ಹೈದರಾಬಾದ್: ʼಪುಷ್ಪ-2ʼ (Pushpa 2) ಚಿತ್ರದ ಪ್ರಿಮಿಯರ್ ಶೋ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತ ಪ್ರಕರಣ ಸುದ್ದಿಯಲ್ಲಿರುವಾಗಲೇ ಚಿತ್ರದ ಹಾಡೊಂದು ಸೋಶಿಯಲ್ ಮೀಡಿಯಾದಲ್ಲಿ ರಿಲೀಸ್ ಆಗಿ ಭಾರೀ ವೈರಲ್ ಆದ ಬೆನ್ನಲ್ಲೇ ಅದನ್ನು ಡಿಲೀಟ್ ಮಾಡಲಾಗಿದೆ.
ಡಿ.4 ರಂದು ಸಂಧ್ಯಾ ಥಿಯೇಟರ್‌ನಲ್ಲಿ ಕಾಲ್ತುಳಿತ (Sandhya Theatre Stampede) ಉಂಟಾಗಿ ರೇವತಿ ಎನ್ನುವ ಮಹಿಳೆ ಮೃತಪಟ್ಟಿದ್ದರು. ಈ ಘಟನೆ ಬೆನ್ನಲ್ಲೇ ಅಲ್ಲು ಅರ್ಜುನ್ (Allu Arjun) ಮೇಲೆ ಎಫ್ ಐಆರ್ ದಾಖಲಿಸಿ ಪೊಲೀಸರು ಅವರನ್ನು ಬಂಧಿಸಿದ್ದರು. ಮಧ್ಯಂತರ ಜಾಮೀನು ಪಡೆದು ಆಚೆ ಬಂದ ಬಳಿಕವೂ ಪೊಲೀಸರು ಅಲ್ಲು ಅರ್ಜುನ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು.
ಪೊಲೀಸರು ಅಲ್ಲು ಅರ್ಜುನ್ ಅವರನ್ನು ಬಂಧಿಸಿದ ವಿಚಾರ ಆಂಧ್ರದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ನಡುವೆ ಡಿ.24 ರಂದು ಟಿ- ಸಿರೀಸ್‌ನಲ್ಲಿ ʼಪುಷ್ಪ-2ʼ ಚಿತ್ರದ ಹಾಡೊಂದನ್ನು ಚಿತ್ರತಂಡ ರಿಲೀಸ್ ಮಾಡಿತ್ತು.
ʼದಮ್ಮುಂಟೆ ಪತ್ತುಕೋರʼ (ದಮ್ಮು ಇದ್ರೆ ಹಿಡಿದು ನೋಡು) ಎನ್ನುವ ಹಾಡನ್ನು ಚಿತ್ರತಂಡ ರಿಲೀಸ್ ಮಾಡಿತ್ತು. ದೇವಿ ಶ್ರೀ ಪ್ರಸಾದ್ ಸಂಯೋಜನೆಯ ಹಾಡಿಗೆ ಅಲ್ಲು ಅರ್ಜುನ್ ಧ್ವನಿಯಾಗಿದ್ದು, ನಿರ್ದೇಶಕ ಸುಕುಮಾರ್ ಬರೆದ ಸಾಹಿತ್ಯವನ್ನು ಬರೆದಿದ್ದಾರೆ.
ಈ ಹಾಡು ʼಪುಷ್ಪʼ ಹಾಗೂ ಪೊಲೀಸ್ ಅಧಿಕಾರಿ ಭನ್ವರ್ ಸಿಂಗ್ ಶೇಖಾವತ್ (ಫಾಹದ್ ಫಾಸಿಲ್) ನಡುವಿನ ಮುಖಾಮುಖಿಯನ್ನು ತೋರಿಸುತ್ತದೆ.
ʼದಮ್ಮುಂಟೆ ಪಟ್ಟುಕೋರ (Dammunte Pattukora) ಶೇಖಾವತ್ʼ (ನಿಮಗೆ ಧೈರ್ಯವಿದ್ದರೆ ನನ್ನನ್ನು ಹಿಡಿ ಶೇಖಾವತ್!) ಎನ್ನುವ ಸಾಹಿತ್ಯವಿರುವ ಹಾಡು ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿತ್ತು. ಇದು ಶೇಖಾವತ್ ಅವರಿಗೆ ʼಪಷ್ಪʼ ಸವಾಲು ಎಸೆಯುವ ಹಾಡಾಗಿತ್ತು.
ಆದರೆ ಹಾಡಿನ ಸಾಹಿತ್ಯ ಹಾಗೂ ಪ್ರಸ್ತುತ ಕಾಲ್ತುಳಿತ ಪ್ರಕರಣದಿಂದ ನಡೆಯುತ್ತಿರುವ ಕೆಲವೊಂದಿಷ್ಟು ವಿಚಾರಗಳಿಂದ ಈ ಹಾಡು ಈಗಿನ ಸ್ಥಿತಿಯಲ್ಲಿ ವಿವಾದಕ್ಕೀಡು ಮಾಡಿದೆ.
ನೆಟ್ಟಿಗರಲ್ಲಿ ಕೆಲ ಮಂದಿ ಈ ಹಾಡಿನ ಕುರಿತು ಕರೆಕ್ಟ್ ಟೈಮಿಂಗ್ ಹಾಡು ರಿಲೀಸ್ ಮಾಡಿದ್ದೀರಿ ಎಂದು ಕಮೆಂಟ್ ಮಾಡಿದ್ದಾರೆ. ಪೊಲೀಸರಿಗೆ ಅಲ್ಲು ಅರ್ಜುನ್ ಧೈರ್ಯವಿದ್ದರೆ ಬಂಧಿಸಿ ಎನ್ನುವ ಹಾಗೆ ಈ ಹಾಡು ಇದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಹಾಡು ವಿವಾದದೆಡೆಗೆ ಸಾಗುತ್ತಿದ್ದಂತೆ ಟಿ- ಸಿರೀಸ್ ಹಾಡನ್ನು ಸೋಶಿಯಲ್ ಮೀಡಿಯಾದಿಂದ ಡಿಲೀಟ್ ಮಾಡಿದೆ.
ಇನ್ನೊಂದೆಡೆ ಮೃತ ರೇವತಿಯ ಪುತ್ರ ಕಾಲ್ತುಳಿತ ಪ್ರಕರಣದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯುತ್ತಿದ್ದು, ಬುಧವಾರ (ಡಿ.25 ರಂದು) ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್, ನಿರ್ಮಾಪಕರ ದಿಲ್ ರಾಜ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರವನ್ನು ನೀಡಿದೆ.