ಬೆಳ್ತಂಗಡಿ: ಸರಕಾರಿ ಶಾಲಾ ಮಕ್ಕಳ ದಾಖಲಾತಿ ಮತ್ತು ಹಾಗೂ ಪೌಷ್ಠಿಕಾಂಶ ವೃದ್ಧಿಸುವ ಸಲುವಾಗಿ ಅಕ್ಷರ ದಾಸೋಹ ಯೋಜನೆಯಡಿ ಮಧ್ಯಾಹ್ನದ ಬಿಸಿಯೂಟದ ಕಿಟ್ ಕೋವಿಡ್ ಕಾರಣದಿಂದಾಗಿ ಪ್ರಸಕ್ತ ಮಕ್ಕಳ ಮನೆ ಮನೆಗೆ ತಲುಪಿಸುವ ಕೆಲಸ ಇಲಾಖೆಯಿಂದ ನಡೆಯುತ್ತಿದೆ. ಶಾಲೆ ಪುನರಾರಂಭವಾಗುವಲ್ಲಿ ಸರಕಾರ ಸ್ಪಷ್ಟ ನಿರ್ದೇಶನ ಬಳಿಕ ಜೂನ್-ಆಗಸ್ಟ್ ತಿಂಗಳ ಆಹಾರ ವಿತರಣೆ ನಡೆಯಲಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್‌ನಿಂದ ಮಕ್ಕಳು ಶಾಲೆಗೇ ಬಾರದಿರುವ ಸನ್ನಿವೇಶವಿರುವುದರಿಂದ ಮಕ್ಕಳು ಪೌಷ್ಠಿಕತೆಯಿಂದ ಹಿಂದುಳಿ ಯಬಾರದು ಎಂಬ ಉದ್ದೇಶದಿಂದ ಪ್ರತಿ ಶಾಲೆಗಳಿಗೆ ಆಹಾರ ಕಿಟ್ ತಲುಪಿಸಲಾಗುತ್ತಿದೆ. ದ.ಕ. ಜಿಲ್ಲೆಯಲ್ಲಿ 1,409 ಸರಕಾರಿ ಅನುದಾನಿತ, ಹಿ.ಪ್ರಾ., ಪ್ರೌಢಶಾಲೆಗಳ 1 ಲಕ್ಷದ 52 ಸಾವಿರ ಮಕ್ಕಳು ಯೋಜನೆಯ ಲಾಭ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಒಟ್ಟು 55,113 ಶಾಲೆಗಳು ಅಕ್ಷರ ದಾಸೋಹದಡಿ ಬರುತ್ತವೆ.
ಎಪ್ರಿಲ್-ಮೇ ತಿಂಗಳ ಆಹಾರ ಧಾನ್ಯವನ್ನು ಮಕ್ಕಳ ಮನೆಗಳಿಗೆ ಹೆತ್ತವರ ಮೂಲಕ ಕೆಲವೆಡೆ ವಿದ್ಯಾಗಮಕ್ಕೆ ತೆರಳುವ ಶಿಕ್ಷಕರೇ ವಿತರಿಸಿದ್ದಾರೆ. ಪ್ರಸಕ್ತ ಜೂನ್- ಆಗಸ್ಟ್ ತಿಂಗಳ ಆಹಾರ ವಿತರಣೆಯಾಗಲು ಬಾಕಿ ಉಳಿದಿವೆ. ಶಾಲೆ ಆರಂಭಿಸುವಲ್ಲಿ ಸರಕಾರದ ಮಾರ್ಗಸೂಚಿಗೆ ಕಾಯುತ್ತಿದ್ದು, ಶಾಲೆ ಆರಂಭ ವಿಳಂಬವಾದಲ್ಲಿ ಮತ್ತೆ ಮಕ್ಕಳ ಮನೆಗೆ ಆಹಾರ ಧಾನ್ಯ ತಲುಪಲಿದೆ.
1ರಿಂದ 5ನೇ ತರಗತಿವರೆಗೆ ಪ್ರತಿ ಮಗುವಿಗೆ ಪ್ರತಿ ದಿನದ ಲೆಕ್ಕಾಚಾರದಂತೆ 500 ಗ್ರಾಂ. ಹಾಲಿನ ಹುಡಿ, 500 ಗ್ರಾಂ. ತೊಗರಿಬೇಳೆ, 100 ಗ್ರಾಂ. ಅಕ್ಕಿ ನೀಡಲಾಗುತ್ತಿದೆ. 6ರಿಂದ 10ನೇ ತರಗತಿವರೆಗೆ 500 ಗ್ರಾಂ. ಹಾಲಿನ ಹುಡಿ, 600 ಗ್ರಾಂ. ತೊಗರಿಬೇಳೆ, 150 ಗ್ರಾಂ. ಅಕ್ಕಿ ಪ್ರತಿ ಮಗುವಿಗೆ ವಿತರಿಸಲಾಗುತ್ತದೆ.
ಎಪ್ರಿಲ್, ಮೇ ತಿಂಗಳಲ್ಲಿ ದ.ಕ. ಜಿಲ್ಲೆಯಲ್ಲಿ 1ರಿಂದ 10ನೇ ತರಗತಿವರೆಗೆ ಅಕ್ಕಿ 5,475 ಕ್ವಿಂಟಲ್, ಹಾಲಿನ ಹುಡಿ 67,298 ಕೆ.ಜಿ., ತೊಗರಿ ಬೇಳೆ 5,166 ಕ್ವಿಂಟಲ್ ವಿತರಿಸಲಾಗಿದೆ. 6ರಿಂದ 10ನೇ ತರಗತಿಗೆ ವಿತರಿಸಬೇಕಾಗಿದ್ದ ಎಣ್ಣೆ ಸರಬರಾಜು ಆಗದೇ ಇರುವುದರಿಂದ ವಿತರಣೆಯಾಗಿಲ್ಲ. ಉಳಿದಂತೆ ಪ್ರತಿ ಶಾಲೆಗಳಲ್ಲಿ ಅಕ್ಷರದಾಸೋಹ ಸಿಬಂದಿ ಸೇರಿ ವಿತರಣೆಗೆ ಮುಂದಾಗಿದ್ದಾರೆ.
ಅಕ್ಷರ ದಾಸೋಹ ನೌಕರರು ಅತಂತ್ರ
ಸದ್ಯದ ಮಟ್ಟಿಗೆ ಶಾಲೆಗಳು ಎಪ್ರಿಲ್‌ನಿಂದ ಆಗಸ್ಟ್‌ವರೆಗೆ ತೆರೆಯದೇ ಇರುವುದರಿಂದ ಅಕ್ಷರ ದಾಸೋಹ ಅಡುಗೆ ನೌಕರರು ಅತಂತ್ರ ಪರಿಸ್ಥಿತಿ ಎದುರಿಸಿದ್ದಾರೆ. ಶಾಲೆ ಆರಂಭವಾದಾಗ ಮತ್ತೆ ಅವರನ್ನು ಮರಳಿ ಕರೆಯುವುದಾಗಿ ಸರಕಾರ ಭರವಸೆ ನೀಡಿದ್ದರಿಂದ ಮತ್ತೆ ಮಕ್ಕಳಂತೆಯೇ ಶಾಲೆ ಆರಂಭಕ್ಕೆ ಹಾತೊರೆಯುವಂತಾಗಿದೆ.
ಮಾರ್ಗಸೂಚಿ ಬಂದ ಬಳಿಕ ವಿತರಣೆ
ಕೊರೊನಾ ಸಂಕಷ್ಟದಿಂದ ಶಾಲೆ ತೆರೆಯದಿರುವುದರಿಂದ ಅಕ್ಷರದಾಸೋಹದಡಿ ಶಾಲೆಯಲ್ಲಿ ನೀಡುತ್ತಿದ್ದ ಆಹಾರದ ಪ್ರಮಾಣವನ್ನು ಮಕ್ಕಳ ಮನೆಗೆ ವಿತರಿಸಲಾಗಿದೆ. ಈಗಾಗಲೇ ಎಪ್ರಿಲ್, ಮೇ ತಿಂಗಳ ವಿತರಣೆ ನಡೆದಿದ್ದು, ಜೂನ್-ಆಗಸ್ಟ್ ತಿಂಗಳ ಆಹಾರ ಸರಬರಾಜಾಗಿದ್ದು, ಸರಕಾರದ ಮಾರ್ಗಸೂಚಿ ಬಂದ ಬಳಿಕ ವಿತರಿಸಲಾಗುವುದು.
-ಸುಧಾಕರ್, ಶಿಕ್ಷಣಾಧಿಕಾರಿ, ಅಕ್ಷರದಾಸೋಹ ದ.ಕ. ಜಿಲ್ಲೆ
ಚೈತ್ರೇಶ್ ಇಳಂತಿಲ