ಬ್ರಿಸ್ಬೇನ್: ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಯೊಂದಿಗೆ ಬಾರ್ಡರ್- ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಪಂದ್ಯವನ್ನು ಗೆಲ್ಲಬೇಕೆಂಬ ಭಾರತದ ಕನಸು ಕೂಡಾ ಹರಿದು ಹೋಗುತ್ತಿದೆ. ಮೂರನೇ ದಿನದಾಟದ ಮೊದಲ ಸೆಶನ್ ನಲ್ಲಿ ಟೀಂ ಇಂಡಿಯಾ ಪರಿಸ್ಥಿತಿ ಮತ್ತಷ್ಟು ಶೋಚನೀಯವಾಗಿದ್ದು, ಕೇವಲ 22 ರನ್ ಗಳಿಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿದೆ.
ಆಸ್ಟ್ರೇಲಿಯಾ ತಂಡವು ಮೊದಲ ಇನ್ನಿಂಗ್ಸ್ ನಲ್ಲಿ 445 ರನ್ ಗಳಿಗೆ ಆಲೌಟಾಯಿತು. ಎರಡನೇ ದಿನದಾಟದ ಅಂತ್ಯಕ್ಕೆ ಆಸೀಸ್ ಏಳು ವಿಕೆಟ್ ನಷ್ಟಕ್ಕೆ 405 ರನ್ ಮಾಡಿತ್ತು.
ಭಾರತೀಯ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಈ ಸರಣಿಯಲ್ಲಿ ಮತ್ತೊಮ್ಮೆ ಇನ್ನಿಂಗ್ಸ್ ನ ಮೊದಲ ಓವರ್ ನಲ್ಲಿಯೇ ಔಟಾದರು. ಸ್ಟಾರ್ಕ್ ಎಸೆದ ಮೊದಲ ಚೆಂಡನ್ನು ಬೌಂಡರಿಗಟ್ಟಿದ ಜೈಸ್ವಾಲ್ ಎರಡನೇ ಎಸೆತಕ್ಕೆ ಮಾರ್ಶ್ ಗೆ ಕ್ಯಾಚಿತ್ತು ಔಟಾದರು. ಶುಭಮನ್ ಗಿಲ್ ಕೂಡಾ ಕೇವಲ ಮೂರು ಎಸೆತ ಎದುರಿಸಿ ಸ್ಟಾರ್ಕ್ ಗೆ ವಿಕೆಟ್ ಒಪ್ಪಿಸಿದರು. ಅನುಭವಿ ವಿರಾಟ್ ಹೇಜಲ್ವುಡ್ ಎಸೆತದಲ್ಲಿ ಕೀಪರ್ ಗೆ ಕ್ಯಾಚಿತ್ತು ಪೆವಿಲಿಯನ್ ಗೆ ಮರಳಿದರು. ಅವರ ಗಳಿಕೆ ಮೂರು ರನ್. ಕೆಎಲ್ ರಾಹುಲ್ ಅವರು 13 ರನ್ ಗಳಿಸಿ ಆಡುತ್ತಿದ್ದಾರೆ. ಭಾರತ ಇನ್ನೂ 423 ರನ್ ಹಿನ್ನಡೆಯಲ್ಲಿದೆ.
ಇದಕ್ಕೂ ಮೊದಲು ತಮ್ಮ ಇನ್ನಿಂಗ್ಸ್ ಆರಂಭಿಸಿದ ಆಸೀಸ್ ಗೆ ಕ್ಯಾರಿ ನೆರವಾದರು. 45 ರನ್ ಗಳಿಸಿ ಅಜೇಯರಾಗಿದ್ದ ಕ್ಯಾರಿ ಇಂದು 70 ರನ್ ಗಳಿಸಿದರು. ಸ್ಟಾರ್ಕ್ 18 ರನ್ ಮಾಡಿದರು.
ಭಾರತದ ಪರ ಬುಮ್ರಾ ಆರು ವಿಕೆಟ್ ಪಡೆದರೆ, ಸಿರಾಜ್ ಎರಡು, ಆಕಾಶ್ ದೀಪ್ ಮತ್ತು ನಿತೀಶ್ ರೆಡ್ಡಿ ತಲಾ ಒಂದು ವಿಕೆಟ್ ಕಿತ್ತರು.