Advertisement

ಸಾಗರಕ್ಕೆ ಆಗಮಿಸಿದ ಡಾ.ನಾ.ಡಿಸೋಜಾ ಪಾರ್ಥಿವ ಶರೀರ; ಗಣ್ಯರು, ಅಧಿಕಾರಿಗಳಿಂದ ಅಂತಿಮ ದರ್ಶನ

11:38 PM Jan 06, 2025 | Esha Prasanna |

ಸಾಗರ: ಹಿರಿಯ ಸಾಹಿತಿ ಡಾ.ನಾ.ಡಿಸೋಜಾ ಪಾರ್ಥಿವ ಶರೀರ ಸೋಮವಾರ ಮಧ್ಯಾಹ್ನ 2ರ ಸುಮಾರಿಗೆ ನೆಹರೂ ನಗರದಲ್ಲಿರುವ ಅವರ ಸ್ವಗೃಹಕ್ಕೆ ಆಗಮಿಸಿತು. ತಾಲೂಕು ಆಡಳಿತದ ಪರವಾಗಿ ಸಹಾಯಕ ಆಯುಕ್ತ ಯತೀಶ್ ಆರ್., ಪೌರಾಯುಕ್ತ ಎಚ್.ಕೆ.ನಾಗಪ್ಪ, ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್ ಇನ್ನಿತರ ಅಧಿಕಾರಿಗಳು ಅಂತಿಮ ದರ್ಶನ ಪಡೆದು, ತಾಲೂಕು ಆಡಳಿತದಿಂದ ಗೌರವ ಸಲ್ಲಿಸಿದರು.

Advertisement

ಶಾಸಕ, ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಂತಿಮ ನಮನ ಸಲ್ಲಿಸಿದರು. ಬೇರೆ ಬೇರೆ ಸಂಘ ಸಂಸ್ಥೆ ಪ್ರಮುಖರು, ಸಾರ್ವಜನಿಕರು, ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ನಾ.ಡಿಸೋಜಾ ಅಂತಿಮ ದರ್ಶನ ಪಡೆದರು.

ಸಾಗರದ ಕೀರ್ತಿ ಹೆಚ್ಚಳ: 
ಈ ವೇಳೆ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ, ಸಾಹಿತಿ ನಾ.ಡಿಸೋಜಾ ನಿಧನದಿಂದ ರಾಜ್ಯ ಕಂಡ ಶ್ರೇಷ್ಠ ಸಾಹಿತಿಯ ಕಳೆದುಕೊಂಡಂತಾಗಿದೆ. ಸಾಗರದ ಕೀರ್ತಿಯ ಜಗದಗಲ ಪಸರಿಸಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ಸಾಹಿತ್ಯ ಅಕಾಡೆಮಿ, ರಾಜ್ಯೋತ್ಸವ ಪ್ರಶಸ್ತಿ ಸೇರಿ ಅನೇಕ ಪ್ರಶಸ್ತಿಗಳು ಅವರ ಸಾಹಿತ್ಯ ಸಾಧನೆಗೆ ಸಂದಿದೆ. ಮಡಿಕೇರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಗರದ ಕೀರ್ತಿಯ ಹೆಚ್ಚಿಸಿದ್ದರು. ಪರಿಸರವಾದಿಯಾಗಿ, ಸಾಮಾಜಿಕ ಹೋರಾಟಗಾರರಾಗಿ ಅವರು ನೀಡಿದ ಕೊಡುಗೆ ಸ್ಮರಣೀಯ. ಅವರ ಅಂತಿಮ ಸಂಸ್ಕಾರವನ್ನು ಸರ್ಕಾರಿ ಗೌರವದೊಂದಿಗೆ ನೆರವೇರಿಸಲು ಸರ್ಕಾರ ಆದೇಶ ಹೊರಡಿಸಿದೆ. ಮಂಗಳವಾರ ಅವರ ಅಂತಿಮ ದರ್ಶನಕ್ಕೆ ಅಗತ್ಯ ಸಿದ್ಧತೆ ನಡೆಸಲಾಗಿದೆ ಎಂದರು.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ನಾ.ಡಿಸೋಜಾ ನನ್ನ ಹಿರಿಯ ಸ್ನೇಹಿತರು. ಅವರ ನಿಧನ ಅತ್ಯಂತ ಬೇಸರ ತಂದಿದೆ. ಸಾಗರಕ್ಕೆ ಅವರು ಸಾಹಿತ್ಯದ ಮೂಲಕ ಹೋರಾಟದ ಮೂಲಕ ನೀಡಿದ ಕೊಡುಗೆ ಅಪರೂಪ. ರಾಜ್ಯ ಓರ್ವ ಉತ್ತಮ ಬರಹಗಾರರ ಕಳೆದುಕೊಂಡಂತೆ ಆಗಿದೆ ಎಂದು ಹೇಳಿದರು.

ಅಂತಿಮ ದರ್ಶನಕ್ಕೆ ಅಗತ್ಯ ವ್ಯವಸ್ಥೆ:
ಪೌರಾಯುಕ್ತ ಎಚ್.ಕೆ.ನಾಗಪ್ಪ ಮಾತನಾಡಿ, ರಾಜ್ಯದ ಶ್ರೇಷ್ಠ ಸಾಹಿತಿ ಡಾ. ನಾ.ಡಿಸೋಜಾ ನಿಧನ ಅತ್ಯಂತ ದುಃಖ ತಂದಿದೆ. ಉಪವಿಭಾಗಾಧಿಕಾರಿಗಳ ಸೂಚನೆ ಮೇರೆಗೆ ಅವರ ಅಂತಿಮ ದರ್ಶನಕ್ಕೆ ನಗರಸಭೆ ರಂಗಮಂದಿರದಲ್ಲಿ ಅಗತ್ಯ ವ್ಯವಸ್ಥೆ  ಕಲ್ಪಿಸಲಾಗುತ್ತದೆ. ಮಂಗಳವಾರ ಬೆಳಿಗ್ಗೆ 10ರಿಂದ ಅಪರಾಹ್ನ 3ರವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಶಾಸಕರು ಹಾಗೂ ಉಪವಿಭಾಗಾಧಿಕಾರಿ ಈ ಸಂಬಂಧ ಸೂಕ್ತ ನಿರ್ದೇಶನ ನೀಡಿದ್ದಾರೆ ಎಂದು ಹೇಳಿದರು.

Advertisement

ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ:
ನಾ.ಡಿಸೋಜಾ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಪರಿಗಣಿಸಿ ರಾಜ್ಯ ಸರ್ಕಾರ ಅಂತಿಮ ಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ಸುತ್ತೋಲೆ ಹೊರಡಿಸಿದೆ.  ನಗರಸಭೆ ರಂಗಮಂದಿರದಲ್ಲಿ ಮಂಗಳವಾರ ನಾ.ಡಿಸೋಜಾ ಅವರ ಅಂತಿಮ ದರ್ಶನದ ಸಂದರ್ಭದಲ್ಲಿ ಸಕಲ ಸರ್ಕಾರಿ ಗೌರವ ಸಲ್ಲಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next