ಕೌಲಾಲಂಪುರ್: ಅಂಡರ್ 19 ವನಿತಾ ಏಷ್ಯಾಕಪ್ ಕೂಟ (Under-19 Women’s Asia Cup) ದ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಸೋಲಿಸಿದ ಭಾರತ ತಂಡವು ಟ್ರೋಫಿ ಗೆದ್ದುಕೊಂಡಿದೆ. ಕೌಲಾಲಂಪುರ್ ದಲ್ಲಿ ರವಿವಾರ (ಡಿ.22) ನಡೆದ ಫೈನಲ್ ಪಂದ್ಯದಲ್ಲಿ ಭಾರತ ವನಿತಾ ಅಂಡರ್ 19 ತಂಡವು 41 ರನ್ ಅಂತರದ ಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ವನಿತಾ ಅಂಡರ್ 19 ತಂಡವು 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 117 ರನ್ ಗಳಿಸಿದರೆ, ಬಾಂಗ್ಲಾದೇಶ ತಂಡವು 18.3 ಓವರ್ 76 ರನ್ ಗಳಿಗೆ ಆಲೌಟಾಯಿತು.
ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾಗೆ ಆರಂಭಿಕ ಆಟಗಾರ್ತಿ 52 ರನ್ ಗಳಿಸಿದರು. ಮಿಥಿಲಾ ವಿನೋದ್ 17 ರನ್ ಮಾಡಿದ್ದು ಬಿಟ್ಟರೆ ಬೇರೆ ಆಟಗಾರರು ಕೊಡುಗೆ ನೀಡಲು ವಿಫಲರಾದರು. ಬಾಂಗ್ಲಾ ಪರ ಫರ್ಜಾನಾ ಈಸ್ಮಿನ್ ನಾಲ್ಕು ವಿಕೆಟ್ ಕಿತ್ತರೆ, ನಿಶಿತಾ ಅಕ್ತರ್ ಎರಡು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ಬಾಂಗ್ಲಾದೇಶ ತಂಡದಲ್ಲಿ ಯಾರೂ ನಿಂತ ಆಡಲು ವಿಫಲರಾದರು. ಜೌರಿಯಾ ಫೆರ್ಡಿಯಾ 22 ರನ್, ಫಹೋಮಿಡಾ ಚೊಯಾ 18 ರನ್ ಮಾಡಿದರು. ಭಾರತದ ಪರ ಆಯುಷಿ ಶುಕ್ಲಾ ಮೂರು ವಿಕೆಟ್ ಕಿತ್ತರೆ, ಪಾರುಣಿಕಾ ಸಿಸೋಡಿಯಾ ಮತ್ತು ಸೋನಂ ಯಾದವ್ ತಲಾ ಎರಡು ಪಡೆದರು.