Advertisement

ಇಂಗ್ಲೆಂಡ್ ವಿರುದ್ದ ಅಮೋಘ ಗೆಲುವು; ಅಂಡರ್‌-19 ವನಿತಾ ಟಿ20 ವಿಶ್ವಕಪ್‌ ಗೆದ್ದ ಭಾರತ

11:47 PM Jan 29, 2023 | Team Udayavani |

ಪೊಚೆಫ್ ಸ್ಟ್ರೂಮ್: ಇಲ್ಲಿ ರವಿವಾರ ನಡೆದ ಚೊಚ್ಚಲ ಐಸಿಸಿ ವನಿತಾ ಅಂಡರ್‌-19 ಟಿ 20ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಅಜೇಯ ಇಂಗ್ಲೆಂಡ್‌ ವಿರುದ್ಧ ಭಾರತ 7 ವಿಕೆಟ್ ಗಳ ಅಮೋಘ ಗೆಲುವು ಸಾಧಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

Advertisement

ಟಾಸ್ ಗೆದ್ದು ಬೌಲಿಂಗ್ ಆಯ್ಕೆಮಾಡಿಕೊಂಡ ಅದೃಷ್ಟ ಶಫಾಲಿ ವರ್ಮ ನೇತೃತ್ವದ ತಂಡ ಅದ್ಬುತ ಬೌಲಿಂಗ್ ಮೂಲಕ17.1 ಓವರ್ ಗಳಲ್ಲಿ ಕೇವಲ 68 ರನ್ ಗಳಿಗೆ ಇಂಗ್ಲೆಂಡ್ ಅನ್ನು ಕಟ್ಟಿ ಹಾಕಿತು. ಟೈಟಸ್ ಸಾಧು, ಅರ್ಚನಾ ದೇವಿ, ಪಾರ್ಶ್ವಿ ಚೋಪ್ರಾ ತಲಾ 2 ವಿಕೆಟ್ ಕಿತ್ತು ಗಮನ ಸೆಳೆದರೆ, ಮನ್ನತ್ ಕಶ್ಯಪ್, ಶಫಾಲಿ ವರ್ಮ ಮತ್ತು ಸೋನಮ್ ಯಾದವ್ ತಲಾ 1 ವಿಕೆಟ್ ಕಬಳಿಸಿದರು.

ಗುರಿ ಬೆನ್ನಟ್ಟಿದ ಭಾರತ ತಂಡ 16 ರನ್ ಆಗುವಷ್ಟರಲ್ಲಿ 15 ರನ್ ಗಳಿಸಿದ್ದ ಶಫಾಲಿ ವರ್ಮಾ ವಿಕೆಟ್ ಕಳೆದುಕೊಂಡಿತು. ತಂಡದ ಮೊತ್ತ 20 ರನ್ ಆಗಿದ್ದಾಗ ಶ್ವೇತಾ ಸೆಹ್ರಾವತ್ ಅವರ ವಿಕೆಟ್ ಕಳೆದುಕೊಂಡಿತು. ಅವರು 5 ರನ್ ಗಳಿಸಿದ್ದರು. ಆ ಬಳಿಕ ಸೌಮ್ಯ ತಿವಾರಿ (ಔಟಾಗದೆ 24)ಮತ್ತು ಗೊಂಗಡಿ ತ್ರಿಷಾ 24 ರನ್ ಗಳಿಸಿದರು. 14 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 69 ರನ್ ಗಳಿಸಿ ಜಯಭೇರಿ ಬಾರಿಸಿತು.

ಭಾರತ ಲೀಗ್‌ನಲ್ಲಿ ಆಸ್ಟ್ರೇಲಿಯಕ್ಕೆ ಶರಣಾದುದನ್ನು ಬಿಟ್ಟರೆ ಉಳಿದೆಲ್ಲ ಪಂದ್ಯಗಳಲ್ಲಿ ಜಯಭೇರಿ ಮೊಳಗಿಸುತ್ತ ಬಂದಿತ್ತು. ಆದರೆ ಇಂಗ್ಲೆಂಡ್‌ ಅಜೇಯ ತಂಡವಾಗಿತ್ತು. ಪಂದ್ಯಾ ವಳಿಯಲ್ಲಿ ಆಸ್ಟ್ರೇಲಿಯ ಎದುರಿನ ಸೆಮಿ ಫೈನಲ್‌ನಲ್ಲಿ 99ಕ್ಕೆ ಕುಸಿದ್ದು ಬಿದ್ದೇ ಹೋಯಿತು ಎಂಬ ಸ್ಥಿತಿಯಲ್ಲೂ ಎದ್ದು ನಿಂತಿತ್ತು.

ಶಫಾಲಿ ಪಡೆಗೆ ಚಿನ್ನದ ಹುಡುಗನ ಸಲಹೆ
ಫೈನಲ್‌ ಪಂದ್ಯಕ್ಕೂ ಮುನ್ನ ಟೋಕಿಯೊ ಒಲಿಂಪಿಕ್ಸ್‌ ಚಿನ್ನದ ಹುಡುಗ ನೀರಜ್‌ ಚೋಪ್ರಾ ಭಾರತ ತಂಡವನ್ನು ಭೇಟಿಯಾಗಿ ಒತ್ತಡ ನಿಭಾಯಿಸಲು ಅಮೂಲ್ಯ ಸಲಹೆ ನೀಡಿದರು. ನೀರಜ್‌ ಕ್ರಿಕೆಟ್‌ ಹುಡುಗಿಯರಿಗೆ ಪಾಠ ಮಾಡುತ್ತಿರುವ ಚಿತ್ರಗಳನ್ನು ಬಿಸಿಸಿಐ ತನ್ನ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. “ಚಿನ್ನದ ಗುಣಮಟ್ಟದ ಸಭೆ! ಒಲಿಂಪಿಕ್ಸ್‌ ಸ್ವರ್ಣ ಪದಕ ವಿಜೇತ ನೀರಜ್‌ ಚೋಪ್ರಾ ಅಂಡರ್‌-19 ಟಿ20 ವಿಶ್ವಕಪ್‌ ಫೈನಲ್‌ಗ‌ೂ ಮೊದಲು ಭಾರತ ತಂಡದೊಂದಿಗೆ ಸಂವಾದ ನಡೆಸಿದರು’ ಎಂಬುದಾಗಿ ಬಿಸಿಸಿಐ ಬರೆದುಕೊಂಡಿದೆ. ಇದೇ ಸಂದರ್ಭದಲ್ಲಿ ನಾಯಕಿ ಶಫಾಲಿ ವರ್ಮ ಅವರ ಹುಟ್ಟುಹಬ್ಬದ ಸಡಗರದಲ್ಲೂ ಪಾಲ್ಗೊಂಡ ನೀರಜ್‌ ಶುಭ ಹಾರೈಸಿದರು.

Advertisement

5 ಕೋಟಿ ರೂ. ಬಹುಮಾನ
ಅಂಡರ್‌-19 ವಿಶ್ವಕಪ್‌ ವಿಜೇತ ತಂಡಕ್ಕೆ ಬಿಸಿಸಿಐ 5 ಕೋಟಿ ರೂ. ನಗದು ಬಹುಮಾನ ಘೋಷಿಸಿದೆ.
“ಭಾರತೀಯ ವನಿತಾ ಕ್ರಿಕೆಟ್‌ ಸಾಧನೆ ಈಗ ಉನ್ನತ ಮಟ್ಟದಲ್ಲಿದೆ. ವಿಶ್ವಕಪ್‌ ವಿಜಯದಿಂದ ಇದು ನೂತನ ಎತ್ತರ ತಲುಪಿದೆ. ಭಾರತೀಯ ಕ್ರಿಕೆಟನ್ನು ಹೆಮ್ಮೆ ಪಡುವಂತೆ ಮಾಡಿದ ಆಟಗಾರ್ತಿಯರಿಗೆ ಹಾಗೂ ಸಹಾಯಕ ಸಿಬಂದಿಗೆ 5 ಕೋಟಿ ರೂ. ಬಹುಮಾನ ಘೋಷಿಸಲಾಗುತ್ತಿದೆ’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಹೇಳಿದರು. ವಿಶ್ವಕಪ್‌ ವಿಜೇತ ಶಫಾಲಿ ವರ್ಮ ಪಡೆಯನ್ನು ಫೆ. ಒಂದರ ಬುಧವಾರ ಅಹ್ಮದಾ ಬಾದ್‌ಗೆ ಆಹ್ವಾನಿಸಲಾಗಿದ್ದು, ಇಲ್ಲಿ ಸಾಧಕರನ್ನು ಸಮ್ಮಾನಿಸುವ ಕಾರ್ಯಕ್ರಮ ವಿದೆ. ಅಂದಿನ ಭಾರತ- ನ್ಯೂಜಿಲ್ಯಾಂಡ್‌ ನಡುವಿನ 3ನೇ ಟಿ20 ಪಂದ್ಯಕ್ಕೆ ಇವರೆಲ್ಲ ಸಾಕ್ಷಿಯಾಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next