Advertisement

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಮರು ಸಮೀಕ್ಷೆ

04:59 PM Apr 28, 2017 | Team Udayavani |

ಹಾಸನ: ಜಿಲ್ಲೆಯಲ್ಲಿ ಬರ ಪರಿಸ್ಥಿತಿಯ ತೀವ್ರತೆ ಮುಂದುವರೆದಿರುವ ಹಿನ್ನೆಲೆ ಅದನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ನಿಟ್ಟಿನಲ್ಲಿ ಜಿಲ್ಲಾದ್ಯಂತ ಕುಡಿಯುವ ನೀರಿನ ಸ್ಥಿತಿಗತಿ ಮರು ಸಮೀಕ್ಷೆ ನಡೆಸಬೇಕೆಂದು ಜಿಲ್ಲಾಧಿಕಾರಿ ವಿ.ಚೈತ್ರಾ ಸೂಚನೆ ನೀಡಿದರು.

Advertisement

ಜಿಪಂ ಸಭಾಂಗಣದಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಮುಖ್ಯ ಎಂಜಿನಿಯರ್‌ ಪ್ರಕಾಶ್‌ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದ ಕುಡಿಯುವ ನೀರಿನ ಈಗಿನ ಪರಿಸ್ಥಿತಿಗಳ ಬಗ್ಗೆ ಮರು ಸಮೀಕ್ಷೆ ನಡೆಸುವ ಕುರಿತು ಚರ್ಚೆ ನಡೆಸಿದರು. ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆ ಉದ್ದೇಶಕ್ಕೆ ಹಣಕಾಸಿನ ಕೊರತೆ ಇಲ್ಲ. ಆದರೆ ಇರುವ ಅನುದಾನವನ್ನು ಯೋಜಿತವಾಗಿ ಸದ್ಭಳಕೆಯಾಗುತ್ತಿದೆಯೇ ಪರಾಮರ್ಶೆ ನಡೆಯಬೇಕಿದೆ.

2 ತಿಂಗಳ ಹಿಂದೆಯೇ ಜಿಲ್ಲೆಯ ಕುಡಿಯುವ ನೀರಿನ ಸ್ಥಿತಿಗತಿಗಳ ವಾಸ್ತವತೆಯನ್ನು ಅರಿಯುವ ಸಲುವಾಗಿ ಹೋಬಳಿ ಮಟ್ಟದಲ್ಲಿ ಸಮೀಕ್ಷೆ ನಡೆೆಸಲು ಸಮಿತಿಗಳನ್ನು ರಚಿಸಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಈಗ ನಿಗದಿತ ನಮೂನೆಗಳಲ್ಲಿ ಮರು ಸಮೀಕ್ಷೆ ನಡೆಸಿ 3 ದಿನಗಳೊಳಗೆ ವರದಿ ಸಲ್ಲಿಸಿ ಎಂದು ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು.

ಸಂಬಳ ಕಡಿತ: ಗ್ರಾಮವಾರು ಜನಸಂಖ್ಯೆ, ಜಾನುವಾರುಗಳ ಸಂಖ್ಯೆ, ಜಲ ಮೂಲಗಳ ವಿವರ, ಇವುಗಳ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಕೊಳವೆ ಬಾವಿಗಳ ನೀರಿನ ಮಟ್ಟದ ಬಗ್ಗೆ ವಿವರ ಮಾಹಿತಿ ನೀಡಬೇಕು. ಕುಡಿಯುವ ನೀರಿಗಾಗಿ ಬಿಡುಗಡೆಯಾಗಿರುವ ಹಣ ಸದ್ಬಳಕೆಯಾಗಿದೆಯೇ ಪರಿಶೀಲಿಸಬೇಕು. ಒಂದೇ ಕಾಮಗಾರಿಗಾಗಿ ಎರಡೆರಡು ಕಡೆಗಳಲ್ಲಿ ನಮೂದಿಸುವ ಕೆಲಸವಾಗ ಬಾರದು. ಅಂತಹ ಲೋಪವಿದ್ದರೆ ಕ್ರಮ ಜರುಗಿಸಲಾಗುವುದೆಂದರು.

ಬರ ಪರಿಸ್ಥಿತಿ ನಿಭಾಯಿಸುವುದು ಒಂದು ಗಂಭೀರ ವಿಚಾರ. ಸಭಾ ಸೂಚನೆ ಇದ್ದರೂ ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟೀಸ್‌ ನೀಡಿ ಅದು ಸಮರ್ಪಕ ವೆನಿಸದಿದ್ದಲ್ಲಿ ಒಂದು ದಿನದ ವೇತನವನ್ನು ಕಡಿತಗೊಳಿಸುವಂತೆ ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ಜಿಲ್ಲಾಧಿಕಾರಿ ವಿ.ಚೈತ್ರ ಸೂಚಿಸಿದರು.

Advertisement

ಬರ ಪರಿಹಾರ ಯೋಜನೆಯಡಿ ಮತ್ತು ಕುಡಿಯುವ ನೀರಿನ ಕಾಮಗಾರಿಗಳಡಿ ಪ್ರತಿ ಕ್ಷೇತ್ರಕ್ಕೆ 2.25 ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ. ಅಲ್ಲದೆ 14ನೇ ಹಣಕಾಸಿನ ಯೋಜನೆಯಡಿಯಲ್ಲಿಯೂ ಸುಮಾರು 19 ಕೋಟಿ ರೂ. ಹಣ ಕುಡಿಯುವ ನೀರಿನ ಉದ್ದೇಶಕ್ಕೆ ವೆಚ್ಚಾಗಿದೆ. ಹಾಗಿದ್ದರೂ ಇನ್ನೂ 218 ಗ್ರಾಮಗಳಲ್ಲಿ 600 ಟ್ಯಾಂಕರ್‌ಗಳನ್ನು ಬಳಸಿ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.

ಕಾರ್ಯಾಚರಣೆ ನಡೆಸಿ: ಗ್ರಾಮೀಣ ನೀರು ಸರಬ ರಾಜು ಇಲಾಖೆ ಮುಖ್ಯ ಎಂಜಿನಿಯರ್‌ ಪ್ರಕಾಶ್‌ ಮಾತನಾಡಿ ಪರಿಸ್ಥಿತಿಯ ಗಂಭೀರತೆಯನ್ನು ಎಲ್ಲರೂ ಅರ್ಥಮಾಡಿಕೊಂಡು ಸಮಸ್ಯೆ ನಿಭಾಯಿಸುತ್ತಾ ಕೈಜೋಡಿಸಬೇಕು. ಗ್ರಾಮವಾರು ನಿಖರವಾದ ಮಾಹಿತಿ ಲಭ್ಯವಿಲ್ಲದಿದ್ದರೆ ಬೇಡಿಕೆಗಳು ಏರುತ್ತಲೇ ಹೋಗುತ್ತವೆ. ನಿಭಾಯಿಸುವ ಸ್ವರೂಪದ ಬಗ್ಗೆ ಗೊಂದಲಗಳು ಮೂಡುತ್ತವೆ.

ಹೀಗಾಗಿ ನಿರ್ದಿಷ್ಟ ಯೋಜನೆ ರೂಪಿಸಿ ಮುಂದಿನ ಬೇಸಿಗೆ ವರೆಗೆ ಕುಡಿವ ನೀರಿನ ನಿರ್ವಹಣೆಯಾಗುವಂತೆ ಕಾರ್ಯಾಚರಣೆ ನಡೆಸಬೇಕು ಎಂದರು. ಎಲ್ಲಾ ಕಡೆಗಳಲ್ಲಿ ಕೊಳವೆ ಬಾವಿ ಕೊರೆಸುವ ಬದಲಿಗೆ ಹಾಲಿ ಲಭ್ಯವಿರುವಂತಹ ಕೊಳವೆ ಬಾವಿಗಳ ಅಥವಾ ಇನ್ನಷ್ಟು ಆಳ ಕೊರೆಯುವ ಮೂಲಕ ಪುನರುಜ್ಜೀವನ ಸಾಧ್ಯವೇ ಎಂಬುದನ್ನು ಗಮನಿಸಬೇಕು ಅಥವಾ ಖಾಸಗಿ ಜಲಮೂಲ ಗಳನ್ನು ಬಳಸಿಯಾದರೂ ನೀರು ಪೂರೈಕೆ ಮಾಡು ವುದರಿಂದ ವೆಚ್ಚವೂ ಕಡಿಮೆಯಾಗುವುದು ಎಂದರು.

ಈಗಾಗಲೇ ಸಾಕಷ್ಟು ಅನುದಾನ ಲಭ್ಯ ವಿರುವುದರಿಂದ ಮುಂದಾಲೋಚನೆ ವಹಿಸಿ ಹಾಲಿ ಇರುವ ಎಲ್ಲಾ ಕೊಳವೆ ಬಾವಿಗಳ ಬಳಿ ಇಂಗು ಗುಂಡಿಗಳನ್ನು ಮಾಡಿ ಮುಂದಿನ ಮಳೆಗಾಲದಲ್ಲಾದರು ನೀರಿನ ಮರು ಪೂರಣಕ್ಕೆ ಯೋಜನೆಯನ್ನು ರೂಪಿಸಿ ಜಲಕ್ಷಾಮವನ್ನು ತಗ್ಗಿಸಬೇಕು ಎಂದರು. ಜಿಪಂ ಮುಖ್ಯ ಯೋಜನಾಧಿ ಕಾರಿ ಪರಪ್ಪ ಸ್ವಾಮಿ ಮಾತನಾಡಿ, ಹಣಕಾಸು ಆಯೋಗದಲ್ಲಿ ಬಿಡುಗಡೆಯಾಗಿರುವ ಹಣವನ್ನು ಪೈಪ್‌ ಲೈನ್‌ ಅಳವಡಿಕೆ, ಮೋಟರ್‌ ಖರೀದಿ, ದುರಸ್ಥಿ, ಬಿಡಿ ಭಾಗಗಳ ಖರೀದಿ, ಮತ್ತಿತರ ಕಾರ್ಯಗಳಿಗಾಗಿ ವೆಚ್ಚ ಮಡಲಾಗಿದೆ.

ಹಾಗಿದ್ದ ಮೇಲೆ ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿನ ಸಮಸ್ಯೆ ಸುಧಾರಿಸಬೇಕಿತ್ತು. ಈ ಬಗ್ಗೆ ಪ್ರತಿ ಗ್ರಾಪಂವಾರು ಸಮೀಕ್ಷೆ ನಡೆಸಿ ವರದಿ ನೀಡುವಂತೆ ಏಕೆ ಸೂಚಿಸಿದ್ದಾರೆ ಎಂದು ಪ್ರಶ್ನಿಸಿದರು. ಜಿಪಂ ಯೋಜನಾ ನಿರ್ದೇಶಕರಾದ ಸಿದ್ದರಾಜು ಗ್ರಾಮೀಣ ಪ್ರದೇಶದ ಕುಡಿವ ನೀರಿನ ಸಮೀಕ್ಷೆಗಾಗಿ ತಯಾರಿಸಲಾಗಿರುವ ನಮೂನೆ ಬಗ್ಗೆ ಮಾಹಿತಿ ನೀಡಿದರು. ಮತ್ತು ಹೋಬಳಿವಾರು ನೇಮಕ ಗೊಂಡಿರುವ ಅಧಿಕಾರಿಗಳ ಬಗ್ಗೆ ಮಾಹಿತಿ ನೀಡಿದರು.

ಅಪರ ಡೀಸಿ ಕೆ.ಎಂ.ಜಾನಕಿ, ಜಿಪಂ ಉಪ ಕಾರ್ಯದರ್ಶಿ ನಾಗರಾಜ್‌, ಜಿಪಂ ಲೆಕ್ಕಾಧಿಕಾರಿ ಶ್ರೀನಿವಾಸಗೌಡ, ಉಪ ವಿಭಾಗಾಧಿಕಾರಿ ಡಾ.ನಾಗರಾಜ್‌ ಎಲ್ಲಾ ತಾಲೂಕುಗಳ ತಹಶೀಲ್ದಾರ್‌ಗಳು ತಾಪಂ ಕಾರ್ಯ ನಿರ್ವಹಣಾಧಿಕಾರಿಗಳು, ಎಂಜಿನಿಯರುಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next