ಮುಂಬೈ: ಇಂಗ್ಲೆಂಡ್ ರಾಷ್ಟ್ರೀಯ ಕ್ರಿಕೆಟ್ ತಂಡದ ವಿರುದ್ಧ ಮುಂಬರುವ ಏಕದಿನ ಸರಣಿಗೆ ಮೂವರು ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ನಿರ್ಧರಿಸಿದೆ. ಇದು ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 (Champions Trophy 2025) ಕ್ಕಿಂತ ಮೊದಲು ಭಾರತದ ಏಕೈಕ 50 ಓವರ್‌ಗಳ ಸರಣಿಯಾಗಿದೆ. ಎರಡು ತಂಡಗಳು ಈ ಸರಣಿಯಲ್ಲಿ ಮೂರು ಪಂದ್ಯಗಳನ್ನು ಆಡಲಿದೆ.
ಫೆಬ್ರವರಿಯಲ್ಲಿ ನಡೆಯಲಿರುವ ಏಕದಿನ ಸರಣಿಗೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಪ್ರಮುಖ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲು ಬಿಸಿಸಿಐ ಮುಂದಾಗಿದೆ ಎಂದು ವರದಿಯಾಗಿದೆ.
ಐದು ಪಂದ್ಯಗಳ ಟೆಸ್ಟ್ ಸರಣಿಯಾದ ಬಾರ್ಡರ್ ಗಾವಸ್ಕರ್ ಟ್ರೋಫಿಯಲ್ಲಿ ಆಡುವ ರೋಹಿತ, ವಿರಾಟ್ ಮತ್ತು ಜಸ್ಪ್ರೀತ್ ಗೆ ಚಾಂಪಿಯನ್ಸ್ ಟ್ರೋಫಿಗೆ ಮೊದಲು ಸುದೀರ್ಘ ವಿಶ್ರಾಂತಿ ನೀಡಲು ಬಿಸಿಸಿಐ ಚಿಂತಿಸಿದೆ. ಪಂದ್ಯಾವಳಿಯು ಫೆಬ್ರವರಿ 19 ರಿಂದ ನಡೆಯಲಿದ್ದು, ಭಾರತ ಕ್ರಿಕೆಟ್ ತಂಡವು ದುಬೈನಲ್ಲಿ ಎಲ್ಲಾ ಪಂದ್ಯಗಳನ್ನು ಆಡಲಿದೆ.
ಇನ್ನು ಕೆಲವೇ ದಿನಗಳಲ್ಲಿ ಇಂಗ್ಲೆಂಡ್ ವಿರುದ್ದದ ಸರಣಿಗೆ ಭಾರತ ತಂಡ ಪ್ರಕಟವಾಗಲಿದೆ. ರೋಹಿತ್ ಅಲಭ್ಯತೆಯಲ್ಲಿ ಶುಭಮನ್ ಗಿಲ್ ಅವರು ತಂಡವನ್ನು ಮುನ್ನಡೆಸಲಿದ್ದಾರೆ ಎಂದು ವರದಿ ಹೇಳಿದೆ. ಇದಕ್ಕೆ ಕಾರಣವೆಂದರೆ ಗಿಲ್ ಅವರು ಸದ್ಯ ಭಾರತ ಏಕದಿನ ತಂಡದ ಉಪ ನಾಯಕರಾಗಿದ್ದಾರೆ.
ಏಕದಿನ ಸರಣಿಗೆ ಮೊದಲು ಭಾರತ ಮತ್ತು ಇಂಗ್ಲೆಂಡ್ ತಂಡಗಳು ಟಿ20 ಸರಣಿಯಲ್ಲಿ ಆಡಲಿದೆ. ಐದು ಪಂದ್ಯಗಳ ಟಿ20 ಸರಣಿಯು ಜನವರಿ 22ರಂದು ಕೋಲ್ಕತ್ತಾದಲ್ಲಿ ಆರಂಭವಾಗಲಿದೆ.