ಮುಂಬಯಿ: ಅಕ್ಷಯ್ ಕುಮಾರ್ ಅಭಿನಯದ ʼಓಮೈಗಾಡ್-2ʼ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ತನ್ನ ಯಶಸ್ಸಿನ ಯಾತ್ರೆಯನ್ನು ಮುಂದುವರಿಸಿದೆ. ಸಿನಿಮಾ ರಿಲೀಸ್ ಆದ 9ನೇ ದಿನವೂ ಭರ್ಜರಿ ಪ್ರದರ್ಶನ ಕಾಣುವುದರ ಮೂಲಕ ಈ ವರ್ಷದ ಬಿಟೌನ್ ಹಿಟ್ ಸಾಲಿಗೆ ಸಿನಿಮಾ ಸೇರಿದೆ.
ಸನ್ನಿ ಡಿಯೋಲ್ ಅವರ ʼಗದರ್-2ʼ ಸಿನಿಮಾದೊಂದಿಗೆ ಆ.11 ರಂದು ತೆರೆಗೆ ಬಂದ ʼಓ ಮೈ ಗಾಡ್-2ʼ ಪೈಪೋಟಿಯಾಗಿ ಬಾಕ್ಸ್ ಆಫೀಸ್ ನಲ್ಲಿ ಗಳಿಕೆ ಕಂಡರೂ ʼಗದರ್-2ʼ 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಆದರೆ ಅಕ್ಷಯ್ ಕುಮಾರ್ ಅವರ ಸಿನಿಮಾ ಕೂಡ ಕಲೆಕ್ಷನ್ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ.
ಸಿನಿಮಾ 2ನೇ ವಾರಕ್ಕೆ ಕಾಲಿಟ್ಟಿದ್ದು,8ನೇ ದಿನ 6.03 ಕೋಟಿ ರೂ.ಗಳಿಸಿದ್ದು, 9ನೇ ದಿನ 10.50 ಕೋಟಿ ಗಳಿಸಿದೆ. ಆ ಮೂಲಕ 101.58 ಕೋಟಿ ಗಳಿಸಿ, ನೂರು ಕೋಟಿ ಕ್ಲಬ್ ಸೇರಿದೆ. ಹಿಂದಿ ಬೆಲ್ಟ್‌ನಲ್ಲಿ ಚಿತ್ರವು ಒಟ್ಟಾರೆ 45.94% ಆಕ್ಯುಪೆನ್ಸಿಯನ್ನು ಕಂಡಿದೆ.
ಅಮಿತ್ ರೈ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಶಿವನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ‘OMG 2’ ನಲ್ಲಿ ಯಾಮಿ ಗೌತಮ್, ಪಂಕಜ್ ತ್ರಿಪಾಠಿ ಮತ್ತು ರಾಮಾಯಣ ಖ್ಯಾತಿಯ ಅರುಣ್ ಗೋವಿಲ್ ಕೂಡ ಕಾಣಿಸಿಕೊಂಡಿದ್ದಾರೆ.
ಲೈಂಗಿಕ ಶಿಕ್ಷಣದ ಕಥಾಹಂದರವನ್ನು ಸಿನಿಮಾ ಒಳಗೊಂಡಿದೆ. ಅಕ್ಷಯ್ ಕುಮಾರ್ ಅವರ ಕಳೆದ ಕೆಲ ಸಿನಿಮಾಗಳು ಮಕಾಡೆ ಮಲಗಿತ್ತು. ʼಓಮೈಗಾಡ್-2ʼ ಮೂಲಕ ಅವರಿಗೊಂದು ಬ್ರೇಕ್ ಸಿಗುವ ಸಾಧ್ಯತೆಯಿದೆ.