ಸಿಡ್ನಿ: ಆಸ್ಟ್ರೇಲಿಯದ ಪುರುಷರ ಕ್ರಿಕೆಟ್ ತಂಡ ಭಾರತವನ್ನು ಮಣಿಸಿ 10 ವರ್ಷಗಳ ಬಳಿಕ “ಬೋರ್ಡರ್-ಗಾವಸ್ಕರ್ ಟ್ರೋಫಿ’ಯನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾದ ಬೆನ್ನಲ್ಲೇ ಕಾಂಗರೂ ನಾಡಿನ ವನಿತಾ ತಂಡ ಪ್ರತಿಷ್ಠಿತ ಆ್ಯಶಸ್ ಉಳಿಸಿಕೊಳ್ಳಲು ದಿಟ್ಟ ಹೋರಾಟ ನಡೆಸಲಿದೆ. ಇಂಗ್ಲೆಂಡ್ ಎದುರಿನ ಈ ಸರಣಿ ಜ. 12ರಂದು ಆರಂಭಗೊಳ್ಳಲಿದೆ.
ವನಿತೆಯರ ಆ್ಯಶಸ್ ಸರಣಿ ಪುರುಷರ ಆ್ಯಶಸ್ನಂತಲ್ಲ. ಅಲ್ಲಿ ಕೇವಲ ಟೆಸ್ಟ್ ಪಂದ್ಯಗಳಷ್ಟೇ ನಡೆದು, ಸರಣಿ ವಿಜೇತರಿಗೆ ಆ್ಯಶಸ್ ಟ್ರೋಫಿ ನೀಡುವುದು ಸಂಪ್ರದಾಯ. ಆದರೆ ವನಿತೆಯರ ಪಂದ್ಯಾವಳಿ ಸಂಪೂರ್ಣ ಭಿನ್ನ. ಇಲ್ಲಿ ಟೆಸ್ಟ್ ಜತೆಗೆ ಏಕದಿನ ಹಾಗೂ ಟಿ20 ಪಂದ್ಯ ಕೂಡ ಗಣನೆಗೆ ಬರಲಿದೆ.
ಅಂಕ ಪದ್ಧತಿ
ಇದಕ್ಕೆ ಪ್ರತ್ಯೇಕ ಅಂಕಗಳನ್ನು ನೀಡಲಾಗುವುದು. ಏಕದಿನ ಹಾಗೂ ಟಿ20 ಗೆಲುವಿಗೆ 2 ಅಂಕ, ಟೈ ಅಥವಾ ಪಂದ್ಯ ರದ್ದಾದರೆ ತಲಾ ಒಂದು ಅಂಕ ಲಭಿಸಲಿದೆ. ಹಾಗೆಯೇ ಟೆಸ್ಟ್ ಗೆಲುವಿಗೆ 4 ಅಂಕ ಸಿಗಲಿದೆ. ಪಂದ್ಯ ಡ್ರಾಗೊಂಡರೆ ಎರಡೂ ತಂಡಗಳು ತಲಾ 2 ಅಂಕಗಳನ್ನು ಪಡೆಯಲಿವೆ. ಕೊನೆಯಲ್ಲಿ ಯಾರು ಹೆಚ್ಚು ಅಂಕ ಪಡೆಯುತ್ತಾರೋ ಅವರಿಗೆ ಆ್ಯಶಸ್ ಒಲಿಯಲಿದೆ.
2013ರಿಂದ ಈ ಪದ್ಧತಿ ಜಾರಿಯಲ್ಲಿದೆ. ಆಸ್ಟ್ರೇಲಿಯ ತಂಡ 2015ರಿಂದ ಆ್ಯಶಸ್ ಟ್ರೋಫಿಯನ್ನು ತನ್ನ ವಶದಲ್ಲೇ ಇರಿಸಿಕೊಂಡಿದೆ. ಇಂಗ್ಲೆಂಡ್ಗೆ ಇದನ್ನು ಮರಳಿ ವಶಪಡಿಸಿಕೊಳ್ಳಲು ಸಾಧ್ಯವೇ ಎಂಬುದೊಂದು ಕುತೂಹಲ.
ಪ್ರಸಕ್ತ ಸರಣಿಯಲ್ಲಿ 3 ಏಕದಿನ (ಜ. 12, 14, 16), 3 ಟಿ20 (ಜ. 20, 23, 25) ಮತ್ತು ಒಂದು ಟೆಸ್ಟ್ ಪಂದ್ಯವನ್ನು ಆಡಲಾಗುವುದು. ಆಸ್ಟ್ರೇಲಿಯ ತಂಡವನ್ನು ಅಲಿಸ್ಸಾ ಹೀಲಿ, ಇಂಗ್ಲೆಂಡ್ ತಂಡವನ್ನು ಹೀತರ್ ನೈಟ್ ಮುನ್ನಡೆಸಲಿದ್ದಾರೆ.