ಜಾರ್ಜ್ಟೌನ್: ಬ್ರೆಝಿಲ್ನಲ್ಲಿ ನಡೆಯುತ್ತಿರುವ ಜಿ 20 ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಬುಧವಾರ(ನ20) ತಮ್ಮ ಮೂರು ರಾಷ್ಟ್ರಗಳ ಭೇಟಿಯ ಕೊನೆಯ ಹಂತದಲ್ಲಿ ಗಯಾನಾಗೆ ಭೇಟಿ ನೀಡಿದ್ದಾರೆ.
ಪ್ರಧಾನಿ ಮೋದಿ ಅವರನ್ನು ಗಯಾನಾ ಅಧ್ಯಕ್ಷ ಇರ್ಫಾನ್ ಅಲಿ ಮತ್ತು ಹನ್ನೆರಡು ಕ್ಯಾಬಿನೆಟ್ ಮಂತ್ರಿಗಳು ವಿಮಾನ ನಿಲ್ದಾಣದಲ್ಲಿ ಅಭೂತಪೂರ್ವವಾಗಿ ಬರಮಾಡಿಕೊಂಡರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೋದಿಯವರ ಭೇಟಿಯಿಂದ 56 ವರ್ಷಗಳ ನಂತರ ಗಯಾನಾಕ್ಕೆ ಭಾರತೀಯ ಪ್ರಧಾನಿಯ ಮೊದಲ ಭೇಟಿಯಾಗಿದೆ. ಗಯಾನಾ ಅಧ್ಯಕ್ಷ ಮೊಹಮದ್ ಇರ್ಫಾನ್ ಅಲಿ ಅವರ ಆಹ್ವಾನದ ಮೇರೆಗೆ ಭೇಟಿ ನೀಡುತ್ತಿರುವ ಮೋದಿ ಅವರು ನವೆಂಬರ್ 21 ರವರೆಗೆ ಅಲ್ಲಿಯೇ ಇರಲಿದ್ದಾರೆ.
ಉಭಯ ದೇಶಗಳ ನಡುವಿನ ಅನನ್ಯ ಬಾಂಧವ್ಯಕ್ಕೆ ಕಾರ್ಯತಂತ್ರದ ನಿರ್ದೇಶನ ನೀಡುವ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ. 185 ವರ್ಷಗಳ ಹಿಂದೆ ವಲಸೆ ಬಂದ ಅತ್ಯಂತ ಹಳೆಯ ಭಾರತೀಯ ಮೂಲದವರಿಗೆ ಗೌರವ ಸಲ್ಲಿಸಲಿದ್ದಾರೆ ಮತ್ತು ಗಯಾನಾದ ಸಂಸತ್ತಿನಲ್ಲಿ ಭಾಷಣ ಮಾಡಲಿದ್ದಾರೆ.
MEA ಪ್ರಕಾರ, ಗಯಾನಾದಲ್ಲಿ ಸುಮಾರು 3,20,000 ಭಾರತೀಯ ಮೂಲದ ಜನರಿದ್ದಾರೆ. ಎರಡನೇ ಭಾರತ-CARICOM ಶೃಂಗಸಭೆಯಲ್ಲಿ ಕೆರಿಬಿಯನ್ ಪಾಲುದಾರ ರಾಷ್ಟ್ರಗಳ ನಾಯಕರೊಂದಿಗೆ ಮೋದಿ ಕೂಡ ಸೇರಲಿದ್ದಾರೆ.
”ಆತ್ಮೀಯ ಮತ್ತು ಉತ್ಸಾಹಭರಿತ ಸ್ವಾಗತಕ್ಕಾಗಿ ಗಯಾನಾದಲ್ಲಿರುವ ಭಾರತೀಯ ಸಮುದಾಯಕ್ಕೆ ಹೃತ್ಪೂರ್ವಕ ಧನ್ಯವಾದಗಳು. ಒಬ್ಬರ ಬೇರುಗಳೊಂದಿಗೆ ಸಂಪರ್ಕದಲ್ಲಿರಲು ದೂರವು ಎಂದಿಗೂ ಅಡ್ಡಿಯಾಗುವುದಿಲ್ಲ ಎಂದು ಅವರು ತೋರಿಸಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಮುದಾಯವು ಇಲ್ಲಿ ಛಾಪು ಮೂಡಿಸುತ್ತಿರುವುದನ್ನು ನೋಡಿ ಸಂತೋಷವಾಯಿತು” ಎಂದು ಮೋದಿ ಎಕ್ಸ್ ಪೋಸ್ಟ್ ಮಾಡಿದ್ದಾರೆ.