Advertisement

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

08:43 PM Dec 22, 2024 | Team Udayavani |

ಮಂಡ್ಯ: ಈ ಬಾರಿಯ 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಮಾಡಿಸುವಂತೆ ಆರಂಭದಿಂದಲೂ ಕೂಗು ಕೇಳಿ ಬಂದಿತ್ತು. ಈ ಸಂಬಂಧ ಪರ-ವಿರೋಧ ಚರ್ಚೆಗಳ ನಡುವೆಯೂ ಪ್ರಗತಿಪರ ಸಂಘಟನೆಗಳ ಮುಖಂಡರು ಬಾಡೂಟ ಹಂಚಲು ಮುಂದಾಗಿದ್ದು, ಗೊಂದಲದ ವಾತಾವರಣ ಸೃಷ್ಟಿಸಿತ್ತು. ಅಲ್ಲದೆ, ಪೊಲೀಸರೊಂದಿಗೆ ಮಾತಿನ ಚಕಮಕಿಗೂ ಕಾರಣವಾಯಿತು.

ಪೊಲೀಸರ ವಿರುದ್ಧ ಧಿಕ್ಕಾರ

ಸಮ್ಮೇಳನದ ಊಟ ವಿತರಣೆ ಮಾಡುತ್ತಿದ್ದ ಜಾಗದಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರು ಮೊಟ್ಟೆ, ಮುದ್ದೆ, ಕೋಳಿಸಾರು, ಕಬಾಬ್‌ ಹಂಚಲು ಮುಂದಾಗಿದ್ದರು. ಬಾಡೂಟ ವಿತರಣೆಗೆ ಜಿಲ್ಲಾಡಳಿತ ಅವಕಾಶ ನೀಡದಿದ್ದರಿಂದ ಬಾಡೂಟ ಹಂಚುವಂತಿಲ್ಲ ಎಂದು ಪೊಲೀಸರು ತಡೆಯೊಡ್ಡಿದರು. ಹೀಗಾಗಿ ಮಾತಿನ ಚಕಮಕಿ ನಡೆಯಿತು. ಆಗ ಪೊಲೀಸರು ಹಂಚಲು ತಂದಿದ್ದ ಮಾಂಸಾಹಾರವಿದ್ದ ಪಾತ್ರೆಗಳನ್ನು ತೆಗೆದುಕೊಂಡು ಹೋದರು. ಇದರಿಂದ ರೊಚ್ಚಿಗೆದ್ದ ಮುಖಂಡರು ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು.

Advertisement

ವಿವಾದದ ನಡುವೆಯೂ ಮಾಂಸಾಹಾರ ವಿತರಣೆ
ಪೊಲೀಸರು ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ನಡೆಸಿದರೂ ಪಟ್ಟು ಬಿಡಲಿಲ್ಲ. ನಂತರ ಊಟ ವಿತರಣೆ ಮಾಡುವ ಸ್ಥಳದಿಂದ ದೂರಕ್ಕೆ ತೆರಳಿ ಊಟ ಮಾಡಬಹುದು. ಆದರೆ, ಸಾರ್ವಜನಿಕರಿಗೆ ವಿತರಿಸುವಂತಿಲ್ಲ ಎಂದು ಷರತ್ತನ್ನು ಪೊಲೀಸರು ವಿಧಿಸಿದ್ದು, ದೂರದಲ್ಲಿ ಬಾಡೂಟ ಸೇವನೆ ಮಾಡಿದರು. ಈ ವೇಳೆ ಮಾಂಸಾಹಾರಕ್ಕಾಗಿ ಸಮ್ಮೇಳನಕ್ಕೆ ಆಗಮಿಸಿದ್ದ ಜನರು ಮುಗಿಬಿದ್ದರಿಂದ ನೂಕುನುಗ್ಗಲು ಉಂಟಾಯಿತು.

ಸಾಹಿತ್ಯಾಸಕ್ತರ ಬೇಸರ
ಬಾಡೂಟ ಹಂಚಿದ ವಿಚಾರಕ್ಕೆ ಸಾಹಿತ್ಯಾಸಕ್ತರು ಬೇಸರ ವ್ಯಕ್ತಪಡಿಸಿದ್ದಾರೆ. ಇದು ಬಾಡೂಟಕ್ಕಾಗಿ ಹೋರಾಟ ಮಾಡುವ ಸ್ಥಳವಲ್ಲ‌. ಇಲ್ಲಿ ಸಾಹಿತ್ಯ, ಭಾಷೆ ಬಗ್ಗೆ ಚರ್ಚೆಯಾಗ ಬೇಕು. ಮಂಡ್ಯ ಬಾಡೂಟ ಫೇಮಸ್ ಅಂತ ಈ ಸ್ಥಳದಲ್ಲಿ ಬಾಡೂಟ ಹಂಚಿದ್ದು ಸರಿಯಲ್ಲ‌. ಸಸ್ಯಾಹಾರ ಊಟ ಮಾಡಲು ಸಾಕಷ್ಟು ಜನರು ಬರುತ್ತಿದ್ದಾರೆ. ಮಾಂಸದೂಟ ಮಾಡಿಸಿದ್ದರೆ ಅದನ್ನ ನಿರ್ವಹಣೆ ಮಾಡುವುದು ಕಷ್ಟವಾಗುತಿತ್ತು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next