Advertisement

ಹೈಕಮಾಂಡ್‌ ಸೂಚನೆಗೆ ಔತಣಕೂಟ ಮುಂದಕ್ಕೆ ಹಾಕಿದ್ದೇವೆ, ರದ್ದು ಮಾಡಿಲ್ಲ: ಜಿ.ಪರಮೇಶ್ವರ್‌

06:35 PM Jan 08, 2025 | Team Udayavani |

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ಗೈರು ಹಾಜರಿಯಲ್ಲಿ ಆರಂಭವಾಗಿದ್ದ ಸಚಿವರ ಸರಣಿ ಭೋಜನಕೂಟಗಳಿಗೆ ಪಕ್ಷದ ಹೈಕಮಾಂಡ್‌ ತಡೆ ಹಾಕಿದ ಬೆನ್ನಲ್ಲೇ ಕಾಂಗ್ರೆಸ್‌ ಪಾಳಯದಲ್ಲಿ ರಾಜಕೀಯ ಚಟುವಟಿಕೆ ಮತ್ತಷ್ಟು ಗರಿಗೆದರಿದೆ.

Advertisement

ಡಿನ್ನರ್ ಸಭೆ ಮುಂದೂಡುವಂತೆ ಕಾಂಗ್ರೆಸ್ ಹೈಕಮಾಂಡ್​ನಿಂದ ಬಂದಿರುವ ಸೂಚನೆ ಬಗ್ಗೆ ಮೊದಲ ಬಾರಿ ನಗರದಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಪ್ರತಿಕ್ರಿಯಿಸಿ, ಎಸ್‌ಸಿಪಿ-ಟಿಎಸ್‌ಪಿ ಹಣದಲ್ಲಿ ನಮ್ಮ ಪಾಲು ಕಡಿತವಾದ ಬಗ್ಗೆ ಹಾಗೂ ಕೆಲವು ಆಂತರಿಕ ಸಮಸ್ಯೆಗಳ ಬಗೆಹರಿಸುವ ಚರ್ಚೆಗಾಗಿ ಸಭೆ ಸೇರಲು ನಿರ್ಧರಿಸಿದ್ದೆವು. ಇದು ನಮ್ಮದೇ ಆಂತರಿಕ ವಿಚಾರವಾಗಿದ್ದರಿಂದ ದಿಲ್ಲಿ ನಾಯಕರಿಗೆ ಹೇಳಿರಲಿಲ್ಲ ಎಂದು ಹೇಳಿದರು.

ಔತಣಕೂಟ ರದ್ದು ಮಾಡಿಲ್ಲ, ಮುಂದೂಡಿಕೆಯಷ್ಟೇ: 
ಶಾಸಕರ ಸಭೆ ಅಂದಾಗ ಅವರ ಗಮನಕ್ಕೆ ಹೋಗುತ್ತದೆ. ಹೀಗಾಗಿ  ರಾಜ್ಯದ ಪಕ್ಷದ ಉಸ್ತುವಾರಿ, ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್‌ ಸುರ್ಜೇವಾಲ ಕರೆ ಮಾಡಿ ಅವರೂ ಭಾಗವಹಿಸಲು ಉತ್ಸುಕವಾಗಿರುವುದಾಗಿ ತಿಳಿಸಿದರು. ಹಾಗಾಗಿ ನಾನು ಆಹ್ವಾನ ಮಾಡಿದೆ. ಇದು ರಾಜಕೀಯ ಪ್ರೇರಿತ ಸಭೆಯಲ್ಲ, ನೀವೂ ಕೂಡ ಈ ಸಭೆಯಲ್ಲಿ ಭಾಗವಹಿಸಿ ಎಂದು ಆಹ್ವಾನ ಮಾಡಿದೆ. ಮುಂದೆ ಸಮಯ ಕೋಡುತ್ತೇನೆ ಎಂದು ನಮಗೆ ಹೇಳಿದ್ದಾರೆ. ಹೈಕಮಾಂಡ್‌ ಸೂಚನೆ ಮೇರೆಗೆ  ಔತಣಕೂಟ ಮುಂದಕ್ಕೆ ಹಾಕಿದ್ದೇವೆ, ರದ್ದು ಮಾಡಿಲ್ಲ, ಸಭೆ ನಡೆಸುತ್ತೇವೆ ಎಂದು ಸಚಿವ ಪರಮೇಶ್ವರ್ ಸ್ಪಷ್ಟಪಡಿಸಿದರು.

ತಕ್ಕ ಉತ್ತರ ಕೊಡುವ ಶಕ್ತಿ ಇದೆ:
ಡಿನ್ನರ್ ಅಂದ್ರೆ ಏನೇನೋ ವ್ಯಾಖ್ಯಾನ ಮಾಡುತ್ತೀರಿ. ಸಭೆ ಇದ್ದಾಗ ಊಟ ಮಾಡುವುದು ಸಹಜ. ಊಟಕ್ಕೂ ಮೊದಲು ಚರ್ಚೆ ಮಾಡುತ್ತೇವೆ, ಸ್ವಲ್ಪ ದಿನ ಕಾಯೋಣ, ಸಭೆ ಅವರಿಗೆ ಇಷ್ಟ ಇತ್ತೋ ಅಥವಾ ಇಲ್ಲವೋ ಎಂಬುದು ಎಲ್ಲವೂ ಗೊತ್ತಾಗುತ್ತದೆ. ನಮ್ಮ ಸಭೆಯನ್ನು ಸಹಿಸುವುದಿಲ್ಲವೆಂದು ಯಾರೂ ಹೇಳಿಲ್ಲ ಎಂದಿದ್ದಾರೆ. ದಲಿತ ಸಮುದಾಯದ ಮೇಲಿನ ದೌರ್ಜನ್ಯ ಬಗ್ಗೆ ಚರ್ಚೆ ಆಗಬೇಕಿದೆ. ಯಾರೂ ನಮ್ಮ ಸಭೆಯನ್ನು ಸಹಿಸುವುದಿಲ್ಲ ಎಂದು ಒಂದು ವೇಳೆ ಹೇಳಿದರೆ ಅದಕ್ಕೆ ತಲೆ ಕೆಡಿಸಿಕೊಳ್ಳೊಕೆ ಹೋಗಲ್ಲ. ನಮ್ಮ ಸಭೆ ಸಹಿಸಲ್ಲ ಅಂದರೆ ಅದಕ್ಕೆ ತಕ್ಕ ಉತ್ತರ ಕೊಡುತ್ತೇವೆ. ನಮಗೆ ಆ ಶಕ್ತಿ ಇದೆ ಎಂದು ಪರಮೇಶ್ವರ್ ಎಚ್ಚರಿಕೆ ನೀಡಿದರು. ಎಂದು ಪರಮೇಶ್ವರ್ ಹೇಳಿದರು.

ಹೈಕಮಾಂಡ್​ಗೆ ಡಿಸಿಎಂ ಡಿಕೆ ಶಿವಕುಮಾರ್ ದೂರು ನೀಡಿದ್ದಾರೆಯೇ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಪರಮೇಶ್ವರ್, ಆ ಬಗ್ಗೆ ನನಗೆ ಗೊತ್ತಿಲ್ಲ. ನಮ್ಮ ಈ ಸಭೆಗೆ ಪಕ್ಷದ ಅಧ್ಯಕ್ಷರು, ಡಿಸಿಎಂ ಡಿ.ಕೆ.ಶಿವಕುಮಾರ್​​ರನ್ನೂ ಕರೆಯಬೇಕು ಎಂದು ಚರ್ಚೆ ಆಗಿತ್ತು. ರಾಜಕಾರಣ ಮಾಡುವುದಾದರೆ ಓಪನ್ ಆಗಿಯೇ ಮಾಡುತ್ತೇವೆ. ಮುಚ್ಚಿಟ್ಟು ಮಾಡುವಂಥದ್ದೇನೂ ಇಲ್ಲ ಎಂದರು.

Advertisement

ಪರಮೇಶ್ವರ್ ಅವರು ಎಸ್​ಸಿ, ಎಸ್​ಟಿ ಶಾಸಕರು, ಸಚಿವರ ಡಿನ್ನರ್ ಮೀಟಿಂಗ್ ಆಯೋಜನೆ ಮಾಡಲು ಮುಂದಾಗಿದ್ದರು. ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಆಪ್ತರು ಸಭೆ ಸೇರಿದ ವಿಚಾರ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಪರಮೇಶ್ವರ್ ಕೂಡ ಡಿನ್ನರ್ ಮೀಟಿಂಗ್​ ನಡೆಸಲು ಮುಂದಾಗಿದ್ದರು. ಅತ್ತ ವಿದೇಶ ಪ್ರವಾಸದಿಂದ ದೆಹಲಿಗೆ ಆಗಮಿಸಿರುವ ಡಿಸಿಎಂ ಡಿಕೆ ಶಿವಕುಮಾರ್ ರಾಜ್ಯದಲ್ಲಿನ ಬೆಳವಣಿಗೆಗಳ ಬಗ್ಗೆ ಹೈಕಮಾಂಡ್​​ಗೆ ಮಾಹಿತಿ ನೀಡಿ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಇದರ ಬೆನ್ನಲ್ಲೇ ಪರಮೇಶ್ವರ್  ಔತಣಕೂಟ ಸಭೆಗೆ ಹೈಕಮಾಂಡ್ ತಡೆ ಹಾಕಿತ್ತು.

Advertisement

Udayavani is now on Telegram. Click here to join our channel and stay updated with the latest news.

Next