ಲಂಡನ್: ಜಿಮ್‌ಗೆ ಬರಬೇಕಾದ್ರೆ ಇಂಥದ್ದೇ ಬಟ್ಟೆ ಬೇಕು ಎಂಬ ಸಂವಿಧಾನ ಇಲ್ಲಿಲ್ಲ. ಏಕೆಂದರೆ, ಇದು ನಗ್ನ ತಾಲೀಮಿನ ಜಿಮ್! ಇಂಗ್ಲೆಂಡಿನ ಸೌಥಂಪ್ಟನ್‌ನಲ್ಲಿರುವ ನರ್ಸ್ಲಿಂಗ್ ಎಂಬ ಹಳ್ಳಿಯಲ್ಲಿ ಇತ್ತೀಚೆಗಷ್ಟೇ ಶುರುವಾಗಿರುವ ಫಿಟ್ನೆಸ್ ಕೇಂದ್ರದಲ್ಲಿ ಎಲ್ಲವೂ ಬೋಲ್ಡ್ ಆ್ಯಂಡ್ ಬ್ಯೂಟಿಫುಲ್. ಲೇಡಿ ಟ್ರೈನರ್ ಆಗಿರುವ ಹೆಲೆನ್ ಸ್ಮಿತ್ ಕೂಡ ನಗ್ನರಾಗಿಯೇ ಎಲ್ಲ ದೇಹದಂಡನೆಯ ಪಾಠಗಳನ್ನು ಸ್ವಲ್ಪವೂ ನಾಚದೆ ಹೇಳಿಕೊಡುತ್ತಾರೆ!
ಬ್ರಿಟನ್ನಿನ ಮೊದಲ ನಗ್ನತಾಲೀಮಿನ ಜಿಮ್ ಈಗ ಜಗತ್ತಿನ ಆಕರ್ಷಣೆ. ಫಿಟ್ನೆಸ್ ಕೇಂದ್ರ ಶನಿವಾರ ತೆರೆದುಕೊಳ್ಳುತ್ತಿದ್ದಂತೆಯೇ ಆರಂಭದಲ್ಲೇ ಓಡೋಡಿ ಬಂದು ಸೇರಿಕೊಂಡ ಅಭ್ಯರ್ಥಿಗಳ ಸಂಖ್ಯೆ 8! ಒಂದು ಗಂಟೆಯ ಸುದೀರ್ಘ ತಾಲೀಮಿಗೆ 545 ರೂಪಾಯಿ! ಒಂದು ತಿಂಗಳಿಗೆ ಶುಲ್ಕ 16 ಸಾವಿರ ರೂಪಾಯಿ! ಆರಂಭದಲ್ಲಿ ಹೆಲೆನ್ ನಗ್ನ ಈಜುತರಗತಿಯನ್ನು ಆಯೋಜಿಸಿದ್ದರಂತೆ. 30 ಅಭ್ಯರ್ಥಿಗಳಿಗೆ ನಿತ್ಯ ಈಜು ಕಲಿಸುತ್ತಿದ್ದರಂತೆ. ಕ್ರಮೇಣ ಈಜಿನಿಂದ ಇವರು ಇತರೆ ವ್ಯಾಯಾಮದತ್ತ ನೋಟ ಹರಿಸಿದ್ದಾರೆ.
ಯಾಕೆ ನಗ್ನ ತಾಲೀಮು?: ಉದ್ಯೋಗ ಸಲಹಾ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ 35 ವರ್ಷದ ಹೆಲೆನ್ ಕೆಲಸ ಕಳೆದುಕೊಂಡರು. ಫ್ರಾನ್ಸ್‌ಗೆ ಪ್ರವಾಸಕ್ಕೆಂದು ಹೋದಾಗ ಅಲ್ಲಿ ನಗ್ನ ಬೀಚ್ ಹೆಲೆನ್ ದಂಪತಿಯನ್ನು ಸೆಳೆಯಿತು. ಇಬ್ಬರೂ ಅಲ್ಲಿ ಒಂದಿಷ್ಟು ಗಂಟೆ ತಾಲೀಮು ನಡೆಸಿದರಂತೆ. “ಆಗ ಸಿಕ್ಕ ಆತ್ಮಖುಷಿಗೆ ಪಾರವೇ ಇರಲಿಲ್ಲ. ಮನಸ್ಸು ತಂಗಾಳಿಗಿಂತ ಹಗುರವಾಯಿತು. ಬಳಿಕ ನಾವಿಬ್ಬರೂ ಪರಸ್ಪರರ ದೇಹ ನೋಡುವ ರೀತಿಯೇ ಬೇರೆಯಾಯಿತು’ ಎನ್ನುತ್ತಾರೆ ಹೆಲೆನ್. ಇಂಥ ವ್ಯಾಯಾಮಗಳನ್ನು ಜನರಿಗೆ ಕಲಿಸಿದರೆ ಖಂಡಿತಾ ಅವರು ಸ್ವೀಕರಿಸುತ್ತಾರೆ ಎಂದು ಅಂದೇ ನಿರ್ಧರಿಸಿದರಂತೆ. ಅದರ ಫಲಶ್ರುತಿಯೇ ನಗ್ನತಾಲೀಮು ಕೇಂದ್ರ.
ಏನುಪಯೋಗ?: ನಗ್ನ ತಾಲೀಮಿನಿಂದ ಲಾಭಗಳ ದೊಡ್ಡ ಪಟ್ಟಿಯನ್ನೇ ನೀಡುತ್ತಾರೆ ಹೆಲೆನ್. ಬಟ್ಟೆ ಧರಿಸಿ ವ್ಯಾಯಾಮ ಮಾಡುವಾಗ ಅಡಚಣೆಗಳು ಹೆಚ್ಚು. ಮುಕ್ತತೆ ಇರುವುದಿಲ್ಲ ಎನ್ನುವುದು ಅವರ ವಾದ. “ಟ್ರೈನರ್ ಹೇಳಿಕೊಡುವ ಪ್ರತಿ ಅಂಶವನ್ನೂ ತರಬೇತಿ ಪಡೆಯುವವರು ಅನುಸರಿಸುತ್ತಾರೆ. ಅಭ್ಯರ್ಥಿಗಳಿಗೆ ದೇಹದ ಮೇಲೆ ಹೆಚ್ಚು ಪ್ರೀತಿ ಹುಟ್ಟುತ್ತದೆ. ವ್ಯಾಯಾಮದ ಅಗತ್ಯತೆ ಕುರಿತು ತಲೆಕೆಡಿಸಿಕೊಳ್ಳುತ್ತಾರೆ. ಜಿಮ್‌ನ ನಂತರ ಸಾಮಾನ್ಯವಾಗಿ ಧರಿಸಿದ ಬಟ್ಟೆ ಬೆವರಿನಿಂದ ವಾಸನೆ ಹೊಮ್ಮಿಸುತ್ತದೆ. ಇಲ್ಲಿ ಇಂಥ ಅಪಾಯಗಳೇ ಇಲ್ಲ’ ಎನ್ನುವುದು ಹೆಲೆನ್ ಮಾತು. ಇದು ಸೆಕ್ಸ್ ದೃಷ್ಟಿಯಿಂದ ನಡೆಯುವ ಫಿಟೆ°ಸ್ ಅಲ್ಲವೇ ಅಲ್ಲ ಎನ್ನುವ ಸ್ಪಷ್ಟನೆಯನ್ನೂ ಅವರು ನೀಡುತ್ತಾರೆ.
ಕ್ಲಾಸ್‌ನಲ್ಲಿ ಏನಿರುತ್ತೆ?: ಜಂಪಿಂಗ್ ಜಾಕ್ಸ್, ಪುಶ್ ಅಪ್ಸ್, ಜೋಡಿ ತಾಲೀಮು, ಈಜು ಮುಂತಾದ ತರಬೇತಿಗಳನ್ನು ಹೆಲೆನ್ ಇಲ್ಲಿ ಹೇಳಿಕೊಡುತ್ತಾರೆ. ಇಲ್ಲೀಗ ತರಬೇತಿ ಪಡೆಯುತ್ತಿರುವವರು 33- 70 ವರ್ಷದೊಳಗಿನ ವ್ಯಕ್ತಿಗಳೇ. ಮುಂದಿನ ದಿನಗಳಲ್ಲಿ ಹದಿಹರೆಯದ ಯುವಕರಿಗೆ ಕೇಂದ್ರ ಸ್ಥಾಪಿಸಲು ಹೆಲೆನ್ ಉತ್ಸುಕರಾಗಿದ್ದಾರೆ. “ಲಂಡನ್ ಸೇರಿದಂತೆ ಜಗತ್ತಿನ ಮುಖ್ಯ ಮಹಾನಗರಗಳಲ್ಲೂ ಶಾಖೆ ಆರಂಭಿಸುವ ಆಲೋಚನೆ ಇದೆ’ ಎನ್ನುತ್ತಾರೆ ಹೆಲೆನ್.