ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರ ವಿರುದ್ಧ ಪರಿಶೀಲನೆ ನಡೆಸುವ ವೇಳೆ 175 ಮಂದಿಯನ್ನು ಪತ್ತೆ ಹಚ್ಚಿರುವುದಾಗಿ ದೆಹಲಿ ಪೊಲೀಸರು ರವಿವಾರ(ಡಿ22) ತಿಳಿಸಿದ್ದಾರೆ.
ದೆಹಲಿ ಹೊರವಲಯದಲ್ಲಿ 12 ಗಂಟೆಗಳ ಪತ್ತೆ ಕಾರ್ಯಾಚರಣೆಯನ್ನು ಶನಿವಾರ ಸಂಜೆ 6 ಗಂಟೆಗೆ ಆರಂಭಿಸಲಾಗಿತ್ತು.
“ಮಾನ್ಯ ದಾಖಲೆಗಳಿಲ್ಲದೆ ವಾಸಿಸುತ್ತಿರುವವರನ್ನು ಗುರುತಿಸಲು ಮತ್ತು ಬಂಧಿಸಲು ಪೊಲೀಸರು ತಮ್ಮ ಪ್ರಯತ್ನಗಳನ್ನು ತೀವ್ರಗೊಳಿಸಿದ್ದಾರೆ. ನಡೆಯುತ್ತಿರುವ ಕಾರ್ಯಾಚರಣೆಗಳ ಭಾಗವಾಗಿ, 175 ವ್ಯಕ್ತಿಗಳನ್ನು ಶಂಕಿತ ಅಕ್ರಮ ಬಾಂಗ್ಲಾದೇಶಿ ವಲಸಿಗರು ಎಂದು ದೆಹಲಿಯ ಹೊರಭಾಗದಲ್ಲಿ ಗುರುತಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಕಠಿನ ಕ್ರಮ ಕೈಗೊಳ್ಳಲು ಆದೇಶ ನೀಡಿದ ಬಳಿಕ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಗುರುತಿಸುವ ಕಾರ್ಯಾಚರಣೆಯನ್ನು ನಗರ ಪೊಲೀಸರು ಡಿಸೆಂಬರ್ 11 ರಂದು ಪ್ರಾರಂಭಿಸಿದ್ದರು.
FRRO ಗೆ ಡೇಟಾವನ್ನು ಕಳುಹಿಸುವುದರ ಜತೆಗೆ, ಆಧಾರ್ ಕಾರ್ಡ್‌ಗಳ ಅಸಲಿತನವನ್ನು ಪೊಲೀಸರು ವೈಯಕ್ತಿಕವಾಗಿ ಪರಿಶೀಲಿಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಇಡೀ ರಾಷ್ಟ್ರ ರಾಜಧಾನಿಯಾದ್ಯಂತ ತಪಾಸಣೆಯ ಸಮಯದಲ್ಲಿ 1,500 ಮಂದಿ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಗುರುತಿಸಲಾಗಿದೆ.