ಹೈದರಾಬಾದ್: ʼಪುಷ್ಪ-2ʼ (Pushpa 2) ಚಿತ್ರದ ಪ್ರಿಮಿಯರ್ ಶೋ ಪ್ರದರ್ಶನದ ವೇಳೆ ಕಾಲ್ತುಳಿತ (Stampede Case) ಉಂಟಾಗಿ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಅಲ್ಲು ಅರ್ಜುನ್ (Allu Arjun) ಮತ್ತು ನಿರ್ಮಾಪಕರು 2 ಕೋಟಿ ರೂ. ಪರಿಹಾರವನ್ನು ನೀಡಿದ್ದಾರೆ.
ಡಿ.4 ರಂದು ʼಪುಷ್ಪ-2ʼ ಸಿನಿಮಾದ ಪ್ರಿಮಿಯರ್ ಶೋವನ್ನು ಹೈದರಾಬಾದ್ನ ಸಂಧ್ಯಾ ಥಿಯೇಟರ್ನಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ಅಲ್ಲು ಅರ್ಜುನ್ ಥಿಯೇಟರ್ಗೆ ನೀಡಿದ್ದರು. ಅವರ ಭೇಟಿ ಹಿನ್ನೆಲೆಯಲ್ಲಿ ನೂಕುನುಗ್ಗಲು ಉಂಟಾಗಿತ್ತು. ಪರಿಣಾಮ 34 ವರ್ಷ ಮಹಿಳೆ ರೇವತಿ ಉಸಿರುಗಟ್ಟಿ ಮೃತಪಟ್ಟಿದ್ದರು. ಅವರ ಮಗ ಶ್ರೀತೇಜ್ ಗಂಭೀರ ಗಾಯಗೊಂಡಿದ್ದರು.
ಈ ಪ್ರಕರಣದಿಂದಾಗಿ ಅಲ್ಲು ಅರ್ಜುನ್ ಅವರ ಮೇಲೆ ಎಫ್ ಐಆರ್ ದಾಖಲಾಗಿತ್ತು. ಇದಾದ ನಂತರ ಪೊಲೀಸರು ಅವರನ್ನು ಬಂಧಿಸಿದ್ದರು. ಮಧ್ಯಂತರ ಜಾಮೀನು ಪಡೆದು ಅಲ್ಲು ಅರ್ಜುನ್ ಜೈಲಿನಿಂದ ಆಚೆ ಬಂದಿದ್ದರು. ಇತ್ತೀಚೆಗೆ ಮತ್ತೆ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಬುಧವಾರ (ಡಿ.25 ರಂದು) ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಅವರು ಹೈದರಾಬಾದ್ನ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ನಿರ್ಮಾಪಕ ಮತ್ತು ತೆಲಂಗಾಣ ಚಲನಚಿತ್ರ ಅಭಿವೃದ್ಧಿ ನಿಗಮದ ಅಧ್ಯಕ್ಷ ದಿಲ್ ರಾಜು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೇವತಿ ಅವರ ಪುತ್ರ ಶ್ರೀತೇಜ್ ಅವರಿಗೆ ಚೆಕ್ ಹಸ್ತಾಂತರ ಮಾಡಿದ್ದಾರೆ.
ಅಲ್ಲು ಅರ್ಜುನ್ 1 ಕೋಟಿ ನೀಡಿದ್ದು, ಮೈತ್ರಿ ಮೂವೀಸ್ ಮತ್ತು ನಿರ್ದೇಶಕ ಸುಕುಮಾರ್ ತಲಾ 50 ಲಕ್ಷ ರೂ.ವನ್ನು ನೀಡಿದ್ದಾರೆ.
ಶ್ರೀತೇಜ್ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ. ಅವನು ವೆಂಟಿಲೇಟರ್ ನಲ್ಲಿದ್ದ. ಈಗ ವೆಂಟಿಲೇಟರ್ ಇಲ್ಲದೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೀಘ್ರವಾಗಿ ಅವನು ಚೇತರಿಸಿಕೊಳ್ಳುತ್ತಾನೆ ಎಂದು ವೈದ್ಯರು ಹೇಳಿದ್ದಾರೆ ಎಂದು ಅಲ್ಲು ಅವರ ತಂದೆ ಹೇಳಿದ್ದಾರೆ.