ಬೆಂಗಳೂರು: ಕಿಚ್ಚ ಸುದೀಪ್ (Kiccha Sudeep) ಅವರ ʼಮ್ಯಾಕ್ಸ್ʼ (Max Movie) ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ರಾಜ್ಯದೆಲ್ಲೆಡೆ ಚಿತ್ರಕ್ಕೆ ಸಖತ್ ಪ್ರತಿಕ್ರಿಯೆ ಸಿಗುತ್ತಿದೆ.
ಬಾಕ್ಸ್ ಆಫೀಸ್‌ನಲ್ಲಿ ಕಲೆಕ್ಷನ್ ವಿಚಾರದಲ್ಲೂ ʼಮ್ಯಾಕ್ಸ್ʼ ಹಿಂದೆ ಬಿದ್ದಿಲ್ಲ. ಕನ್ನಡದ ʼಯುಐʼ ಚಿತ್ರವೂ ಭರ್ಜರಿ ರೆಸ್ಪಾನ್ಸ್ ಪಡೆಯುತ್ತಿದ್ದು, ಈ ನಡುವೆ ʼಮ್ಯಾಕ್ಸ್ʼ ರಿಲೀಸ್ ಆಗಿರುವುದು ಸಿನಿಮಂದಿಗೆ ಭರಪೂರ ಮನರಂಜನೆ ಸಿಕ್ಕಂತಾಗಿದೆ.
ಔಟ್ ಅಂಡ್ ಔಟ್ ಮಾಸ್ ಸಿನಿಮಾವೊಂದಕ್ಕೆ ಥ್ರಿಲ್ಲರ್ ಕಥೆಯೊಂದನ್ನು ಸೇರಿಸಿ ಅದನ್ನು ಸರಾಗವಾಗಿ ಹೇಳುವ ಮೂಲಕ “ಮ್ಯಾಕ್ಸ್’ ಸಿನಿಮಾ ಪ್ರೇಮಿಗಳಿಗೆ “ಮ್ಯಾಕ್ಸಿಮಮ್’ ಮನರಂಜನೆ ಒದಗಿಸುತ್ತದೆ. ಆ ಮೂಲಕ ಸುದೀಪ್ ಅವರ ಕ್ಯಾರೆಕ್ಟರ್‌ಗೆ ತಕ್ಕಂತೆ ನಿರ್ದೇಶಕ ವಿಜಯ್ ಕಾರ್ತಿಕೇಯ ಕಥೆಯನ್ನು ಹಣೆದಿರುವುದು ಪ್ರೇಕ್ಷಕರ ಮನ ಗೆದ್ದಿದೆ.
ಕಥೆ ಹೇಗಿದೆ?: ಚಿತ್ರದ ಕಥೆಯ ಬಗ್ಗೆ ಹೇಳುವುದಾದರೆ ಸುದೀಪ್ ಇಲ್ಲಿ ಪೊಲೀಸ್ ಆಫೀಸರ್. ಆದರೆ, ಆ ಕುರುಹು ಸಿನಿಮಾದಲ್ಲಿ ಸಿಗುವುದು ಕೇವಲ ಪೊಲೀಸ್ ಸ್ಟೆಷನ್‌ನಲ್ಲಿ ಮಾತ್ರ. ಏಕೆಂದರೆ ಸುದೀಪ್ ಒಂದೇ ಒಂದು ದೃಶ್ಯದಲ್ಲೂ ಪೊಲೀಸ್ ಕಾಸ್ಟ್ಯೂಮ್, ಮ್ಯಾನರಿಸಂನಲ್ಲಿ ಕಾಣ ಸಿಗುವುದಿಲ್ಲ. ಏಕೆಂದರೆ ಮರುದಿನ ಬೆಳಗ್ಗೆ ಡ್ನೂಟಿಗೆ ರಿಪೋರ್ಟ್ ಮಾಡಿಕೊಳ್ಳಬೇಕಾದ ಮ್ಯಾಕ್ಸ್ ಮುಂಚಿನ ದಿನ ರಾತ್ರಿಯೇ ಸ್ಟೆಷನ್ ಎಂಟ್ರಿಯಾಗುತ್ತಾನೆ. ಅಲ್ಲಿಂದ ಗೇಮ್ ಶುರು. ದುಷ್ಟರನ್ನು ಮಟ್ಟ ಹಾಕುತ್ತಾ, ಪೊಲೀಸ್ ಖದರ್ ತೋರಿಸುವುದೇ “ಮ್ಯಾಕ್ಸ್’ ಕಥೆ. ಮೊದಲೇ ಹೇಳಿದಂತೆ ಒಂದೇ ರಾತ್ರಿಯಲ್ಲಿ ನಡೆಯುವ ಕಥೆಯಾದ್ದರಿಂದ ಟೈಮ್ ಟು ಟೈಮ್ ಇಲ್ಲಿ ಗೇಮ್ ಬದಲಾಗುತ್ತಾ ಸಾಗುವ ಮೂಲಕ ಚಿತ್ರ ಪ್ರೇಕ್ಷಕರನ್ನು ತಮ್ಮ ಜೊತೆಗೆ ಹೆಜ್ಜೆ ಹಾಕಿಸುತ್ತದೆ.
ಮೊದಲ ದಿನದ ಗಳಿಕೆ ಎಷ್ಟು?: ಭಾರೀ ನಿರೀಕ್ಷೆ ಹುಟ್ಟಿಸಿದ ʼಮ್ಯಾಕ್ಸ್ʼ ಬಾಕ್ಸಾಫೀಸ್ ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಅಡ್ವಾನ್ಸ್ ಬುಕಿಂಗ್ ವಿಚಾರದಲ್ಲಿ ಸದ್ದು ಮಾಡಿದ ʼಮ್ಯಾಕ್ಸ್ʼ ಟ್ರೇಡಿಂಗ್ ವೆಬ್ ಪೋರ್ಟಲ್ ಸ್ಯಾಕ್ನಿಲ್ಕ್ ಪ್ರಕಾರ ಮೊದಲ ದಿನ 8.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ವಿತರಕರ ಪ್ರಕಾರ ಈ ಲೆಕ್ಕಚಾರ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಸುಮಾರು 950 ಸ್ಕ್ರೀನ್‌ಗಳಲ್ಲಿ ತೆರೆಕಂಡಿದೆ. ರಿಲೀಸ್‌ಗೂ ಮುನ್ನ ಕರ್ನಾಟಕದಲ್ಲಿ 1 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಸೇಲಾಗಿತ್ತು. ಆ ಮೂಲಕ 2.50 ಕೋಟಿ ರೂ. ಗಳಿಸಿತ್ತು.
ವೀಕೆಂಡ್ ನಲ್ಲಿ ʼಮ್ಯಾಕ್ಸ್ʼಗೆ ರೆಸ್ಪಾನ್ಸ್ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಸುದೀಪ್ ಜತೆ ವರಲಕ್ಷ್ಮೀ ಶರತ್ ಕುಮಾರ್, ಸುನಿಲ್, ಉಗ್ರಂ ಮಂಜು, ಸಂಯುಕ್ತಾ, ಸುಕೃತಾ, ಸುಧಾ ಬೆಳವಾಡಿ ಮುಂತಾದವರು ನಟಿಸಿದ್ದಾರೆ.