ರಾಂಚಿ: ಝಾರ್ಖಂಡ್ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಬುಧವಾರ ನಡೆಯಲಿದ್ದು, ಒಟ್ಟು 81 ಕ್ಷೇತ್ರಗಳ ಪೈಕಿ 43ಕ್ಕೆ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. ರಾಜ್ಯದಲ್ಲಿ ಮತ್ತೆ ಆಡಳಿತದ ಚುಕ್ಕಾಣಿ ಹಿಡಿಯಲು ಜೆಎಂಎಂ ನೇತೃತ್ವದ ವಿಪಕ್ಷಗಳ ಇಂಡಿಯಾ ಒಕ್ಕೂಟ ಯತ್ನಿಸುತ್ತಿದ್ದರೆ, ಬುಡಕಟ್ಟು ಪ್ರಾಬಲ್ಯದ ರಾಜ್ಯವನ್ನು ತನ್ನ ತೆಕ್ಕೆಗೆ ಪಡೆಯಲು ಬಿಜೆಪಿ ನೇತೃತ್ವದ ಎನ್‌ಡಿಎ ಹವಣಿಸುತ್ತಿದೆ.
ರಾಜ್ಯದ ಒಟ್ಟಾರೆ 2.60 ಕೋಟಿ ಮತದಾರರ ಪೈಕಿ 1.37 ಕೋಟಿ ಅರ್ಹ ಮತದಾರರು ಈ ಹಂತದಲ್ಲಿ ಹಕ್ಕು ಚಲಾಯಿಸಲಿದ್ದಾರೆ. 683 ಅಭ್ಯರ್ಥಿಗಳು ಕಣದಲ್ಲಿದ್ದು, ಇವರ ಭವಿಷ್ಯವನ್ನು ಬುಧವಾರ ಸಂಜೆ ವೇಳೆಗೆ ಇವಿಎಂಗಳಲ್ಲಿ ಭದ್ರವಾಗಲಿವೆ. ನ.20ರಂದು ಉಳಿದ ಕ್ಷೇತ್ರಗಳಿಗೆ 2ನೇ ಮತ್ತು ಕೊನೇ ಹಂತದಲ್ಲಿ ಮತದಾನ ನಡೆಯಲಿದ್ದು, ನ.23ರಂದು ಫಲಿತಾಂಶ ಪ್ರಕಟವಾಗಲಿದೆ.
ಕಣದಲ್ಲಿರುವ ಪ್ರಮುಖರು: ಸೆರಾಯಿಕೆಲ್ಲ, ರಾಂಚಿ, ಜೆಮ್ಶೆಡ್‌ಪುರ ಪಶ್ಚಿಮ, ಜಗನ್ನಾಥ್‌ಪುರ, ಜೆಮ್ಶೆಡ್‌ಪುರ ಪೂರ್ವದಂಥ ಹೈಪ್ರೊಫೈಲ್ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಸೆರಾಯಿಕೆಲ್ಲ ಕ್ಷೇತ್ರದಲ್ಲಿ ಮಾಜಿ ಸಿಎಂ ಚಂಪಯಿ ಸೊರೇನ್ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಜೆಮ್ಶೆಡ್‌ಪುರ ಪೂರ್ವದಲ್ಲಿ ಕಾಂಗ್ರೆಸ್‌ನ ಅಜಯ್ ಕುಮಾರ್ ಮತ್ತು ಬಿಜೆಪಿಯ ಪೂರ್ಣಿಮಾ ದಾಸ್ ಸಾಹು ಮಧ್ಯೆ ಪೈಪೋಟಿಯಿದೆ. ಜಗನ್ನಾಥ್‌ಪುರದಲ್ಲಿ ಮಾಜಿ ಸಿಎಂ ಮಧು ಕೋಡಾ ಪತ್ನಿ ಗೀತಾ ಕೋಡಾ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ.
ಇಂದು ವಿವಿಧ ರಾಜ್ಯದ 32 ವಿಧಾನಸಭೆ, ವಯನಾಡ್ ಲೋಕಸಭೆ ಕ್ಷೇತ್ರಕ್ಕೆ ಬೈಎಲೆಕ್ಷನ್
ಹೊಸದಿಲ್ಲಿ: ಝಾರ್ಖಂಡ್‌ನಲ್ಲಿ ಮೊದಲ ಹಂತದ ಮತದಾನದ ಜತೆಗೆ 11 ರಾಜ್ಯಗಳ 32 ವಿಧಾನಸಭಾ ಕ್ಷೇತ್ರಗಳ ಹಾಗೂ ಕೇರಳದ ವಯನಾಡ್ ಲೋಕಸಭೆ ಕ್ಷೇತ್ರದ ಉಪಚುನಾವಣೆಯೂ ಬುಧವಾರ ನಡೆಯಲಿದೆ. ರಾಜಸ್ಥಾನದ 7, ಪಶ್ಚಿಮ ಬಂಗಾಲದ 6, ಅಸ್ಸಾಂನ 5, ಬಿಹಾರದ 4, ಕರ್ನಾಟಕದ 3, ಮಧ್ಯಪ್ರದೇಶದ 2 ಮತ್ತು ಛತ್ತೀಸ್‌ಗಢ, ಗುಜರಾತ್, ಕೇರಳ, ಮೇಘಾಲಯ ಹಾಗೂ ಉತ್ತರಾಖಂಡದ ತಲಾ 1 ಅಸೆಂಬ್ಲಿ ಕ್ಷೇತ್ರ ಗಳಿಗೆ ಮತದಾನ ನಡೆಯಲಿದೆ. ನ.23ರಂದು ಫಲಿತಾಂಶ ಪ್ರಕಟವಾಗಲಿದೆ.