ಶ್ರೀಕೃಷ್ಣ ಗಂಭೀರವಾಗಿ ಸುಮ್ಮನೆ ನಗೆಯಾಡುತ್ತಾನೆ (ತಮುವಾಚ ಹೃಷೀಕೇಶಃ ಪ್ರಹಸನ್ನಿವ ಭಾರತ| 2-10). ಕೌರವರನ್ನು ಮಹಾದುಷ್ಟರೆಂದೂ, ಅವರನ್ನು ಕೊಂದರೆ ಪಾಪ ಬರುತ್ತದೆ ಎಂದೂ, ಒಮ್ಮೆ ನಾನು ಎಂದೂ, ಒಮ್ಮೆ ನಾವು ಎಂದೂ ಹೀಗೆ ಪರಸ್ಪರ ವಿರುದ್ಧವಾದ ಮಾತುಗಳನ್ನು ಅರ್ಜುನ ಆಡಿದ್ದ. ಸೇನಯೋರುಭಯೋರ್ಮಧ್ಯೇ ವಿಷೀದಂತಮಿದಂ ವಚಃ|| (2-10) ಇದಕ್ಕೆ ಮಧ್ವಾಚಾರ್ಯರು ವ್ಯಾಖ್ಯಾನ ಮಾಡುವಾಗ ದುಷ್ಟ ಚಿಂತನೆ, ವ್ಯಾಮೋಹ ಜಾಲ, ಜಾಗೃತವಾದ ಆತ್ಮ ಇವೆರಡು ಸೇನೆಗಳ ನಡುವೆ ಅರ್ಜುನ ತೊಳಲಾಡುತ್ತಿದ್ದಾನೆ ಎಂದು ಹೇಳಿದ್ದಾನೆ. ಮೋಹ ಮತ್ತು ವ್ಯಾಮೋಹ ಇವೆರಡರ ನಡುವೆ ವ್ಯತ್ಯಾಸವಿದೆ. ಬಂಧುಪ್ರಜ್ಞೆ ತಪ್ಪಲ್ಲ, ವಿಶೇಷವಾದ ಮೋಹ (ವ್ಯಾಮೋಹ) ತಪ್ಪು. ಮೋಹವೆಂಬುದು ಜಾಲ= ಬಲೆ. ಆ ಬಲೆಯೊಳಗೆ ಹೋದರೆ ಹೊರಗೆ ಬರುವುದು ಕಷ್ಟ. ಅದು ವಿವೇಕಶಕ್ತಿಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ, ಯಾವುದು ಸರಿ? ಯಾವುದು ತಪ್ಪು? ಎಂಬ ನಿರ್ಣಯಕ್ಕೆ ಬರದಂತೆ ತಡೆಯುತ್ತದೆ. ಬಂಧುತ್ವವೇ ಸರಿ ಎಂದು ಮನಸ್ಸು ಹೇಳುತ್ತದೆ, ಜಾಗೃತ ಮನಸ್ಸು ತಪ್ಪು ಎಂದು ಹೇಳುತ್ತದೆ. ಈ ಕಾರಣಕ್ಕಾಗಿ ವೈದ್ಯಕೀಯ ನೀತಿಯಂತೆ ವೈದ್ಯರ ಹತ್ತಿರದ ಬಂಧುಗಳ (ಗಂಡ, ಹೆಂಡತಿ, ತಂದೆ, ತಾಯಿ) ಶಸ್ತ್ರಚಿಕಿತ್ಸೆ ನಡೆಸುವಾಗ ಸ್ವತಃ ತಜ್ಞ ವೈದ್ಯರಾದರೂ ಬೇರೆ ತಜ್ಞ ವೈದ್ಯರಿಂದ ಮಾಡುವುದಿದೆ. ಬಂಧುತ್ವದ ಮಾನಸಿಕತೆಯಿಂದ ತೊಂದರೆಯಾಗುತ್ತದೆ ಎಂಬುದು ಇದಕ್ಕೆ ಕಾರಣ.
-ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811