ಅತ್ಯಂತ ಹಿರಿಯರು, ತುಂಬು ಜೀವನ ನಡೆಸಿದ ವ್ಯಕ್ತಿ ಹತ್ತಿರ ಒಂದಿಬ್ಬರು ಸಮಸ್ಯೆಗೆ ಪರಿಹಾರ ಕೇಳಲು ಬರುತ್ತಿದ್ದರು. ಆ ಹಿರಿಯರು ತಮ್ಮ ಅನುಭವವನ್ನೆಲ್ಲಾ ಸೇರಿಸಿ ಪರಿಹಾರ ಸೂಚಿಸುತ್ತಿದ್ದರು. ಒಂದಷ್ಟು ದಿನಗಳ ನಂತರ, ಮತ್ತೆ ಅದೇ ವ್ಯಕ್ತಿಗಳು, ಅದೇ ಸಮಸ್ಯೆಯೊಂದಿಗೆ ಹಾಜರಾಗುತ್ತಿದ್ದರು.
ಇದು ಪದೇ ಪದೆ ನಡೆಯುತ್ತಲೇ ಇತ್ತು. ಹಿರಿಯರಿಗೆ ದಿಕ್ಕು ತೋಚದಾಗಿ, ಕೊನೆಗೆ ಇವರಿಗೆ ಒಂದು ಜೋಕ್ ಹೇಳಿ, ಬದುಕು ಅಂದರೆ ಏನು ಅಂತ ಹೇಳಬೇಕಲ್ಲ ಅಂತ ಕಾಯುತ್ತಿದ್ದಾಗ ಮತ್ತೆ ಆ ಇಬ್ಬರು, ಹಳೇ ಸಮಸ್ಯೆ ಗಂಟನ್ನು ಹಿಡಿದುಕೊಂಡು ಬಂದರು.
ಹಿರಿಯರು- “ನಾನು ನಿಮಗೆ ಒಂದು ಜೋಕ್ ಹೇಳ್ತೀನಿ. ಅದನ್ನು ಕೇಳಿ. ಆಮೇಲೆ ನಿಮ್ಮ ಸಮಸ್ಯೆ ಬಗ್ಗೆ ಮಾತಾಡೋಣ’ ಅಂತ ಹೇಳಿ ಜೋಕ್ ಹೇಳಿದರು. ಬಂದವರಲ್ಲಿ ಒಂದಷ್ಟು ಜನ ನಕ್ಕರು. ಹಿರಿಯರು ಮತ್ತೆ ಅದೇ ಜೋಕನ್ನು ಹೇಳಿದರು. ಅವರು ಕೇಳಿದರು.
ಹೀಗೆ, ಎರಡು ಮೂರು ಸಲ ಅದೇ ಜೋಕನ್ನು ಹೇಳುತ್ತಿದ್ದಾಗ ಕೊನೆಗೆ ಯಾರೂ ನಗಲೇ ಇಲ್ಲ. ಆಗ ಹಿರಿಯರು, “ಒಂದೇ ಜೋಕನ್ನು ಪದೇ ಪದೆ ಹೇಳಿದರೆ ನಿಮಗೆ ನಗುವುದಕ್ಕೆ ಆಗುತ್ತಿಲ್ಲ ಅಲ್ವಾ?’ ಅಂದರು. ಬಂದವರು ಬಹಳ ಉತ್ಸಾಹಿತರಾಗಿ – “ಹೌದು, ಹಿರಿಯರೇ’ ಅಂದರು.
ಆಗ ಅವರು, “ಹಾಗಾದರೆ, ನೀವು ಹಳೇ ಸಮಸ್ಯೆಯನ್ನು ಮುಂದಿಟ್ಟು ಕೊಂಡು ಪದೇ ಪದೆ ಏಕೆ ಅಳುತ್ತೀರಿ? ಬೇರೆಯವರನ್ನು ದೂರುವುದು, ಹಳೆ ಸಮಸ್ಯೆಗಳಿಗೆ ಅಳುವುದರಿಂದ ಸಮಯ ವ್ಯರ್ಥ’ ಅಂದರು. ಆನಂತರ, ಅವರ್ಯಾರು ಹಿರಿಯರ ಬಳಿ ಸಮಸ್ಯೆ ತಗೊಂಡು ಬರಲೇ ಇಲ್ಲ.