ಮೆಲ್ಬರ್ನ್: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆ ಮೊದಲು ನಡೆಯುವ ಕೊನೆಯ ಟೆಸ್ಟ್ ಸರಣಿಯಾದ ಶ್ರೀಲಂಕಾ ಪ್ರವಾಸಕ್ಕೆ ಆಸ್ಟ್ರೇಲಿಯಾ ತನ್ನ ತಂಡ ಪ್ರಕಟಿಸಿದೆ. ವಿಶೇಷವೆಂದರೆ ಸ್ಟೀವ್ ಸ್ಮಿತ್ ಅವರು ತಂಡವನ್ನು ಮುನ್ನಡೆಸಲಿದ್ದಾರೆ.
ಪ್ಯಾಟ್ ಕಮಿನ್ಸ್ ಅವರು ಎರಡನೇ ಮಗುವನ್ನು ಎದುರು ನೋಡುತ್ತಿರುವ ಕಾರಣ ಅವರು ಲಂಕಾ ಪ್ರವಾಸದಲ್ಲಿ ಪಾಲ್ಗೊಳ್ಳುತ್ತಿಲ್ಲ. ಹೀಗಾಗಿ ಸ್ಟೀವ್ ಸ್ಮಿತ್ ಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದ್ದು, ಟ್ರಾವಿಸ್ ಹೆಡ್ ಅವರು ಉಪ ನಾಯಕರಾಗಿದ್ದಾರೆ.
ಭಾರತ ವಿರುದ್ಧದ ಸರಣಿಯ ಕೊನೆಯ ಭಾಗದಿಂದ ಗಾಯದಿಂದ ಹೊರಗುಳಿದ ಜೋಶ್ ಹೇಜಲ್ವುಡ್ ಕೂಡಾ ತಂಡದ ಭಾಗವಾಗಿಲ್ಲ. ಫಾರ್ಮ್ ನಲ್ಲಿರದ ಮಿಚೆಲ್ ಮಾರ್ಷ್ ಅವರನ್ನು ಕೈಬಿಡಲಾಗಿದೆ.
ತಂಡದಲ್ಲಿ ವೇಗಿಗಳಾಗಿ ಮಿಚೆಲ್ ಸ್ಟಾರ್ಕ್, ಸ್ಕಾಟ್ ಬೊಲ್ಯಾಂಡ್ ಮತ್ತು ಸೀನ್ ಅಬಾಟ್ ಸ್ಥಾನ ಪಡೆದಿದ್ದಾರೆ. ಲಂಕಾದಲ್ಲಿ ಸರಣಿ ನಡೆಯುವ ಕಾರಣ ನಥನ್ ಲಯಾನ್ ಜೊತೆಗೆ ಸ್ಪಿನ್ನರ್ ಗಳಾದ ಟಾಡ್ ಮರ್ಫಿ ಮತ್ತು ಮ್ಯಾಟ್ ಕುನ್ಹೆಮನ್ ಅವರನ್ನು ಆಯ್ಕೆ ಮಾಡಲಾಗಿದೆ.
ಭಾರತ ವಿರುದ್ದ ಪದಾರ್ಪಣೆ ಮಾಡಿದ ನಥನ್ ಮೆಕ್ ಸ್ವೀನಿ ಅವರನ್ನು 16ರ ಬಳಗದಲ್ಲಿ ಆಯ್ಕೆ ಮಾಡಲಾಗಿದೆ. ಉಳಿದಂತೆ ಎಡಗೈ ಬ್ಯಾಟರ್ ಮತ್ತು ಸ್ಪಿನ್ನರ್ ಆಗಿರುವ ಕೂಪರ್ ಕೊನೊಲಿ ಮೊದಲ ಬಾರಿಗೆ ತಂಡದ ಕರೆ ಪಡೆದಿದ್ದಾರೆ.
ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯು ಜ.29ರಂದು ಆರಂಭವಾಗಲಿದೆ. ಗಾಲೆಯಲ್ಲಿ ಎರಡು ಪಂದ್ಯಗಳು ನಡೆಯಲಿದೆ.
ತಂಡ: ಸ್ಟೀವ್ ಸ್ಮಿತ್, ಉಸ್ಮಾನ್ ಖವಾಜ, ಸ್ಯಾಮ್ ಕಾನ್ಸ್ಟಾಸ್, ಮಾರ್ನಸ್ ಲಬುಶೇನ್, ಟ್ರಾವಿಸ್ ಹೆಡ್, ಅಲೆಕ್ಸ್ ಕ್ಯಾರಿ, ಜೋಶ್ ಇಂಗ್ಲಿಸ್, ನಥನ್ ಮೆಕ್ಸ್ವೀನಿ, ಬ್ಯೂ ವೆಬ್ಸ್ಟರ್, ನಥನ್ ಲಿಯಾನ್, ಮಿಚೆಲ್ ಸ್ಟಾರ್ಕ್, ಕೂಪರ್ ಕೊನೊಲಿ, ಟಾಡ್ ಮರ್ಫಿ, ಮ್ಯಾಟ್ ಕುಹ್ನೆಮನ್, ಸೀನ್ ಅಬಾಟ್, ಸ್ಕಾಟ್ ಬೋಲ್ಯಾಂಡ್.