ವಡೋದರ: ವೆಸ್ಟ್ ಇಂಡೀಸ್ ವಿರುದ್ಧದ ರವಿವಾರ ನಡೆದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ವನಿತೆಯರು 211 ರನ್ ಗಳ ಭಾರೀ ಜಯ ಸಾಧಿಸಿದ್ದಾರೆ.
ವೆಸ್ಟ್ ಇಂಡೀಸ್ ವನಿತೆಯರು ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಭಾರತದ ಪರ ಅಮೋಘ ಆಟವಾಡಿದ ಸ್ಮೃತಿ ಮಂಧಾನ 91 ರನ್ ಗಳಿಸಿದ್ದ ವೇಳೆ ಔಟಾಗಿ ನಿರಾಶರಾದರು. ಜೈದಾ ಜೇಮ್ಸ್ ಅವರು ಎಲ್ಬಿಡಬ್ಲ್ಯೂ ಮೂಲಕ ಸ್ಮೃತಿ ಅವರನ್ನು ಔಟಾಗಿಸಿದರು.
ಸಾರ್ವಕಾಲಿಕ ದುರದೃಷ್ಟಕರ ನರ್ವಸ್ 90 ಗೆ ಔಟಾದ ಪಟ್ಟಿಗೆ ಸೇರಿದರು.ನಾಲ್ಕನೇ ಬಾರಿಗೆ ಮಂಧಾನ ಏಕದಿನದಲ್ಲಿ ನರ್ವಸ್ 90 ಗೆ ಔಟಾದರು, ವೆಸ್ಟ್ ಇಂಡೀಸ್ನ ಸ್ಟಾಫಾನಿ ಟೇಲರ್ 90 ದಾಟಿ ಅತಿ ಹೆಚ್ಚು ಬಾರಿ ಔಟಾದ ವನಿತಾ ಬ್ಯಾಟರ್ ಎಂಬ ದಾಖಲೆ ಹೊಂದಿದ್ದಾರೆ. ಪ್ರತೀಕಾ ರಾವಲ್ 40, ಹರ್ಲೀನ್ ಡಿಯೋಲ್ 44, ನಾಯಕಿ ಹರ್ಮನ್ಪ್ರೀತ್ ಕೌರ್ 34, ರಿಚಾ ಘೋಷ್ 26, ಜೆಮಿಮಾ ರೋಡ್ರಿಗಸ್ 31, ದೀಪ್ತಿ ಶರ್ಮ ಔಟಾಗದೆ 14 ರನ್ ಗಳಿಸಿದರು. ಸಂಘಟಿತ ಹೋರಾಟದ ಮೂಲಕ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 314 ರನ್ ಕಲೆ ಹಾಕಿ ಭರ್ಜರಿ ಮೊತ್ತ ಎದುರಿಟ್ಟರು.
ಭಾರೀ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ವನಿತೆಯರು ಭಾರತದ ಬಿಗಿ ದಾಳಿಗೆ ನಲುಗಿ 26.2 ಓವರ್ ಗಳಲ್ಲಿ 103 ರನ್ ಗಳಿಗೆ ಸರ್ವ ಪತನ ಕಂಡಿತು. ಬಿಗಿ ದಾಳಿ ನಡೆಸಿದ ರೇಣುಕಾ ಸಿಂಗ್ ಠಾಕೂರ್ 5 ವಿಕೆಟ್ ಕಬಳಿಸಿದರು. ಪ್ರಿಯಾ ಮಿಶ್ರಾ 2 ವಿಕೆಟ್ ಕಿತ್ತರೆ, ಟಿಟಾಸ್ ಸಾಧು ಮತ್ತು ದೀಪ್ತಿ ಶರ್ಮ ತಲಾ 1 ವಿಕೆಟ್ ಪಡೆದರು.
ವೆಸ್ಟ್ ಇಂಡೀಸ್ 26ಕ್ಕೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಶೆಮೈನ್ ಕ್ಯಾಂಪ್ಬೆಲ್ಲೆ 21, ಆಲಿಯಾ ಅಲ್ಲೆನೆ 13, ಕೊನೆಯಲ್ಲಿ ಅಫಿ ಫ್ಲೆಚರ್ ಔಟಾಗದೆ 24 ರನ್ ಮತ್ತು ಕರಿಷ್ಮಾ ರಾಮಹರಕ್ 11, ಶಾಮಿಲಿಯಾ ಕಾನೆಲ್ 8 ರನ್ ಗಳಿಸಿ ತಂಡ ನೂರರ ಗಡಿ ದಾಟಲು ಕಾರಣರಾದರು.
ಏಕದಿನ ಆಡಿದ 150ನೇ ಆಟಗಾರ್ತಿ ಪ್ರತೀಕಾ
ಈ ಪಂದ್ಯದ ಮೂಲಕ ದಿಲ್ಲಿಯ 24 ವರ್ಷದ ಪ್ರತೀಕಾ ರಾವಲ್ ಏಕದಿನಕ್ಕೆ ಪಾದಾರ್ಪಣೆ ಮಾಡಿದರು. ಅವರು ಭಾರತದ ಪರ ಏಕದಿನ ಕ್ರಿಕೆಟ್ನಲ್ಲಿ ಆಡಿದ 150ನೇ ಆಟಗಾರ್ತಿ ಎನಿಸಿಕೊಂಡರು. ಈಕೆ ಮನಃಶಾಸ್ತ್ರ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.