ಹೈದರಾಬಾದ್ : ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ “ಪುಷ್ಪ 2: ದಿ ರೂಲ್” ಬಿಡುಗಡೆಯಾದ ಕೇವಲ 10 ದಿನಗಳಲ್ಲಿ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದ್ದು, ಬರೋಬ್ಬರಿ 1,292 ಕೋಟಿ ರೂಪಾಯಿಗಳನ್ನು ಕಲೆ ಹಾಕಿದೆ ಎಂದು ಚಿತ್ರ ನಿರ್ಮಾಪಕರು ರವಿವಾರ(ಡಿ15) ತಿಳಿಸಿದ್ದಾರೆ.
ಸುಕುಮಾರ್ ನಿರ್ದೇಶನದ ತೆಲುಗು ಮೂಲ ಭಾಷೆಯ ಚಿತ್ರ ಡಿಸೆಂಬರ್ 5 ರಂದು ಹಿಂದಿ, ತಮಿಳು, ಕನ್ನಡ, ಬೆಂಗಾಲಿ ಮತ್ತು ಮಲಯಾಳಂ ಭಾಷೆಗಳಲ್ಲಿ ಡಬ್ಬಿಂಗ್ ಆವೃತ್ತಿಗಳೊಂದಿಗೆ ವಿಶ್ವಾದ್ಯಂತ ಬಿಡುಗಡೆಯಾಗಿ ತುಂಬಿದ ಗೃಹಗಳಲ್ಲಿ ಪ್ರದರ್ಶನ ಕಾಣುತ್ತಿದೆ.
ನಿರ್ಮಾಣ ಬ್ಯಾನರ್ Mythri Movie Makers ತನ್ನ ಅಧಿಕೃತ X ಖಾತೆಯಲ್ಲಿ ಇತ್ತೀಚಿನ ಬಾಕ್ಸ್ ಆಫೀಸ್ ಅಪ್ಡೇಟ್ ಚಿತ್ರದ ಪೋಸ್ಟರ್ನೊಂದಿಗೆ ಹಂಚಿಕೊಂಡಿದೆ, “2024 ರಲ್ಲಿ ಭಾರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚು ಗಳಿಕೆ ಕಂಡಿದೆ. ವಿಶ್ವದಾದ್ಯಂತ 10 ದಿನಗಳಲ್ಲಿ 1292 ಕೋಟಿ ರೂ. ಕಲೆಕ್ಷನ್ ಮಾಡಿದೆ. 2024 ರಲ್ಲಿ ಭಾರತೀಯ ಸಿನಿಮಾದ ಅತಿ ಹೆಚ್ಚು ಗಳಿಕೆ ಕಂಡ ಚಿತ್ರ ಎನಿಸಿಕೊಂಡಿದೆ.
ವಿಶೇಷವೆಂದರೆ “ಪುಷ್ಪ 2” ನ ಹಿಂದಿ ಡಬ್ಬಿಂಗ್ ಗಳಿಕೆ 507.50 ಕೋಟಿ ರೂಪಾಯಿಯಾಗಿದ್ದು, 500 ಕೋಟಿ ರೂ.ಗಳ ಗಡಿಯನ್ನು ದಾಟಿದ ಹಿಂದಿಯ ಅತಿವೇಗದ ಚಿತ್ರ ಎಂಬ ದಾಖಲೆಗೆ ಭಾಜನವಾಗಿದೆ.
“ಪುಷ್ಪ 2” ಪ್ರಥಮ ಪ್ರದರ್ಶನದ ಸಂದರ್ಭದಲ್ಲಿ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾ*ವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ಅಲ್ಲು ಅರ್ಜುನ್ ಶನಿವಾರ ಬೆಳಗ್ಗೆ ಹೈದರಾಬಾದ್ನ ಜೈಲಿನಲ್ಲಿ ರಾತ್ರಿ ಕಳೆದು ಬಿಡುಗಡೆಯಾಗಿದ್ದರು. ಬಂಧನದ ನಂತರ ಅಲ್ಲು ಅರ್ಜುನ್ ಅವರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾದ ಬೆನ್ನಲ್ಲೇ ತೆಲಂಗಾಣ ಹೈಕೋರ್ಟ್ ಮಧ್ಯಾಂತರ ಜಾಮೀನು ನೀಡಿತ್ತು. ಈ ವಿಚಾರ ಭಾರೀ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು.