ಬೆಂಗಳೂರು: ಕೇಂದ್ರ ಸರಕಾರವು ಹರ್ಷದ ಕೂಳು ಕೊಡುವ ಸರಕಾರವಲ್ಲ, ವರ್ಷದ ಕೂಳನ್ನು ಕೊಟ್ಟು ಬದುಕು ಕಟ್ಟಿಕೊಡುವ ಸರಕಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಉದಯವಾಣಿಯಲ್ಲಿ ಶನಿವಾರ ಪ್ರಕಟವಾಗಿದ್ದ “ಪಿಎಂ ವಿಶ್ವಕರ್ಮ ನೋಂದಣಿ: ರಾಜ್ಯ ನಂ. 1′ ಎಂಬ ವಿಶೇಷ ವರದಿಯನ್ನು ಉಲ್ಲೇಖಿಸಿ ತಮ್ಮ “ಎಕ್ಸ್’ ಖಾತೆಯಲ್ಲಿ ರಾಜ್ಯ ಸರಕಾರವನ್ನು ಅವರು ತಿವಿದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರದ ಯೋಜನೆಗಳು ಜಾರಿಯಾಗದಂತೆ ರಾಜ್ಯದ ಕಾಂಗ್ರೆಸ್ ಸರಕಾರ ಎಷ್ಟೇ ತಾತ್ಸಾರ ಧೋರಣೆ ತಾಳಿದರೂ ಕನ್ನಡಿಗರು ಮಾತ್ರ ಮೋದಿ ಸರಕಾರದ ಕಾರ್ಯಕ್ರಮಗಳು ಹಾಗೂ ಯೋಜನೆಗಳನ್ನು ಅಪ್ಪಿ, ಒಪ್ಪುತ್ತಾ ವಿಶ್ವಾಸಪೂರ್ವಕವಾಗಿ ಸ್ವಾಗತಿಸುತ್ತಿರುವುದಕ್ಕೆ ವಿಶ್ವಕರ್ಮ ಯೋಜನೆಯ ನೋಂದಣಿ ಹಾಗೂ ಸಾಲ ಬಿಡುಗಡೆಯಲ್ಲೂ ಕರ್ನಾಟಕ ನಂ. 1 ಸ್ಥಾನ ಪಡೆದಿರುವುದೇ ನೈಜ ಸಾಕ್ಷಿ ಎಂದು ಹೇಳಿದ್ದಾರೆ.
ದೇಸಿಯ ಕುಲ ಕಸುಬು ಆಧಾರಿತ ಕುಶಲಕರ್ಮಿಗಳಿಗೆ ಸ್ವಾಭಿಮಾನಿ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ವಿಶ್ವಕರ್ಮ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ನಮ್ಮದು ಹರ್ಷದ ಕೂಳು ಕೊಡುವ ಸರಕಾರವಲ್ಲ, ವರ್ಷದ ಕೂಳನ್ನು ಕೊಟ್ಟು ಬದುಕು ಕಟ್ಟಿಕೊಡುವ ಸರಕಾರ ಎಂದು ಮೋದಿ ಸರಕಾರ ತೋರಿಸಿಕೊಟ್ಟಿದೆ ಎಂದು ಅವರು ಬಣ್ಣಿಸಿದ್ದಾರೆ.