ಹೊಸದಿಲ್ಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರ ʼಅಂಬೇಡ್ಕರ್ ಜಪʼ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಅಮಿತ್ ಶಾ ಹೇಳಿಕೆಯನ್ನು ಖಂಡಿಸಿ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿದೆ. ಗುರುವಾರವೂ (ಡಿ.19) ಪ್ರತಿಭಟನೆ ಮುಂದುವರಿದಿದ್ದು, ಸಂಸತ್ ಭವನದ ಎದುರು ಅಂಬೇಡ್ಕರ್ ಭಾವಚಿತ್ರ ಹಿಡಿದು ಅಮಿತ್ ಶಾ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದಾರೆ.
ಹಿರಿಯ ರಾಜಕಾರಣಿ, ರಾಷ್ಟ್ರೀಯ ಜನತಾ ದಳ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಕೂಡಾ ಅಮಿತ್ ಶಾ ವಿರುದ್ದ ಕಿಡಿಕಾರಿದ್ದಾರೆ. “ಅಮಿತ್ ಶಾಗೆ ಹುಚ್ಚು ಹಿಡಿದಿದೆ, ಅವರು ರಾಜೀನಾಮೆ ನೀಡಿ ರಾಜಕೀಯವನ್ನೇ ತ್ಯಜಿಸಬೇಕು” ಎಂದು ಕಟು ಶಬ್ದಗಳಲ್ಲಿ ಖಂಡಿಸಿದ್ದಾರೆ.
“ಅಮಿತ್ ಶಾ ಅವರಿಗೆ ಹುಚ್ಚು ಹಿಡಿದಿದೆ. ಅವರಿಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೇಲೆ ದ್ವೇಷವಿರಬೇಕು. ಅವರ ಈ ಹುಚ್ಚುತನವನ್ನು ನಾವು ಖಂಡಿಸುತ್ತೇವೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಶ್ರೇಷ್ಠರು. ಶಾ ರಾಜಕೀಯವನ್ನು ತ್ಯಜಿಸಿ ಹೊರಹೋಗಬೇಕು,” ಎಂದು ಲಾಲು ಯಾದವ್ ಹೇಳಿದ್ದಾರೆ.
ಇದಕ್ಕೂ ಮೊದಲು ಬಿಹಾರದ ಮಾಜಿ ಡಿಸಿಎಂ ತೇಜಸ್ವಿ ಯಾದವ್ ಅವರು ಶಾ ವಿರುದ್ದ ಟೀಕೆ ಮಾಡಿದ್ದರು. ಅಲ್ಲದೆ ಬಿಜೆಪಿಯು ಸಂವಿಧಾನ ವಿರೋಧಿ ಎಂದಿದ್ದರು.
“ಬಾಬಾಸಾಹೇಬ್ ಅಂಬೇಡ್ಕರ್ ನಮ್ಮ ಫ್ಯಾಶನ್ ಮತ್ತು ಪ್ಯಾಶನ್. ಅವರು ನಮ್ಮ ಪ್ರೇರಣೆ ಮತ್ತು ಸ್ಫೂರ್ತಿ. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾನಿಸಲು ನಾವು ಯಾರಿಗೂ ಬಿಡುವುದಿಲ್ಲ. ಈ ಜನರು ದ್ವೇಷವನ್ನು ಹರಡುವ ಸಂವಿಧಾನ ವಿರೋಧಿಗಳು ಮತ್ತು ಸಂಸತ್ತಿನಲ್ಲಿ ಬಳಸಿದ ಭಾಷೆ ಖಂಡನೀಯ” ಎಂದು ಯಾದವ್ ಎಎನ್ಐಗೆ ತಿಳಿಸಿದರು.
ಅಮಿತ್ ಶಾ ಹೇಳಿದ್ದೇನು?
“ಅಂಬೇಡ್ಕರ್ ಜಪ ಮಾಡುವುದು ಕೆಲವರಿಗೆ ಫ್ಯಾಷನ್ ಆಗಿದೆ. ಅಂಬೇಡ್ಕರ್ ಎಂದು ಜಪಿಸುವುದರ ಬದಲು ಅಷ್ಟು ಬಾರಿ ದೇವರ ಹೆಸರನ್ನಾದರೂ ಜಪಿಸಿದ್ದರೆ ಏಳು ಜನ್ಮಗಳಿಗೆ ಸ್ವರ್ಗ ಪ್ರಾಪ್ತಿಯಾಗುತ್ತಿತ್ತು’ ಎಂದು ರಾಜ್ಯಸಭೆಯಲ್ಲಿ ಸಂವಿಧಾನದ ಮೇಲಿನ ಚರ್ಚೆಯ ಸಮಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು.