ನವದೆಹಲಿ: ಏರ್ ಟೆಲ್ (Airtel)ನ ಬ್ರಾಡ್ ಬ್ಯಾಂಡ್ ಮತ್ತು ಮೊಬೈಲ್(Mobile)w ಸರ್ವೀಸಸ್ ನಲ್ಲಿ ಗುರುವಾರ (ಡಿ.26) ತಾಂತ್ರಿಕ ದೋಷದಿಂದಾಗಿ ದೇಶದ ಪ್ರಮುಖ ನಗರಗಳಲ್ಲಿ ಏರ್ ಟೆಲ್ ಬಳಕೆದಾರರು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಸಮಾಧಾನ ಹೊರಹಾಕಿರುವ ಪ್ರಸಂಗ ನಡೆದಿದೆ.
ಏರ್ ಟೆಲ್ ಬಳಕೆದಾರರಿಗೆ ಮೊಬೈಲ್ ಕರೆ ಹಾಗೂ ಇಂಟರ್ನೆಟ್ ಸಿಗ್ನಲ್ ಸಿಗದೆ ಪರದಾಡುವಂತಾಗಿತ್ತು ಎಂದು ವರದಿ ವಿವರಿಸಿದೆ. ನೂರಾರು ಬಳಕೆದಾರರು ಡೌನ್ ಡಿಟೆಕ್ಟರ್.ಇನ್ ಗೆ ದೂರು ನೀಡಿರುವುದಾಗಿ ತಿಳಿಸಿದೆ.
ಏರ್ ಟೆಲ್ ನೆಟ್ ವರ್ಕ್ ಸಮಸ್ಯೆಯಿಂದ ಬಳಕೆದಾರರಿಗೆ ಮೊಬೈಲ್ ಕರೆ ಮಾಡಲು ಸಾಧ್ಯವಾಗದೇ ತೊಂದರೆ ಅನುಭವಿಸುವಂತೆ ಆಗಿರುವುದಾಗಿ ವರದಿ ತಿಳಿಸಿದೆ. ಬೆಳಗ್ಗೆ 10.30 ಸುಮಾರಿಗೆ ನೆಟ್ವರ್ಕ್ ಸಮಸ್ಯೆ ತಲೆದೋರಿರುವುದಾಗಿ ಡೌನ್ ಡಿಟೆಕ್ಟರ್ ಮಾಹಿತಿ ನೀಡಿದೆ.
ಅಂಕಿ-ಅಂಶಗಳ ಪ್ರಕಾರ, ಶೇ.46ರಷ್ಟು ಬಳಕೆದಾರರು ಸಂಪೂರ್ಣವಾಗಿ ನೆಟ್ ವರ್ಕ್ ಮತ್ತು ಇಂಟರ್ನೆಟ್ ಲಭ್ಯತೆಯ ಸಮಸ್ಯೆ ಎದುರಿಸಿದ್ದರು. ಶೇ.32ರಷ್ಟು ಬಳಕೆದಾರರು ನೋ ಸಿಗ್ನಲ್ ಸಮಸ್ಯೆ ಎದುರಿಸಿದ್ದು, ಶೇ,22ರಷ್ಟು ಬಳಕೆದಾರರು ಮೊಬೈಲ್ ಕನೆಕ್ಟಿವಿಟಿ ಸಮಸ್ಯೆ ಎದುರಿಸಿರುವುದಾಗಿ ತಿಳಿಸಿದೆ.
ಡೌನ್ ಡಿಟೆಕ್ಟರ್ ಪ್ರಕಾರ, ನವದೆಹಲಿ, ಬೆಂಗಳೂರು, ಅಹಮದಾಬಾದ್, ಸೂರತ್, ನಾಗ್ಪುರ್ ಹಾಗೂ ಮುಂಬೈ ಮಹಾನಗರಿಯಲ್ಲಿ ಏರ್ ಟೆಲ್ ಬಳಕೆದಾರರು ಈ ಸಮಸ್ಯೆಯನ್ನು ಎದುರಿಸಿರುವುದಾಗಿ ತಿಳಿಸಿದೆ.