ಬೆಂಗಳೂರು: ಪ್ರತಿಪಕ್ಷಗಳ ಮೈತ್ರಿಕೂಟದ ‘ಇಂಡಿಯಾ’(INDIA)ವನ್ನು ಅಪಹಾಸ್ಯ ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ರೋಶ ಹೊರ ಹಾಕಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು” ಸುಂದರ, ಸುಮಧುರ ಮತ್ತು ಪವಿತ್ರ ಹೆಸರಿನ ಬಗ್ಗೆ ಅವರಿಗೆ ಏಕೆ ಇಷ್ಟೊಂದು ದ್ವೇಷವಿದೆ” ಎಂದು ಪ್ರಶ್ನಿಸಿದರು.
ಪ್ರಧಾನಿ ಮೋದಿ ಅವರು ವಿಪಕ್ಷಗಳ ಒಕ್ಕೂಟದ ಕುರಿತು ಟೀಕಿಸುವ ವೇಳೆ , ಈಸ್ಟ್ ಇಂಡಿಯಾ ಕಂಪನಿ ಮತ್ತು ಇಂಡಿಯನ್ ಮುಜಾಹಿದ್ದೀನ್ ನಂತಹ ನಿಂದನೀಯ ಹೆಸರುಗಳನ್ನು ಉಲ್ಲೇಖಿಸಿದುದರ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆ.
ಭಾರತೀಯರ ನೂರಾರು ಕೋಟಿ ತೆರಿಗೆ ಹಣವನ್ನು ಲೂಟಿ ಮಾಡಿ ದೇಶಬಿಟ್ಟು ಓಡಿ ಹೋಗಿರುವ ನೀರವ್ ಮೋದಿ ಮತ್ತು ಲಲಿತ್ ಮೋದಿ ಅವರ ಉಪನಾಮವೂ ಮೋದಿ. ಹಾಗೆಂದು ಪ್ರಧಾನಿಗೆ ಅವರನ್ನು ಅವರಿಗೆ ಹೋಲಿಸಬಹುದೇ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.
ಇಂಡಿಯಾ ಹೆಸರಿನ ಬಗ್ಗೆ ಇಷ್ಟೊಂದು ಅಸಹನೆ ಹೊಂದಿರುವ ನೀವು ನಿಮ್ಮದೇ ಸರ್ಕಾರದ ಕಾರ್ಯಕ್ರಮಗಳಾದ ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ, ಸ್ಕಿಲ್ ಇಂಡಿಯಾ ಮೊದಲಾದ ಕಾರ್ಯಕ್ರಮಗಳ ಹೆಸರನ್ನೂ ಬದಲಾಯಿಸುವಿರಾ? ಎಂದು ಪ್ರಶ್ನಿಸಿದ್ದಾರೆ.
ಲಲಿತ್ ಮತ್ತು ನೀರವ್ ಹೆಸರಲ್ಲಿಯೂ ಮೋದಿ ಇದೆಯಲ್ಲಾ ಎಂಬ ಸಾಮಾನ್ಯ ಪ್ರಶ್ನೆ ಕೇಳಿದ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿ, ಎರಡು ವರ್ಷ ಜೈಲು ಶಿಕ್ಷೆ ನೀಡಿ, ಲೋಕಸಭೆಯಿಂದ ಅನರ್ಹಗೊಳಿಸಲಾಯಿತು.ಈಗ ಇಂಡಿಯಾವನ್ನು ಈಸ್ಟ್ ಇಂಡಿಯಾ ಕಂಪೆನಿ ಮತ್ತು ಇಂಡಿಯನ್ ಮುಜಾಹಿದ್ದೀನ್ ಗೆ ಹೋಲಿಸಿರುವ ನಿಮ್ಮ ಹೋಲಿಕೆಗೆ ರಾಹುಲ್ ಗಾಂಧಿಯವರ ವಿರುದ್ಧದ ಕ್ರಮ ಅನ್ವಯವಾಗುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುತ್ತೇವೆ
”ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಏಕರೂಪ ನಾಗರಿಕ ಸಂಹಿತೆ (UCC) ಕೇಂದ್ರ ಸರಕಾರ ರಚಿಸಿರುವ ಅನಗತ್ಯ ವಿವಾದ” ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಹೇಳಿದ್ದಾರೆ.
ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(AIMPLB) ಪ್ರತಿನಿಧಿಗಳಿಗೆ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವ ಭರವಸೆ ನೀಡಿದರು.
”ಅಲ್ಪಸಂಖ್ಯಾತರ ಹಕ್ಕುಗಳನ್ನು ಹತ್ತಿಕ್ಕಲು ತಮ್ಮ ಸರಕಾರ ಅವಕಾಶ ನೀಡುವುದಿಲ್ಲ ಎಂದು ಸಿದ್ದರಾಮಯ್ಯ ಅವರು ತಮ್ಮನ್ನು ಭೇಟಿ ಮಾಡಿದ ಎಐಎಂಪಿಎಲ್‌ಬಿ ನಿಯೋಗಕ್ಕೆ ತಿಳಿಸಿ, ರಾಜ್ಯ ಸರ್ಕಾರವು ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ಕಾರ್ಯನಿರ್ವಹಿಸುತ್ತದೆ, ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ” ಎಂದು ಹೇಳಿದರು.