ನವದೆಹಲಿ: ಶಬರಿಮಲೆ ದೇವಸ್ಥಾನದೊಳಗೆ 10 ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶ ನಿಷೇಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ನಿಷೇಧವನ್ನು ರದ್ದುಪಡಿಸಿ, ಶಬರಿಮಲೆಗೆ ಎಲ್ಲಾ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಮೂಲಕ 800 ವರ್ಷಗಳ ನಿರ್ಬಂಧದ ಪದ್ಧತಿಗೆ ತೆರೆ ಎಳೆದು ಐತಿಹಾಸಿಕ ತೀರ್ಪನ್ನು ಶುಕ್ರವಾರ ನೀಡಿದೆ.
“ಮಹಿಳೆಯರೂ ಯಾವಾಗಲೂ ತಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದಾರೆ. ಮಹಿಳೆಯರನ್ನು ದುರ್ಬಲರಂತೆ ನೋಡಬಾರದು. ಭಾರತದಲ್ಲಿ ಮಹಿಳೆಯರಿಗೆ ದೇವತೆಯ ಸ್ಥಾನ ನೀಡಲಾಗಿದೆ. ಮಹಿಳೆಯರ ಕುರಿತು ಸಮಾಜದ ಗ್ರಹಿಕೆ ಬದಲಾಗಬೇಕು ಎಂದು ಸುಪ್ರೀಂಕೋರ್ಟ್ ನ ಸಿಜೆ ದೀಪಕ್ ಮಿಶ್ರಾ ನೇತೃತ್ವದ ಪಂಚಸದಸ್ಯರ ಸಾಂವಿಧಾನಿಕ ಪೀಠ 4:1ರ ಬಹುಮತದ ತೀರ್ಪು ಕೊಟ್ಟಿದೆ.
10ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಶಬರಿಮಲೆ ದೇವಳದ ಒಳಗೆ ಪ್ರವೇಶ ನಿರ್ಬಂಧಿಸುವಂತಿಲ್ಲ. ಇಂತಹ ಪದ್ಧತಿ ಮುಂದುವರಿಯಬಾರದು ಎಂದು ಸಿಜೆಐ ಮಿಶ್ರಾ, ಜಸ್ಟೀಸ್.ಎಎಂ ಖಾನ್ವಿಲ್ಕರ್, ಜಸ್ಟೀಸ್ ಚಂದ್ರಚೂಡ್, ಜಸ್ಟೀಸ್ ನಾರಿಮನ್ ತೀರ್ಪಿನಲ್ಲಿ ಒಮ್ಮತದ ಅಭಿಪ್ರಾಯವ್ಯಕ್ತಪಡಿಸಿದ್ದರು. ಆದರೆ ಜಸ್ಟೀಸ್ ಇಂದು ಮಲೋತ್ರಾ ಮಾತ್ರ ತೀರ್ಪಿನಲ್ಲಿ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ತೀರ್ಪಿನ ಪ್ರಮುಖ ಅಂಶಗಳು:
*ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದೊಳಕ್ಕೆ 10ರಿಂದ 50ವರ್ಷದವರೆಗಿನ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ ವಿಧಿಸುವುದು ಸಂವಿಧಾನದ ತತ್ವಗಳ ಉಲ್ಲಂಘನೆಯಾಗಲಿದೆ.
*10ರಿಂದ 50 ವರ್ಷದವರೆಗಿನ ಮಹಿಳೆಯರಿಗೆ ಶಬರಿಮಲೆ ದೇವಳದೊಳಕ್ಕೆ ಪ್ರವೇಶ ನಿರಾಕರಿಸುವುದಕ್ಕೆ ಸಂವಿಧಾನದ ಕಲಂ 26ರ ಪ್ರಕಾರ ಸಾಧ್ಯವಿಲ್ಲ.
*ಭಕ್ತಿಯನ್ನು ಲಿಂಗ ತಾರತಮ್ಯದ ವಿಷಯವನ್ನಾಗಿ ಮಾಡಬಾರದು ಎಂದು ಸಿಜೆಐ ಮಿಶ್ರಾ ಹಾಗೂ ಜಸ್ಟೀಸ್ ಎಎಂ ಖಾನ್ವಿಲ್ಕಾರ್ ಹೇಳಿದರು.