭ್ಯರ್ಥಿಯ ಕಾರನ್ನೇ ಕಿಡಿಗೇಡಿಗಳು ಧ್ವಂಸಗೈದಿದ್ದಾರೆ. ಇದರ ಬೆನ್ನಲ್ಲೇ ಟಿಎಂಸಿ ಮತ್ತು ಬಿಜೆಪಿ ನಡುವೆ ರಾಜಕೀಯ ಕೆಸರೆರಚಾಟ ಆರಂಭವಾಗಿದ್ದು, ಒಬ್ಬರನ್ನೊಬ್ಬರು ದೂಷಿಸಿದ್ದಾರೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹಾಳಾಗಿದೆ ಎಂದು ಬಿಜೆಪಿ ಆರೋಪಿಸಿದರೆ, ರಾಜ್ಯ ಸರಕಾರಕ್ಕೆ ಮಸಿ ಬಳಿಯುವ ಯತ್ನವನ್ನು ಬಿಜೆಪಿ ಮಾಡುತ್ತಿದೆ ಎಂದು ಟಿಎಂಸಿ ಹೇಳಿದೆ.
ಪಶ್ಚಿಮ ಬಂಗಾಲದ ಸಿತಾಯಿ, ಮದಾರಿಹಾಟ್, ನೈಹಾತಿ, ಹರೋರಾ, ಮೇದಿನಿಪುರ ಮತ್ತು ತಲ್‌ದಾಂಗ್ರ ಕ್ಷೇತ್ರಗಳಲ್ಲಿ ಚುನಾವಣೆ ನಡೆದಿದ್ದು, ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಹಿಂಸಾಚಾರ ವರದಿಯಾಗಿದೆ.
10 ರಾಜ್ಯಗಳಲ್ಲಿ ಚುನಾವಣೆ: ಕರ್ನಾಟದ 3 ವಿಧಾನ ಸಭಾ ಕ್ಷೇತ್ರಗಳು ಸೇರಿದಂತೆ ರಾಜಸ್ಥಾನದ 7, ಪಶ್ಚಿಮ ಬಂಗಾಲದ 6, ಅಸ್ಸಾಂನ 5, ಬಿಹಾರದ 4, ಮಧ್ಯಪ್ರದೇಶದ 2, ಛತ್ತೀಸ್‌ಗಢ, ಗುಜರಾತ್, ಕೇರಳ ಮತ್ತು ಮೇಘಾಲಯದ ತಲಾ 1 ಸ್ಥಾನಗಳಿಗೆ ಚುನಾವಣೆ ನಡೆದಿದೆ.
ಮೇಘಾಲಯದಲ್ಲಿ ಗರಿಷ್ಠ ಶೇ.90ರಷ್ಟು ಮತದಾ ನವಾಗಿದೆ. ಉಳಿದಂತೆ ಪ.ಬಂಗಾಲ (ಶೇ.66.35), ಅಸ್ಸಾಂ (ಶೇ.72), ರಾಜಸ್ಥಾನ (ಶೇ.53), ಬಿಹಾರ (ಶೇ.54), ಛತ್ತೀಸ್‌ಗಢ (ಶೇ.50.5), ಗುಜರಾತ್ (ಶೇ.68), ಮಧ್ಯಪ್ರದೇಶದಲ್ಲಿ ಶೇ.74ರಷ್ಟು ಮತ ದಾನವಾಗಿದೆ. ಮತ ಎಣಿಕೆ ನ.23ರಂದು ನಡೆಯ ಲಿದ್ದು, ಅಂದೇ ಫಲಿತಾಂಶ ಘೋಷಣೆಯಾಗಲಿದೆ.
ಉಪಚುನಾವಣೆ ನಡೆಯುತ್ತಿರುವ ಬಹುತೇಕ ಕ್ಷೇತ್ರಗಳು ಲೋಕಸಭಾ ಚುನಾವಣೆಯ ಬಳಿಕ ಖಾಲಿ ಯಾಗಿವೆ. ಇಲ್ಲಿ ಶಾಸಕರಾಗಿದ್ದವರು ಲೋಕಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಇವು ಖಾಲಿಯಾಗಿದ್ದವು.