Advertisement
“ಮೋದಿಯವರೇ, ನಮ್ಮ ಸರಕಾರದ ಮೇಲೆ ನೀವು ಮಾಡಿದ 700 ಕೋಟಿ ರೂ. ವಸೂಲಿ ಆರೋಪವನ್ನು ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಸಾಬೀತು ಪಡಿಸದಿದ್ದರೆ ನೀವು ರಾಜಕೀಯ ನಿವೃತ್ತಿ ಪಡೆಯುತ್ತೀರಾ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್, ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸಚಿವ ಪ್ರಿಯಾಂಕ್ ಖರ್ಗೆ ಸಹಿತ ಹಲವು ನಾಯಕರು ಕೂಡ ಮೋದಿ ವಿರುದ್ಧ ಕಿಡಿಕಾರಿದ್ದಾರೆ.
ಪ್ರಧಾನಿ ಸುಳ್ಳು ಹೇಳುವುದು ಹೊಸ ವಿಷಯವೇನಲ್ಲ. ಆದರೆ ಈ ಮಟ್ಟದ ಸುಳ್ಳು ಹೇಳುವುದು ಅವರ ಸ್ಥಾನಕ್ಕೆ ದೊಡ್ಡ ಅವಮಾನ. ಶೋಭೆ ತರುವುದಿಲ್ಲ. ಸುಳ್ಳಿಗೂ ಇತಿಮಿತಿ ಇರಬೇಕು. ಅಬಕಾರಿ ಇಲಾಖೆಯಲ್ಲಿ 700 ಕೋಟಿ ರೂ. ಎಲ್ಲಿರುತ್ತದೆ? ಯಾರು ಕೊಡುತ್ತಾರೆ? ಪ್ರಧಾನಿ ಆದವರಿಗೆ ಈ ಮಟ್ಟದ ತಿಳಿವಳಿಕೆ ಕೊರತೆ ಇರಬಾರದು ಎಂದು ಸಿಎಂ ಸಿದ್ದರಾಮಯ್ಯ ಹುಬ್ಬಳ್ಳಿಯಲ್ಲಿ ಕುಟುಕಿದರು.
Related Articles
Advertisement
ಆರೋಪ ಸಾಬೀತಾದ್ರೆ ಯಾವ ಶಿಕ್ಷೆಗೆ ಬೇಕಾದರೂ ಗುರಿ: ಡಿಕೆಶಿ ಸವಾಲು
ಬೆಂಗಳೂರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಸರಕಾರದ ಮೇಲೆ ತಾವು ಮಾಡಿರುವ 700 ಕೋಟಿ ರೂ. ಲೂಟಿ ಆರೋಪಗಳನ್ನು ಸಾಬೀತುಪಡಿಸಿ. ಯಾವ ಶಿಕ್ಷೆಗೆ ಬೇಕಾದರೂ ಗುರಿಯಾಗುತ್ತೇವೆ ಎಂದು ಪ್ರಧಾನಿ ಮೋದಿಗೆ ಸವಾಲು ಹಾಕಿದರು. ಕೇಂದ್ರ ಸಚಿವರು ಯಾವ್ಯಾವ ಚುನಾವಣೆಗೆ ಎಷ್ಟೆಷ್ಟು ಹಣ ಸಂಗ್ರಹಿಸುತ್ತಿದ್ದಾರೆ ಎಂದು ನನಗೂ ಗೊತ್ತಿದೆ. ಆದರೆ ಉನ್ನತ ಹುದ್ದೆಯಲ್ಲಿರುವವರು ಆಧಾರವಿಲ್ಲದೆ ಆರೋಪ ಮಾಡಬಾರದು. ಚುನಾವಣೆಗಳಲ್ಲಿ ಸುಳ್ಳೇ ಬಿಜೆಪಿಯ ಪ್ರಬಲ ಅಸ್ತ್ರವಾಗಿದೆ. ಹೀಗಾಗಿ ಪ್ರಧಾನಿಯಂತಹ ಉನ್ನತ ಹುದ್ದೆಯಲ್ಲಿರುವವರು ಆಧಾರ ರಹಿತ ಸುಳ್ಳು ಆರೋಪ ಮಾಡುತ್ತಿದ್ದಾರೆ. ಪ್ರಧಾನಿ ರಾಜಕೀಯ ಆರೋಪ ಮಾಡುತ್ತಿದ್ದಾರೆ. ಅವರು ಈ ಆರೋಪಗಳನ್ನು ಸಾಬೀತುಪಡಿಸಲಿ. ನಾವು ಯಾವುದೇ ಶಿಕ್ಷೆಗೆ ಬೇಕಾದರೂ ಗುರಿಯಾಗುತ್ತೇವೆ ಎಂದರು. “ಪ್ರಧಾನಿ ಮೋದಿ ಅವರು ಹೇಳಿರುವಂತೆ ರಾಜ್ಯ ಕಾಂಗ್ರೆಸ್ ಸರಕಾರ ಅಬಕಾರಿ ಹಗರಣದಲ್ಲಿ ಲೂಟಿ ಮಾಡಿರುವುದು 700 ಕೋಟಿ ರೂ. ಅಲ್ಲ, 900 ಕೋಟಿ ರೂ. ಈ ಹಣವನ್ನು ಮಹಾರಾಷ್ಟ್ರ ಚುನಾವಣೆಗೆ ಬಳಕೆ ಮಾಡಿದರೆ, 200 ಕೋಟಿ ರೂ.ಗಳನ್ನು ರಾಜ್ಯದ 3 ಉಪಚುನಾವಣೆಗೆ ಬಳಕೆ ಮಾಡುತ್ತಿದ್ದಾರೆ. ಕರ್ನಾಟಕ ಸರಕಾರ ಚುನಾವಣೆಗಳಿಗೆ ಎಟಿಎಂ ಆಗಿದೆ.” – ಆರ್. ಅಶೋಕ್, ವಿಧಾನಸಭೆ ವಿಪಕ್ಷ ನಾಯಕ “ಮೋದಿ ದೇಶದ ಪ್ರಧಾನಿ. ಅವರು ಎಚ್ಚರದಿಂದ ಮಾತನಾಡಬೇಕು. ಅಬಕಾರಿ ಇಲಾಖೆಯದ್ದು ಭ್ರಷ್ಟಾಚಾರ ಅನ್ನುವುದು ಸ್ಪಷ್ಟವಾಗಬೇಕು. ಭ್ರಷ್ಟಾಚಾರ ಆಗಿದೆ, ಆಪಾದನೆ ಮಾಡಿದ್ದಾರೆ ಅಂದರೆ ಅದೆಲ್ಲವೂ ಸ್ಪಷ್ಟವಾಗಿ ಗೊತ್ತಾಗಬೇಕು.” – ಡಾ|. ಪರಮೇಶ್ವರ್, ಗೃಹ ಸಚಿವ