Advertisement

ICC Champions Trophy: ಅಫ್ಘಾನಿಸ್ಥಾನ ವಿರುದ್ಧದ ಪಂದ್ಯಕ್ಕೆ ಇಂಗ್ಲೆಂಡ್‌ ಬಹಿಷ್ಕಾರ?

10:55 PM Jan 07, 2025 | Team Udayavani |

ಲಂಡನ್‌: ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಇನ್ನೊಂದು ಗೊಂದಲ ಹುಟ್ಟಿಕೊಂಡಿದೆ. ಅಫ್ಘಾನಿಸ್ಥಾನ ವಿರುದ್ಧದ ಪಂದ್ಯವನ್ನು ಇಂಗ್ಲೆಂಡ್‌ ಆಡದೇ ಬಹಿಷ್ಕರಿಸಬೇಕು ಎಂದು ಯುನೈಟೆಡ್‌ ಕಿಂಗ್‌ಡಮ್‌ನ 160 ರಾಜಕಾರಣಿಗಳು “ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ’ಗೆ (ಇಡಬ್ಲ್ಯುಸಿ) ಪತ್ರ ಬರೆದಿದ್ದಾರೆ.

Advertisement

ಅಫ್ಘಾನಿಸ್ಥಾನದಲ್ಲಿ ತಾಲಿಬಾನ್‌ ಆಡಳಿತವು ಮಹಿಳೆಯರ ಹಕ್ಕನ್ನು ಕಸಿದುಕೊಳ್ಳುತ್ತಿದ್ದು, ಹೀಗಾಗಿ ಫೆ. 26ರಂದು ಲಾಹೋರ್‌ನಲ್ಲಿ ನಡೆಯಲಿರುವ ಅಫ್ಘಾನಿಸ್ಥಾನ ವಿರುದ್ಧದ ಪಂದ್ಯವನ್ನು ಇಂಗ್ಲೆಂಡ್‌ ಬಹಿಷ್ಕರಿಸಬೇಕು. ಈ ಮೂಲಕ ಮಹಿಳಾ ಹಕ್ಕುಗಳ ಮೇಲಿನ ತಾಲಿಬಾನ್‌ ದಾಳಿಯ ವಿರುದ್ಧ ಇಡಬ್ಲ್ಯುಸಿ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು, ಮಹಿಳಾ ಹಕ್ಕುಗಳನ್ನು ಎತ್ತಿ ಹಿಡಿಯಬೇಕು ಎಂದು ಈ ಪತ್ರದಲ್ಲಿ ಉಲ್ಲೇಖೀಸಲಾಗಿದೆ.

2021ರಲ್ಲಿ ಅಫ್ಘಾನಿಸ್ಥಾನದಲ್ಲಿ ತಾಲಿಬಾನ್‌ ಆಡಳಿತ ಬಂದ ಬಳಿಕ ಮಹಿಳೆಯರು ಕ್ರೀಡೆಯಲ್ಲಿ ಭಾಗವಹಿಸುವುದು ಕಾನೂನುಬಾಹಿರ ಎಂದು ಘೋಷಿಸಿದೆ. ಇದು ಐಸಿಸಿ ನಿಯಮಕ್ಕೆ ವಿರುದ್ಧವಾಗಿದೆ. ಆದರೂ ಐಸಿಸಿ ಅಫ್ಘಾನಿಸ್ಥಾನ ಕ್ರಿಕೆಟ್‌ ಮಂಡಳಿ ಮೇಲೆ ನಿಷೇಧ ಹೇರಿಲ್ಲ. ಅಲ್ಲದೇ ಅಫ್ಘಾನಿಸ್ಥಾನದಲ್ಲಿ ನರ್ಸಿಂಗ್‌ ಶಿಕ್ಷಣವನ್ನೂ ಪಡೆಯುವಂತಿಲ್ಲ ಎಂದು ತಾಲಿಬಾನ್‌ ಆಡಳಿತ ಕಟ್ಟಪ್ಪಣೆ ವಿಧಿಸಿದೆ. ಇವೆಲ್ಲದರ ವಿರುದ್ಧ ಎಲ್ಲ ದೇಶಗಳು ಬಂಡೇಳಬೇಕೆಂದು ಇಂಗ್ಲೆಂಡ್‌ ರಾಜಕಾರಣಿಗಳು ಅಭಿಪ್ರಾಯಪಟ್ಟಿದ್ದಾರೆ. ಇದರ ಮೊದಲ ಹೆಜ್ಜೆಯೇ ಅಫ್ಘಾನಿಸ್ಥಾನ ವಿರುದ್ಧದ ಚಾಂಪಿಯನ್ಸ್‌ ಟ್ರೋಫಿ ಪಂದ್ಯದ ಬಹಿಷ್ಕಾರಕ್ಕೆ ಕರೆ.

ಇದಕ್ಕೆ ಇಡಬ್ಲ್ಯುಸಿ ಮತ್ತು ಐಸಿಸಿ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next