ತಾವರಗೇರಾ: ಸಮೀಪದ ಮೇಣೆದಾಳದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣ ಗೋಡೆ ಜಿಗಿದು ಪರಾರಿಯಾಗಿದ್ದ ನಾಲ್ವರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದಾರೆ.
ವಿದ್ಯಾರ್ಥಿಗಳು ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಪ್ರಾಚಾರ್ಯ ಕೊಟ್ರೇಶ ತಳವಾರ ತಾವರಗೇರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಅನ್ವಯ ಪಿಎಸ್ಐ ನಾಗರಾಜ್ ಕೊಟಗಿ ಹಾಗೂ ಸಿಬ್ಬಂದಿ ತಕ್ಷಣವೇ ವಿದ್ಯಾರ್ಥಿಗಳ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಹೇಳಿಕೆ ನೀಡಿದ ವಿದ್ಯಾರ್ಥಿಗಳು ನಾವು ಮುಂಬೈ ನಗರಕ್ಕೆ ತೆರಳಿ ಹೆಚ್ಚಿನ ಹಣ ಸಂಪಾದಿಸಬೇಕೆಂದು ವಸತಿ ಶಾಲೆಯಿಂದ ತೆರಳಿದ್ದೆವು. ಜೊತೆಗೆ ಓದಿನಲ್ಲಿ ಕೂಡ ನಮಗೆ ಆಸಕ್ತಿ ಇರಲಿಲ್ಲ ಹಾಗಾಗಿ ನಾವು ದೂರದ ಪಟ್ಟಣಕ್ಕೆ ತೆರಳಿ ದುಡಿದು ಹಣ ಗಳಿಸಬೇಕೆಂಬ ಉದ್ದೇಶದಿಂದ ಶಾಲೆಯ ಆವರಣ ಗೋಡೆ ಹಾರಿ ರಾತ್ರಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಮುಖಾಂತರ ಮುಂಬೈಗೆ ತೆರಳಲು ತೀರ್ಮಾನಿಸಿದ್ದೆವು ಎಂದು ತಿಳಿಸಿದ್ದಾರೆ.
ಸೋಮವಾರ ರಾತ್ರಿಯಿಂದಲೇ ನಾಪತ್ತೆಯಾಗಿದ್ದ ವಿದ್ಯಾರ್ಥಿಗಳ ಬಗ್ಗೆ ಪೊಲೀಸ್ ಇಲಾಖೆಯವರು ತಕ್ಷಣವೇ ಸಂಬಂಧಿಸಿದ ಮೇಲಾಧಿಕಾರಿಗಳ ಗಮನಕ್ಕೆ ತಂದು ವಿದ್ಯಾರ್ಥಿಗಳ ಪತ್ತೆ ಹಚ್ಚಿ ಕರೆ ತಂದಿದ್ದಾರೆ. ಈ ಬಗ್ಗೆ ಶಾಲೆಯ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗ ಮತ್ತು ಪಾಲಕರು ಆತಂಕಗೊಂಡಿದ್ದರು. ಇನ್ನು ಎರಡೇ ತಿಂಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿದ್ದರು ಕೂಡ ವಿದ್ಯಾರ್ಥಿಗಳು ಈ ರೀತಿ ನಿರ್ಧಾರ ಕೈಗೊಂಡಿರುವುದು. ದುಃಖದ ಸಂಗತಿ ಎಂದು ಪಾಲಕರು ಹಾಗೂ ಶಾಲಾ ಸಿಬ್ಬಂದಿ ನೊಂದಿದ್ದಾರೆ. ಈ ಬಗ್ಗೆ ವಿದ್ಯಾರ್ಥಿಗಳ ಪೊಲೀಸರು ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕುಷ್ಟಗಿ ತಾಲೂಕಿನ ಎಂ.ರಾಂಪುರ ಗ್ರಾಮದ ಮನು ದೇವಪ್ಪ, ಗುಮಗೇರಾ ಗ್ರಾಮದ ನೀಲಕಂಠಪ್ಪ ನಿಂಗಪ್ಪ ಹೊಸಮನಿ, ಯಲಬುರ್ಗಾ ತಾಲೂಕಿನ ಚಿಕ್ಕ ವಂಕಲಕುಂಟ ಗ್ರಾಮದ ಗುರುರಾಜ್ ಹನಮಂತಪ್ಪ ಪರಿಯವರ. ಯಲಬುರ್ಗಾ ಪಟ್ಟಣದ ವಿಶ್ವ ಮಾರುತೆಪ್ಪ ಭಜಂತ್ರಿ ಕಳೆದ ಸೋಮವಾರ ರಾತ್ರಿ 10ಕ್ಕೆ ನಾಲ್ವರು ವಿದ್ಯಾರ್ಥಿಗಳು ನಾಪತ್ತೆಯಾದ್ದರಿಂದ ಪ್ರಾಚಾರ್ಯ ಕೊಟ್ರೇಶ ತಳವಾರ ತಾವರಗೇರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.