ಬ್ರಿಜ್‌ಟೌನ್ (ಬಾರ್ಬಡಾಸ್): ಬೆರಿಲ್ ಚಂಡಮಾರುತದ ಕಾರಣ ಟಿ 20 ವಿಶ್ವಕಪ್ ವಿಜೇತ ಭಾರತೀಯ ಕ್ರಿಕೆಟ್ ತಂಡ ಕೆರಿಬಿಯನ್ ದ್ವೀಪದಿಂದ ಹೊರಡುವುದು ವಿಳಂಬವಾಗಿದ್ದು AIC24WC ಹೆಸರಿನ ಏರ್ ಇಂಡಿಯಾ ವಿಶೇಷ ಚಾರ್ಟರ್ ಫ್ಲೈಟ್ ಇನ್ನೂ ಬಾರ್ಬಡಾಸ್ ಗೆ ತಲುಪಿಲ್ಲ.
ಕಳೆದ ಮೂರು ದಿನಗಳಿಂದ ಪ್ರಯಾಣ ಸಾಧ್ಯವಾಗದೆ ಸಿಲುಕಿರುವ ಭಾರತೀಯ ತಂಡ, ಅದರ ಸಹಾಯಕ ಸಿಬಂದಿ, ಆಟಗಾರರ ಕುಟುಂಬಗಳು, ಕೆಲವು ಮಂಡಳಿಯ ಅಧಿಕಾರಿಗಳು ಮತ್ತು ಭಾರತೀಯ ಮಾಧ್ಯಮ ಪ್ರತಿನಿಧಿಗಳನ್ನು ಮರಳಿ ಕರೆತರಲು ಚಾರ್ಟರ್ ಫ್ಲೈಟ್ ಸಜ್ಜಾಗಿದೆ.
ಜುಲೈ 2 ರಂದು ಅಮೆರಿಕದ ನ್ಯೂಜೆರ್ಸಿಯಿಂದ ಟೇಕ್ ಆಫ್ ಆಗಿದ್ದ ವಿಮಾನವು ಸ್ಥಳೀಯ ಕಾಲಮಾನ 2 ಗಂಟೆ ಸುಮಾರಿಗೆ ಬಾರ್ಬಡಾಸ್‌ನಲ್ಲಿ ಇಳಿಯುವ ನಿರೀಕ್ಷೆಯಿದೆ. ವೇಳಾಪಟ್ಟಿಯ ಪ್ರಕಾರ, ವಿಮಾನವು ಈಗ ಬಾರ್ಬಡಾಸ್‌ನಿಂದ ಬೆಳಗ್ಗೆ 4.30 ಕ್ಕೆ (ಸ್ಥಳೀಯ ಕಾಲಮಾನ) ಟೇಕ್ ಆಫ್ ಆಗುವ ನಿರೀಕ್ಷೆಯಿದೆ. ದೆಹಲಿಯನ್ನು ತಲುಪಲು 16-ಗಂಟೆಗಳನ್ನು ತೆಗೆದುಕೊಳ್ಳುತ್ತದೆ, ಯಾವುದೇ ವಿಳಂಬಗಳಾಗದೇ ಇದ್ದರೆ ತಂಡ ಗುರುವಾರ ಬೆಳಗ್ಗೆ 6 ಗಂಟೆಗೆ (IST) ಇಳಿಯುತ್ತದೆ.
ಬಾರ್ಬಡಾಸ್ ಗ್ರಾಂಟ್ಲಿ ಆಡಮ್ಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಮಂಗಳವಾರ ತನ್ನ ಕಾರ್ಯಾಚರಣೆಯನ್ನು ಪುನರಾರಂಭಿಸಿದೆ. ಇದಕ್ಕೂ ಮುನ್ನ ಭಾರತೀಯ ತಂಡವು ಜುಲೈ 2 ರಂದು ಸ್ಥಳೀಯ ಕಾಲಮಾನ ಸಂಜೆ 6 ಗಂಟೆಗೆ ಹೊರಟು ಬುಧವಾರ ರಾತ್ರಿ 7.45 ಕ್ಕೆ (IST) ಆಗಮಿಸಬೇಕಿತ್ತು.
ಆಟಗಾರರನ್ನು ಪ್ರಧಾನಿ ನರೇಂದ್ರ ಮೋದಿಯವರು ಸಮ್ಮಾನಿಸಲು ನಿರ್ಧರಿಸಿದ್ದಾರೆ ಆದರೆ ಆ ಕಾರ್ಯಕ್ರಮದ ವೇಳಾಪಟ್ಟಿಯನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ.
4 ಕೆಟಗರಿಯ ಬೆರಿಲ್ ಚಂಡಮಾರುತವು ಈಗ 5 ಕೆಟಗರಿ ಚಂಡಮಾರುತವಾಗ ಚಲಿಸುತ್ತಿದ್ದು ಜಮೈಕಾ ಕಡೆಗೆ ಹೋಗುತ್ತಿದೆ.