ಹೊಸದಿಲ್ಲಿ: ಶ್ರೀಲಂಕಾದ ಅಧ್ಯಕ್ಷ ಅನುರಾ ಕುಮಾರ ಡಿಸಾನಾಯಕೆ (Anura Kumara Dissanayake) ಅವರು ತಮ್ಮ ಮೊದಲ ಅಧಿಕೃತ ಭಾರತ ಪ್ರವಾಸದಲ್ಲಿ ಪ್ರಾದೇಶಿಕ ಶಾಂತಿಯನ್ನು ಖಾತ್ರಿಪಡಿಸುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಪೂರ್ಣ ಸಹಕಾರದ ಭರವಸೆ ನೀಡಿದ್ದಾರೆ.
ಭಾರತ ಯಾವಾಗಲೂ ಶ್ರೀಲಂಕಾಕ್ಕೆ ಸಹಾಯ ಮಾಡಿದೆ ಮತ್ತು ಭಾರತದ ವಿದೇಶಾಂಗ ನೀತಿಯಲ್ಲಿ ದ್ವೀಪ ರಾಷ್ಟ್ರವು ಬಹಳ ಮಹತ್ವದ ಸ್ಥಾನವನ್ನು ಹೊಂದಿದೆ ಎಂದು ಡಿಸಾನಾಯಕೆ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಲಂಕಾ ಅಧ್ಯಕ್ಷ ಡಿಸಾನಾಯಕೆ ಅವರು, “ಭಾರತದ ಹಿತಾಸಕ್ತಿಗೆ ಧಕ್ಕೆಯಾಗುವ ರೀತಿಯಲ್ಲಿ ನಮ್ಮ ಭೂಮಿಯನ್ನು ಯಾವುದೇ ರೀತಿಯಲ್ಲಿ ಬಳಸಲು ನಾವು ಬಿಡುವುದಿಲ್ಲ ಎಂಬ ಭರವಸೆಯನ್ನು ನಾನು ಭಾರತದ ಪ್ರಧಾನ ಮಂತ್ರಿಯವರಿಗೆ ನೀಡಿದ್ದೇನೆ. ಭಾರತಕ್ಕೆ ನಮ್ಮ ಬೆಂಬಲವನ್ನು ಮತ್ತೊಮ್ಮೆ ಖಚಿತ ಪಡಿಸುತ್ತೇವೆ” ಎಂದಿದ್ದಾರೆ.
ಎರಡು ದೇಶಗಳಿಗೆ ಕಂಟಕವಾಗಿರುವ ಮೀನುಗಾರರ ಸಮಸ್ಯೆಗೆ ಸುದೀರ್ಘ ಮತ್ತು ಸಮರ್ಥನೀಯ ಪರಿಹಾರವೊಂದನ್ನು ಹುಡುಕಬಯಸುವುದಾಗಿ ಡಿಸಾನಾಯಕೆ ಇದೇ ಸಂದರ್ಭದಲ್ಲಿ ಹೇಳಿದರು.
ದೇಶದ ಸಂಕಷ್ಟದ ಸಮಯದಲ್ಲಿ ಭಾರತದ ನೆರವಿನ ಬಗ್ಗೆ ಉಲ್ಲೇಖಿಸಿದ ಡಿಸನಾಯಕೆ, “ನಾವು ಸುಮಾರು 2 ವರ್ಷಗಳ ಹಿಂದೆ ಕಂಡು ಕೇಳರಿಯದ ಆರ್ಥಿಕ ಬಿಕ್ಕಟ್ಟನ್ನು ಎದುರಿಸಿದ್ದೆವು, ಆ ಬವಣೆಯಿಂದ ಹೊರಬರಲು ಭಾರತವು ನಮಗೆ ಅಪಾರವಾಗಿ ಬೆಂಬಲ ನೀಡಿತು. ಅದರ ನಂತರ ವಿಶೇಷವಾಗಿ ಸಾಲ-ಮುಕ್ತ ಪ್ರಕ್ರಿಯೆಯಲ್ಲಿ ಇದು ನಮಗೆ ಅಪಾರವಾಗಿ ಸಹಾಯ ಮಾಡಿದೆ. ಭಾರತದ ವಿದೇಶಾಂಗ ನೀತಿಯಲ್ಲಿ ಶ್ರೀಲಂಕಾವು ಬಹಳ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ ಎಂದು ನನಗೆ ತಿಳಿದಿದೆ. ಪಿಎಂ ಮೋದಿ ನಮಗೆ ಸಂಪೂರ್ಣ ಬೆಂಬಲವನ್ನು ಭರವಸೆ ನೀಡಿದರು. ಅವರು ಯಾವಾಗಲೂ ಶ್ರೀಲಂಕಾದ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ರಕ್ಷಿಸುತ್ತಾರೆ ಎಂದು ಭರವಸೆ ನೀಡಿದರು” ಎಂದು ಲಂಕಾ ಅಧ್ಯಕ್ಷ ಹೇಳಿದರು.