Advertisement

Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್‌ ಉತ್ಸವ’ ಮಾಡಲ್ಲ: ಬಿಜೆಪಿ

11:40 PM Dec 18, 2024 | Team Udayavani |

ಬೆಂಗಳೂರು: ಅಂಬೇಡ್ಕರ್‌ ಕುರಿತು ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೀಡಿದ ವ್ಯಾಖ್ಯಾನಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ನಾಯಕರ ಟೀಕೆಗೆ ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ್‌ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿರುಗೇಟು ನೀಡಿದ್ದಾರೆ.

Advertisement

ಹತ್ತಾರು ಕೋಟಿ ಖರ್ಚು ಮಾಡಿ ‘ಸಿದ್ದರಾಮೋತ್ಸವ’ ಮಾಡಿಸಿಕೊಳ್ಳುವ ತಮಗೆ ‘ಅಂಬೇಡ್ಕರ್‌ ಉತ್ಸವ’ ಮಾಡಬೇಕೆಂದೆನಿಸುವುದಿಲ್ಲ. ಯಾಕೆಂದರೆ ತಮಗೆ ಅಂಬೇಡ್ಕರ್‌ ನೆನಪಾಗೋದು ಚುನಾವಣೆ ಸಂದರ್ಭದಲ್ಲಿ ಮಾತ್ರ. ಕುರ್ಚಿಗಾಗಿ, ಅಧಿಕಾರಕ್ಕಾಗಿ ಹೈಕಮಾಂಡ್‌ ನಾಯಕರನ್ನು ಮೆಚ್ಚಿಸಲು ದುಂಬಾಲು ಬೀಳುವ ತಮಗೆ, ಇಂದಿರಾ ಕ್ಯಾಂಟೀನ್‌ ಬದಲು ಅಂಬೇಡ್ಕರ್‌ ಕ್ಯಾಂಟೀನ್‌ ಎಂದು ಹೆಸರಿಡಬಹುದಾಗಿತ್ತು ಎಂದು ಅನ್ನಿಸಲೇ ಇಲ್ಲ. ಯಾಕೆಂದರೆ ತಮಗೆ ಅಂಬೇಡ್ಕರ್‌ ಅವರ ಬಗ್ಗೆ ಬದ್ಧತೆಯೇ ಇಲ್ಲ. ಆರೂವರೆ ವರ್ಷ ಮುಖ್ಯಮಂತ್ರಿ ಆಗಿರುವ ತಾವು ಯಾವುದಾದರೂ ಒಂದು ಯೋಜನೆಗೆ, ಒಂದು ಕಾರ್ಯಕ್ರಮಕ್ಕೆ ಅಂಬೇಡ್ಕರ್‌ ಅವರ ಹೆಸರಿಟ್ಟಿದ್ದೀರಾ? ಎಂದು ಅಶೋಕ ಪ್ರಶ್ನಿಸಿದ್ದಾರೆ.

ಅಂಬೇಡ್ಕರ್‌ ಅವರನ್ನು ಚುನಾವಣೆಯಲ್ಲಿ ಸೋಲಿಸಿದ, ಅವರ ಅಂತ್ಯ ಸಂಸ್ಕಾರಕ್ಕೆ ಭೂಮಿ ನೀಡಲು ನಿರಾಕರಿಸಿದ, ತಮಗೆ ತಾವೇ ಭಾರತ ರತ್ನ ಕೊಟ್ಟುಕೊಂಡ ನೀಚ ಮನಸ್ಥಿತಿ ನಿಮ್ಮ ಕಾಂಗ್ರೆಸ್‌ ಪಕ್ಷದ್ದು. ಇದೀಗ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಭಾಷಣವನ್ನು ತಿರುಚಿ ಮತ್ತೊಮ್ಮೆ ಬಾಬಾ ಸಾಹೇಬರನ್ನು ಅವಮಾನಿಸುತ್ತಿದ್ದೀರಿ. ಕಾಂಗ್ರೆಸ್‌ ಅಂಬೇಡ್ಕರ್‌ ಅವರಿಗೆ ಮಾಡಿದ ಮಹಾ ಮೋಸವನ್ನು, ಮಹಾ ಅಪಮಾನಗಳನ್ನ ಎಳೆ ಎಳೆಯಾಗಿ ದೇಶದ ಜನತೆಯ ಮುಂದೆ ಬಿಚ್ಚಿಟ್ಟ ಅಮಿತ್‌ ಶಾ ಅವರ ಭಾಷಣದಿಂದ ತಮಗೆ ಮುಜುಗರ, ಹತಾಶೆ ಆಗಿರುವುದು ಆಶ್ಚರ್ಯವೇನಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಅಮಿತ್‌ ಶಾ ಅವರ ಭಾಷಣವನ್ನು ತಿರುಚಿ, ಅರ್ಧ ಸತ್ಯ ಹೇಳುವ ವಿಡಿಯೋ ಹಾಕಿ ತಾವು ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಬಹುದಷ್ಟೇ. ಆದರೆ ಅಂಬೇಡ್ಕರ್‌ ಅವರ ಬಗ್ಗೆ, ಅವರು ರಚಿಸಿದ ಸಂವಿಧಾನದ ಬಗ್ಗೆ ತಮ್ಮ ಹಾಗು ತಮ್ಮ ದಲಿತ ವಿರೋಧಿ ಕಾಂಗ್ರೆಸ್‌ ಪಕ್ಷದ ಆಷಾಢಭೂತಿತನವನ್ನ ಮರೆಮಾಚಲು ಸಾಧ್ಯವೇ ಇಲ್ಲ ಎಂದು ಟೀಕಿಸಿದ್ದಾರೆ.

ನೀವು ದಲಿತ ನಾಯಕರನ್ನು ಸೋಲಿಸಿದ್ದಿರಿ :
ಅಂಬೇಡ್ಕರ್‌ ಅವರ ಬಗ್ಗೆ ಅತಿಯಾದ ಅಭಿಮಾನ ಪ್ರದರ್ಶಿಸುವ ಸಿದ್ದರಾಮಯ್ಯನವರೇ, ಅಂದು ಅಂಬೇಡ್ಕರ್‌ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದ ಕಾಂಗ್ರೆಸ್ಸಿಗರಂತೆ, ನೀವೂ ಸಹ ಮುಖ್ಯಮಂತ್ರಿ ಆಗಲಿದ್ದ ದಲಿತ ಮುಖಂಡರೊಬ್ಬರನ್ನು 2013ರ ಚುನಾವಣೆಯಲ್ಲಿ ಸೋಲಿಸಿ ಅವರ ಅವಕಾಶ ಕಸಿದುಕೊಂಡಿದ್ದು ಇತಿಹಾಸದ ಪುಟಗಳಲ್ಲಿ ಬಹಿರಂಗ ಸತ್ಯವಾಗಿ ಉಳಿದಿದೆ ಎಂದು ಬಿ.ವೈ.ವಿಜಯೇಂದ್ರ ಕಾಲೆಳೆದಿದ್ದಾರೆ.

Advertisement

ಡಾ.ಜಿ.ಪರಮೇಶ್ವರ ಅವರ ಸೋಲಿನ ಪ್ರಸಂಗವನ್ನು ಪರೋಕ್ಷವಾಗಿ ಪ್ರಸ್ತಾಪಿಸಿರುವ ವಿಜಯೇಂದ್ರ, ಈಗಲೂ ದಲಿತರೊಬ್ಬರು ಮುಖ್ಯಮಂತ್ರಿಯಾಗುವ ಅವಕಾಶದ ಬಾಗಿಲು ತೆರೆಯದೆ ಭ್ರಷ್ಟತೆ ಮೂಟೆ ಹೊತ್ತು ಸಿಎಂ ಸ್ಥಾನವನ್ನು ಭಂಡತನದಿಂದ ಆಕ್ರಮಿಸಿಕೊಂಡಿರುವ ನೀವು ಅಂಬೇಡ್ಕರ್‌ ವಾದ, ಸಮಾಜವಾದ, ಸಾಮಾಜಿಕ ನ್ಯಾಯಗಳ ಬಗ್ಗೆ ಮಾತನಾಡುವ ಹಕ್ಕು ಕಳೆದುಕೊಂಡಿದ್ದೀರಿ.

ಪರಿಶಿಷ್ಟರ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣದ ಕಾರ್ಯಕ್ಕಾಗಿ ಮೀಸಲಿಟ್ಟ ಹಣ ಲೂಟಿಯಾಗಲು ಕಾರಣರಾಗಿದ್ದೀರಿ ಎಂದು ಟೀಕಿಸಿದ್ದಾರೆ. ಈಗಲಾದರೂ ಪರಿಶಿಷ್ಟರು ಹಾಗೂ ಹಿಂದುಳಿದವರಿಗಾಗಿ ಏನನ್ನಾದರೂ ಯೋಜನೆ ಕಾರ್ಯಗತಗೊಳಿಸಿ ನಿಮಗಂಟಿರುವ ಕಳಂಕ ತೊಳೆದುಕೊಳ್ಳಿ ಎಂದು ವ್ಯಂಗ್ಯವಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next