ಕಾರ್ಕಳ: ಪುಲ್ಕೇರಿ ಬೈಪಾಸ್ನಿಂದ ಪ್ರಾರಂಭವಾಗಿರುವ ಸಾಣೂರು- ಬಿಕರ್ನಕಟ್ಟೆ ರಾ. ಹೆದ್ದಾರಿ ಕಾಮಗಾರಿಗೆ ಅರಣ್ಯ ಇಲಾಖೆ ಅಡ್ಡಿ ಉಂಟುಮಾಡಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಸಾಣೂರು ಗ್ರಾ. ಪಂ. ವ್ಯಾಪ್ತಿಯ ಗಡಿ ಪ್ರದೇಶ ಮುರತಂಗಡಿ ದಾಟಿ ಬೆಳವಾಯಿ ಸಂಪರ್ಕದ ಮಧ್ಯೆ ಇರುವ ಚಿಲಿಂಬಿಗುಡ್ಡ ಅರಣ್ಯ ಪ್ರದೇಶಕ್ಕೆ ಅರಣ್ಯ ಇಲಾಖೆಯಿಂದ ಹೆದ್ದಾರಿ ಕಾಮಗಾರಿ ನಡೆಸಲು ಅನುಮತಿ ಪತ್ರ ದೊರೆಯದ ಕಾರಣ, ಸುಮಾರು ಒಂದೂವರೆ ಕಿಲೋಮೀಟರ್ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಅಡ್ಡಿಯುಂಟಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಹೆದ್ದಾರಿ ಇಲಾಖೆ ಅವರು ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಲು ನಿರಂತರ ಪ್ರಯತ್ನ ನಡೆಸುತ್ತಿದ್ದರೂ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಅರಣ್ಯ ಇಲಾಖೆಯಿಂದ ಇಲ್ಲದಂತಾಗಿದೆ.
ಹೆದ್ದಾರಿ ಇಲಾಖೆ ಎಂಜಿನಿಯರ್ ಬಳಿ ಈ ಬಗ್ಗೆ ಪ್ರಶ್ನಿಸಿದಾಗ ಕೆಲವು ಮಾಹಿತಿಗಳನ್ನು ಕೇಳಿ ಬೆಂಗಳೂರಿನಿಂದ ಇದಕ್ಕೆ ಸಂಬಂಧಿಸಿದ ಫೈಲ್ ಕುಂದಾಪುರ ಅರಣ್ಯ ಇಲಾಖೆಗೆ ಬಂದಿದೆ ಎಂದು ತಿಳಿಸಿದ್ದಾರೆ. ಸುತ್ತಲೂ ಬೆಟ್ಟಗುಡ್ಡ, ಕಾಡು, ಸಣ್ಣ ನೀರಿನ ತೊರೆಗಳನ್ನು ಒಳಗೊಂಡಿರುವ ಸಾಣೂರು ಚಿಲಿಂಬಿ ಪ್ರದೇಶವು ಸಾಣೂರು ಮುುರತ್ತಂಗಡಿ, ಕಾಂತಾವರ ಪ್ರದೇಶದಲ್ಲಿ ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿಗೆ ಸೇರಿದ್ದು, ಬೆಳುವಾಯಿ ಪರಿಸರವು ಮಂಗಳೂರು ತಾಲೂಕು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದೆ.
ಈಗಾಗಲೇ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಅವರು ಮಂಗಳೂರು ಹಾಗೂ ಉಡುಪಿ ಸಂಸದರು, ಕಾರ್ಕಳ ಮತ್ತು ಮೂಡುಬಿದಿರೆ ಶಾಸಕರು ಅರಣ್ಯ ಇಲಾಖೆ ಅನುಮತಿಗಾಗಿ ಈಗಾಗಲೇ ಎರಡು ವರ್ಷ ಶ್ರಮಿಸಿದ್ದಾರೆ.
ಇನ್ನಾದರೂ ಕೂಡಲೇ ಅನುಮತಿ ಸಿಗುವ ನೆಲೆಯಲ್ಲಿ ಮತ್ತೂಮ್ಮೆ ಒಟ್ಟಾಗಿ ಪ್ರಯತ್ನ ಮಾಡಿದರೆ ಸಾಣೂರಿನಿಂದ ಮೂಡುಬಿದಿರೆ ಅಲಂಗಾರುವರೆಗೆ ಸುಮಾರು 12 ಕಿ. ಮೀ. ಹೆದ್ದಾರಿ ಚತುಷ್ಪಥ ಎಲ್ಲಾ ರೀತಿಯಿಂದಲೂ ಸುಸಜ್ಜಿತವಾಗಿ, ಪ್ರಯಾಣಿಕರ ಮತ್ತು ವಾಹನಗಳ ಉಪಯೋಗಕ್ಕೆ ಸಿಗುತ್ತದೆ ಎಂಬುದು ಸ್ಥಳೀಯರ ಆಶಯವಾಗಿದೆ.