Advertisement

ಬಿಸಿಯೂಟ ಸಿಬ್ಬಂದಿ ಇಡಿಗಂಟಿಗೆ ಸರ್ಕಾರದ ಮಾರ್ಗಸೂಚಿ ಪ್ರಕಟ

04:41 PM Jan 03, 2025 | Team Udayavani |

ಉದಯವಾಣಿ ಸಮಾಚಾರ
ದಾವಣಗೆರೆ: ರಾಜ್ಯಾದ್ಯಂತ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದುವ ಮಧ್ಯಾಹ್ನದ
ಬಿಸಿಯೂಟ ಸಿಬ್ಬಂದಿಗೆ ನಿವೃತ್ತಿ ವೇಳೆ ಇಡಿಗಂಟು ನೀಡಲು ಒಪ್ಪಿಗೆ ನೀಡಿದ್ದ ರಾಜ್ಯ ಸರ್ಕಾರ, ಈಗ ಅದರ ಅನುಷ್ಠಾನಕ್ಕಾಗಿ ಮಾರ್ಗಸೂಚಿ ಪ್ರಕಟಿಸಿದೆ. ಇಡಿಗಂಟು ಸೌಲಭ್ಯ ಪಡೆಯಲು ಸೇವಾವಧಿಯ ಹಾಜರಾತಿ ದಾಖಲೆಯನ್ನು ಪ್ರಮುಖ ದಾಖಲೆಯಾಗಿ ಪರಿಗಣಿಸಲು ಸೂಚಿಸಿದ್ದು, ಇದರ ಪರಿಶೀಲನೆಗೆ ತ್ರಿಸದಸ್ಯ ಸಮಿತಿ ರಚಿಸಿದೆ.

Advertisement

ಪಿಎಂ ಪೋಷಣ್‌ ಶಕ್ತಿ ನಿರ್ಮಾಣ ಯೋಜನೆಯಡಿ ಆಯ್ಕೆಗೊಂಡು 60 ವರ್ಷ ವಯೋಮಾನ ಪೂರ್ಣಗೊಳಿಸಿ 31-3-2022ಕ್ಕೆ ಅಥವಾ ನಂತರ ಕರ್ತವ್ಯದಿಂದ ಬಿಡುಗಡೆ ಹೊಂದಿದ ಅಡುಗೆ ಸಿಬ್ಬಂದಿಗೆ ಅಂತಿಮವಾಗಿ ಒಂದು ಬಾರಿಯ ಇಡಿಗಂಟು ಸೌಲಭ್ಯವನ್ನು ಸರ್ಕಾರ ನೀಡುತ್ತಿದೆ. ಐದು ವರ್ಷ ಮೇಲ್ಪಟ್ಟು ಹಾಗೂ 15 ವರ್ಷಕ್ಕಿಂತ ಕಡಿಮೆ ಅವಧಿ ಸೇವೆ ಸಲ್ಲಿಸಿದವರಿಗೆ 30,000 ರೂ. ಹಾಗೂ 15 ವರ್ಷ ಹಾಗೂ ಅದರ ಮೇಲ್ಪಟ್ಟು ಸೇವೆ ಸಲ್ಲಿಸಿದವರಿಗೆ 40 ಸಾವಿರ ರೂ. ನೀಡಲು ಸರ್ಕಾರ ತೀರ್ಮಾನಿಸಿದೆ. ಐದು ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿದವರಿಗೆ ಇಡಿಗಂಟು ಸೌಲಭ್ಯ ದೊರೆಯುವುದಿಲ್ಲ.

ಇಡಿಗಂಟು ಪಡೆಯಲು ಸಲ್ಲಿಸಬೇಕಾದ ಅರ್ಜಿ ನಮೂನೆ, ಸೇವಾ ದೃಢೀಕರಣ ಪತ್ರ, ಮರಣ ಹೊಂದಿದ್ದರೆ ಮರಣ ಪ್ರಮಾಣ ಪತ್ರ, ಹಾಗೂ ಇತರ ಸಂಬಂಧಿತ ದಾಖಲೆಗಳೊಂದಿಗೆ ಪ್ರಸ್ತಾವನೆ ಸ್ವೀಕೃತಿಗೆ ಅನುಸರಿಸಬೇಕಾದ ಕಾರ್ಯವಿಧಾನದ ಕುರಿತು ಸುತ್ತೋಲೆ ಹೊರಡಿಸಲು ಶಾಲಾ ಶಿಕ್ಷಣ ಇಲಾಖೆ ಆಯುಕ್ತರಿಗೆ ಸೂಚಿಸಿದೆ. ಇಡಿಗಂಟು ನೀಡಬೇಕಾದ ಅರ್ಹ ಪ್ರಕರಣಗಳಲ್ಲಿ ಒಂದು ವೇಳೆ ಅಡುಗೆ ಸಿಬ್ಬಂದಿ ಮರಣ ಹೊಂದಿದ್ದರೆ ಅಂತಹ ಅಡುಗೆ ಸಿಬ್ಬಂದಿಯ ಕಾನೂನುಬದ್ಧ ಅರ್ಹ ಅವಲಂಬಿತರಿಗೆ ಇಡಿಗಂಟು ಮೊತ್ತ ಪಾವತಿಸಬೇಕು.

ಇಡಿಗಂಟು ನೀಡಬೇಕಾಗಿರುವ ಅರ್ಹ ಪ್ರಕರಣಗಳಲ್ಲಿ ಅಡುಗೆ ಸಿಬ್ಬಂದಿ ಅಥವಾ ಅರ್ಹ ಕಾನೂನುಬದ್ಧ ಅವಲಂಬಿತರು ಇಂಡಿಗಂಟು ಬೇಡಿಕೆ ಪ್ರಸ್ತಾವನೆಯನ್ನು ಆಯಾ ಶಾಲಾ ಮುಖ್ಯ ಶಿಕ್ಷಕರಿಗೆ ಸಲ್ಲಿಸಬೇಕು. ಸಂಬಂಧಿಸಿದ ಶಾಲೆಗಳ ಮುಖ್ಯ ಶಿಕ್ಷಕರು ಶಾಲೆಯಲ್ಲಿರುವ ಅಡುಗೆ ಸಿಬ್ಬಂದಿಯ ಸೇವಾವಧಿಯ ಹಾಜರಾತಿ ದಾಖಲೆ ಆಧರಿಸಿ ಪರಿಶೀಲಿಸಿ ಪ್ರಸ್ತಾವನೆ ಕ್ರಮಬದ್ಧವಾಗಿದ್ದಲ್ಲಿ ಮಾಹಿತಿಗಳನ್ನು ದೃಢೀಕರಿಸಿ ಸೂಕ್ತ ಶಿಫಾರಸಿನೊಂದಿಗೆ ಪ್ರಸ್ತಾವನೆಯನ್ನು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪರಿಶೀಲನೆಗಾಗಿ ಕಳುಹಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ತ್ರಿದಸ್ಯ ಸಮಿತಿಯ ಪರಿಶೀಲನೆ: ಬೇಡಿಕೆ ಪ್ರಸ್ತಾವನೆ ಸ್ವೀಕರಿಸಿದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ, ಪಿಎಂ ಪೋಷಣ್‌ ಯೋಜನೆಯ ತಾಲೂಕು ಸಹಾಯಕ ನಿರ್ದೇಶಕರಿಂದ ಸ್ಪಷ್ಟವಾದ ಅಭಿಪ್ರಾಯ ಮತ್ತು ಸಂಬಂಧಿತ ಅಗತ್ಯ ದಾಖಲೆಗಳ ದೃಢೀಕರಣ ಪಡೆದು ಪ್ರಸ್ತಾವನೆಯನ್ನು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕಳುಹಿಸಬೇಕು. ಜಿಪಂ ಹಂತದಲ್ಲಿ ಸ್ವೀಕೃತಗೊಂಡ ಪ್ರಸ್ತಾವನೆಗಳನ್ನು ಆಯಾ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಆಯಾ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು(ಆಡಳಿತ) ಹಾಗೂ ಆಯಾ ಜಿಲ್ಲೆಗಳ ಜಿಪಂನ ಪಿಎಂ ಪೋಷಣ್‌ ಯೋಜನೆಯ ಶಿಕ್ಷಣಾಧಿಕಾರಿಗಳನ್ನೊಳಗೊಂಡ ತ್ರಿದಸ್ಯ ಸಮಿತಿಯ ಪರಿಶೀಲಿಸಬೇಕು.

Advertisement

ಬಳಿಕ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮಂಜೂರಾತಿ ಆದೇಶ ಆಧರಿಸಿ, ಅಡುಗೆ ಸಿಬ್ಬಂದಿಗೆ ಅಥವಾ ಅರ್ಹ ಕಾನೂನುಬದ್ಧ ಅವಲಂಬಿತರ ಬ್ಯಾಂಕ್‌ ಖ್ಯಾತೆಗೆ ನೇರವಾಗಿ ಇಡಿಗಂಟಿನ ಮೊತ್ತ ಬಿಡುಗಡೆ ಮಾಡಬೇಕು. ಪ್ರತಿವರ್ಷ ಸಲ್ಲಿಸುವ ಮುಂದಿನ ಆಯವ್ಯಯದ ಬೇಡಿಕೆಯಲ್ಲಿ ಆಯಾ ವರ್ಷದಲ್ಲಿ 60 ವರ್ಷ ಪೂರೈಸುವ ಅಡುಗೆ ಸಿಬ್ಬಂದಿ ಮಾಹಿತಿಯೊಂದಿಗೆ ಅಂದಾಜು ಅನುದಾನ ಬೇಡಿಕೆ ಸಲ್ಲಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತ ಡಾ| ಕೆ.ವಿ.ತ್ರಿಲೋಕಚಂದ್ರ ನಿರ್ದೇಶನ
ನೀಡಿದ್ದಾರೆ.

ರಾಜ್ಯಾದ್ಯಂತ 1.20 ಲಕ್ಷ ಬಿಸಿಯೂಟ ಸಿಬ್ಬಂದಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದು ಇವರಲ್ಲಿ ಸಾವಿರಾರು ಸಿಬ್ಬಂದಿ ಎರಡು ದಶಕಕ್ಕಿಂತ ಹೆಚ್ಚಿನ ಅವಧಿಯಿಂದ ಸೇವೆ ಸಲ್ಲಿಸುತ್ತಿದ್ದು ನಿವೃತ್ತಿ ಅಂಚಿನಲ್ಲಿದ್ದಾರೆ. 31-3-2022ಕ್ಕೆ ಅಥವಾ ನಂತರ ನಿವೃತ್ತಿಯಾದವರಿಗೆ ಸರ್ಕಾರ ಇಡಿಗಂಟು ಸೌಲಭ್ಯ ನೀಡಲು ನಿರ್ಧರಿಸಿದೆ. ಪ್ರಸ್ತುತ ಅವರಿಗೆ ಪ್ರತಿ ತಿಂಗಳು 3600 ರೂ. ಗೌರವಧನ ನೀಡಲಾಗುತ್ತಿದ್ದು, ಭವಿಷ್ಯ ನಿಧಿ ಸೇರಿದಂತೆ ಯಾವುದೇ ಸೌಲಭ್ಯ ಇರಲಿಲ್ಲ. ಇಡಿಗಂಟು ಸೌಲಭ್ಯಕ್ಕಾಗಿ ಬಿಸಿಯೂಟ ಸಂಘಟನೆಗಳು ಎರಡು ದಶಕಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದವು. ಈಗ ಸರ್ಕಾರ ಇಡಿಗಂಟು ನೀಡಲು ಅಸ್ತು ಎಂದಿದ್ದು ಅದರ ಅನುಷ್ಠಾನಕ್ಕೂ ಮುಂದಾಗಿದೆ.

ಅರ್ಹ ಅಡುಗೆ ಸಿಬ್ಬಂದಿಗೆ ಇಡಿಗಂಟು ನೀಡುವ ಸಂದರ್ಭದಲ್ಲಿ ಸರ್ಕಾರದ ಆದೇಶದಲ್ಲಿ ಉಲ್ಲೇಖೀಸಿದ ಎಲ್ಲ ಷರತ್ತುಗಳನ್ನು ಜಿಲ್ಲಾ ಮತ್ತು ತಾಲೂಕು ಹಂತಗಳಲ್ಲಿನ ಅನುಷ್ಠಾನಾಧಿಕಾರಿಗಳು ಕಡ್ಡಾಯವಾಗಿ ಪಾಲಿಸಬೇಕು. ಪ್ರತಿ ವರ್ಷ ಆ.20ರೊಳಗೆ ರಾಜ್ಯ ಕಚೇರಿಗೆ ಇಡಿಗಂಟು ಅಂದಾಜು ಅನುದಾನ ಬೇಡಿಕೆ ಸಲ್ಲಿಸಬೇಕು.
●ಡಾ|ತ್ರಿಲೋಕಚಂದ್ರ, ಆಯುಕ್ತರು,
ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು

*ಎಚ್‌.ಕೆ.ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next