ಉಡುಪಿ: ನಗರಸಭೆ ಹಾಗೂ ಅದಕ್ಕೆ ಹೊಂದಿಕೊಂಡ ಗ್ರಾ.ಪಂ.ಗೆ ಕುಡಿಯುವ ನೀರನ್ನು ಪೂರೈಸುವ ಕಾರ್ಯಯೋಜನೆಯ ಹಾಗೂ ನೀರಿನ ಸಮಸ್ಯೆ ನಿವಾರಿಸುವ ಬಗ್ಗೆ ಶಾಸಕ ರಘುಪತಿ ಭಟ್ ಅವರು ಪರಿಶೀಲನೆ ನಡೆಸಿದರು.
ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ಬಗ್ಗೆ ಇಂದಿನ ದಿನದವರೆಗೆ 35 ದಿವಸಗಳ ನಿರಂತರ ಹಿರಿಯಡ್ಕ ಗ್ರಾ.ಪಂ. ವ್ಯಾಪ್ತಿಯ ಶಿರೂರು ಮಠದ ಗುಂಡಿಯಿಂದ ಪಂಪ್ ಮೂಲಕ ನೀರನ್ನು ಮೇಲಕ್ಕೆ ಎತ್ತಿ ಮಾಣೈ ಹಾಗೂ ಭಂಡಾರಿ ಗುಂಡಿ ಎಂಬಲ್ಲಿ ನೀರು ಸಂಗ್ರಹವಾಗುತ್ತಿರುವ ಬಗ್ಗೆ ಹಾಗೂ ನೀರಿನ ಒಳಹರಿವು ಮತ್ತು ಶೇಖರಣೆ ಬಗ್ಗೆ ಪ್ರಾರಂಭದಿಂದ ಇಂದಿನವರೆಗೆ ಪರಿಶೀಲನೆ ನಡೆಸಿದರು.
ಈ ಸಂದರ್ಭ ಕಳೆದ ವರುಷ 5 ದಿನಕ್ಕೊಮ್ಮೆ ಕುಡಿಯುವ ನೀರು ಕೊಟ್ಟಿದ್ದು, ಈ ವರ್ಷ ಪ್ರತಿದಿನ ಕುಡಿಯುವ ನೀರು ಪೂರೈಸುವಂತೆ ಆಗಿದೆ. ಬಜೆ ಡ್ಯಾಮ್‌ನಲ್ಲಿ ಸಂಗ್ರಹವಾದ ನೀರು ಮುಂದಿನ 60 ದಿನಗಳ ವರೆಗೆ ನಗರಸಭೆ ಹಾಗೂ ಅದಕ್ಕೆ ಹೊಂದಿಕೊಂಡ ಗ್ರಾ.ಪಂ.ಗಳಿಗೆ ಪ್ರತಿದಿನ ಕುಡಿಯುವ ನೀರಿನ ಆವಶ್ಯಕತೆಗಳನ್ನು ಪೂರೈಸುವ ಬಗ್ಗೆ ನಿರ್ಧರಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕರು ಸಂಬಂಧಪಟ್ಟ ನಗರಸಭೆ ಕಾರ್ಯಪಾಲ ಅಭಿಯಂತರಿಗೆ ಮತ್ತು ಸಿಬಂದಿವರ್ಗದವರಿಗೆ ನೀರಿನ ಸಂಗ್ರಹಣೆಯ ಬಗ್ಗೆ ಮತ್ತು ನಿಗದಿತ ಕಾಲದಲ್ಲಿ ನೀರು ಶೇಖರಿಸಿದ ಬಗ್ಗೆ ಹರ್ಷ ವ್ಯಕ್ತಪಡಿಸಿದರು.