ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಣುತೆಯ ನೀತಿ ಮುಂದಿನ ದಿನಗಳಲ್ಲಿಯೂ ಮುಂದುವರಿಯುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಇಲ್ಲಿ ನಡೆದ ಸಿಐಎಸ್‌ಎಫ್ ನ 54ನೇ ರೈಸಿಂಗ್ ಡೇ ಪರೇಡ್ ನಲ್ಲಿ ಮಾತನಾಡಿದ ಅವರು, ದೇಶದ ಯಾವುದೇ ಭಾಗದಲ್ಲಿ ಪ್ರತ್ಯೇಕತಾವಾದ, ಭಯೋತ್ಪಾದನೆ ಮತ್ತು ದೇಶ ವಿರೋಧಿ ಚಟುವಟಿಕೆಗಳನ್ನು ದೃಢವಾಗಿ ಎದುರಿಸಲಾಗುವುದು ಎಂದು ಹೇಳಿದರು.
ಕಳೆದ ಒಂಬತ್ತು ವರ್ಷಗಳಲ್ಲಿ ಎನ್‌ಡಿಎ ಸರ್ಕಾರವು ಆಂತರಿಕ ಭದ್ರತಾ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸಿದೆ ಎಂದ ಕೇಂದ್ರ ಸಚಿವರು, ಕಾಶ್ಮೀರದಲ್ಲಿ ಹಿಂಸಾಚಾರ ಗಣನೀಯವಾಗಿ ಕಡಿಮೆಯಾಗುತ್ತಿದೆ. ಈಶಾನ್ಯ ಮತ್ತು ಎಡಪಂಥೀಯ ಉಗ್ರಗಾಮಿ ಪೀಡಿತ ಪ್ರದೇಶಗಳಲ್ಲಿ ಬಂಡಾಯವೂ ಕಡಿಮೆಯಾಗಿದೆ ಮತ್ತು ಜನರ ವಿಶ್ವಾಸ ಹೆಚ್ಚುತ್ತಿದೆ ಎಂದರು.
ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿರುವವರ ಸಂಖ್ಯೆ ಕ್ಷೀಣಿಸುತ್ತಿದೆ ಮತ್ತು ಅನೇಕರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಸೇರುತ್ತಿದ್ದಾರೆ ಎಂದು ಅವರು ಹೇಳಿದರು.
ಮೊದಲ ಬಾರಿಗೆ, ಸಿಐಸಿಎಫ್ ತನ್ನ ವಾರ್ಷಿಕ ರೈಸಿಂಗ್ ಡೇ ಆಚರಣೆಗಳನ್ನು ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದಿಂದ (ಎನ್ ಸಿಆರ್) ಹೊರಗಡೆ ಇಲ್ಲಿನ ಹಕಿಂಪೇಟ್ ನಲ್ಲಿರುವ ಸಿಐಎಸ್ಎಫ್ ನ್ಯಾಷನಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಅಕಾಡೆಮಿಯಲ್ಲಿ ನಡೆಸುತ್ತಿದೆ.