Advertisement

ಹೆಜಮಾಡಿಯ ನಡಿಕುದ್ರು ಪರಪಟ್ಟದಲ್ಲಿ ನೀರಿನ ಸಮಸ್ಯೆ : ಪ್ರತಿ ಬೇಸಗೆಯಲ್ಲೂ ನೀರಿಗಾಗಿ ಪರದಾಟ!

02:35 AM Apr 28, 2021 | Team Udayavani |

ಪಡುಬಿದ್ರಿ: ಕಾಪು ತಾಲೂಕು, ಉಡುಪಿ ಜಿಲ್ಲೆಯ ಗಡಿಭಾಗದ ಹೆಜಮಾಡಿ ಗ್ರಾಮ ಪಂಚಾಯತ್‌ನ ನಡಿಕುದ್ರು, ಪರಪಟ್ಟ ಪ್ರದೇಶ, ಹೆಜಮಾಡಿ ಬಂದರು ಬಳಿಯಲ್ಲಿನ ಕರಾವಳಿ ಕಾವಲು ಪಡೆ ಪೊಲೀಸ್‌ ಠಾಣೆ ಸುತ್ತಮುತ್ತಲ ಪ್ರದೇಶ ಈಗಾಗಲೇ ಕುಡಿಯುವ ನೀರಿನ ಅಭಾವಕ್ಕೊಳಗಾಗಿದೆ. ಮುಂದಿನ ಮೇ ತಿಂಗಳಲ್ಲಿ ನೀರಿನ ಅಭಾವದಿಂದ ಗುಡ್ಡೆಅಂಗಡಿ ಪ್ರದೇಶದ ಪಂಚಾಯತ್‌ ಬಾವಿ ಬತ್ತಿದಾಗ ಕೊಪ್ಪಳ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತೆ ಕಾಡಲಿದೆ, ತಿಂಗಳ ಹಿಂದೆಯೇ ಗ್ರಾಮಸ್ಥರ ಕುಡಿಯುವ ನೀರಿನ ಬವಣೆ ನೀಗಿಸಲು ಗ್ರಾ.ಪಂ. ಟ್ಯಾಂಕರ್‌ನಲ್ಲೇ ಕೆಲವೆಡೆ ನೀರಿನ ಸರಬರಾಜು ಮಾಡಿದೆ. ಹೆಜಮಾಡಿಯಲ್ಲಿ ಕಡು ಬೇಸಗೆಯಲ್ಲಿ ಇದು ಮಾಮೂಲಿ.

Advertisement

ಸಮಸ್ಯೆಯ ಮೂಲ ಹುಡುಕಲು ಅವಲೋಕನ
ನೀರಿನ ಸಮಸ್ಯೆ ಕುರಿತಾಗಿ ಈಗಾಗಲೇ ಗ್ರಾಮದಲ್ಲೆಲ್ಲಾ ಸಂಚರಿಸಿ ಗ್ರಾ.ಪಂ. ಅಧ್ಯಕ್ಷ ಪ್ರಾಣೇಶ್‌ ಹೆಜಮಾಡಿ ನೇತೃತ್ವದಲ್ಲಿ ಪರಿಸ್ಥಿತಿಯನ್ನು ಅವಲೋಕಿಸಲಾಗಿದೆ. ನೀರಿನ ಸರಬರಾಜು ಆರಂಭವಾದ ತತ್‌ಕ್ಷಣದಿಂದ ಗಿಡ, ಮರಗಳಿಗೆ ನೀರು ಹಾಯಿಸುವ ಹಲವು ಮಂದಿ ಆಡಳಿತ ಯಂತ್ರದ “ಕ್ಷ -ಕಿರಣ’ದಲ್ಲೀಗ ಸಿಲುಕಿಕೊಂಡಿದ್ದಾರೆ.

ಗ್ರಾಮದ ಸ್ಥಿತಿಗತಿ ಅರ್ಥೈಸಿಕೊಳ್ಳಿ
ಹಲವರು ನೀರನ್ನು ಪೋಲು ಮಾಡುತ್ತಿರುವ ಮಾಹಿತಿ ಇದೆ. ಬೇಲಿಯೇ ಎದ್ದು ಹೊಲ ಮೇಯುವ ಈ ಸ್ಥಿತಿಯನ್ನು ಗ್ರಾಮದ ಜನತೆಯೂ ಅರ್ಥೈಸಿಕೊಳ್ಳ ಬೇಕಿದೆ. ಗ್ರಾಮಸ್ಥರೂ ಈಗ ಜವಾಬ್ದಾರಿಯುತರಾಗಿ ನೀರು ಪೋಲಾಗುತ್ತಿದ್ದಲ್ಲಿ ಕೂಡಲೇ ಪಂಚಾಯತ್‌ ವ್ಯವಸ್ಥೆ ಗೊಳಿಸಿರುವ ವಾಟ್ಸಾಪ್‌ಗೆ ಮಾಹಿತಿಯನ್ನು ರವಾನಿಸ ಲಾರಂಭಿಸಿದ್ದಾರೆ ಎಂದು ಗ್ರಾ.ಪಂ. ಅಧ್ಯಕ್ಷ ಪ್ರಾಣೇಶ್‌ ಹೆಜಮಾಡಿ ಹೇಳುತ್ತಾರೆ.

ತೆರೆದ ಬಾವಿ ಯೋಜನೆಗೆ ಚಾಲನೆ
ರಾಜೀವ್‌ ಗಾಂಧಿ ಕ್ರೀಡಾಂಗಣದ ಬಳಿ ಜಿ.ಪಂ. ಕುಡಿಯುವ ನೀರಿನ ಯೋಜನೆಯಡಿ ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ಒಂದು ತೆರೆದ ಬಾವಿಯನ್ನು ತೋಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಕುಡಿಯುವ ನೀರಿಗಾಗಿ ಗ್ರಾಮಸ್ಥರೋರ್ವರ ಉದಾರ ಕೊಡುಗೆಯನ್ನು ಬಯಸಿ ಪಂಚಾಯತ್‌ ಮಾತುಕತೆ ನಡೆಸಲಿದೆ. ಇವೆರಡೂ ಕೈಗೂಡಿದಲ್ಲಿ ನಡಿಕುದ್ರು, ಪರಪಟ್ಟ, ಕೊಪ್ಪಳ, ಕೊಕ್ರಾಣಿ ಹಾಗೂ ಹೆಜಮಾಡಿ ಕೋಡಿಯ ಕರಾವಳಿ ಕಾವಲು ಪೊಲೀಸ್‌ ಠಾಣಾ ಪ್ರದೇಶಗಳಿಗೆ ಯಥೇಷ್ಟ ಕುಡಿಯುವ ನೀರು ಸರಬರಾಜಾಗಲಿದೆ. ಇವೆಲ್ಲದರ ಮಧ್ಯೆ ಗ್ರಾಮಸ್ಥರಿಗೆ ಸಮಸ್ಯೆಯಾದಲ್ಲಿ ಟ್ಯಾಂಕರ್‌ ಮೂಲಕವೂ ನೀರು ಸರಬರಾಜಿಗೆ ಗ್ರಾಮಾಡಳಿತ ಸಿದ್ಧವಿದೆ ಎಂದು ಗ್ರಾ.ಪಂ. ಅಧ್ಯಕ್ಷರು ಹೇಳುತ್ತಾರೆ.

ಗ್ರಾಮದ ನೀರಿನ ಬವಣೆಯನ್ನು ಕೊನೆಗಾಣಿಸಲು ಧ‌ಕ್ಷ, ಯುವ ಗ್ರಾಮಾಡಳಿತದ ಜನಪ್ರತಿನಿಧಿಗಳು ಒಂದು ಸ್ಫೂರ್ತಿಯುತ ತಂಡವಾಗಿ ಕೆಲಸ ಮಾಡುವವರಿದ್ದೇವೆ ಎಂದು ಹೆಜಮಾಡಿ ಗ್ರಾ.ಪಂ. ಸದಸ್ಯ ಶರಣ್‌ ಕುಮಾರ್‌ ಮಟ್ಟು ಅವರು ಹೇಳುತ್ತಾರೆ.

Advertisement

ಗ್ರಾಮಸ್ಥರದ್ದೂ ಜವಾಬ್ದಾರಿ
ಸರ್ವರಿಗೂ ಸಮಬಾಳು, ಸಮ ಪಾಲು ಎಂಬ ದೃಷ್ಟಿಯಿಂದ ಗ್ರಾಮಸ್ಥರದ್ದೂ ಕುಡಿಯುವ ನೀರಿನ ಈ ವಿಚಾರದಲ್ಲಿ ಬಲುದೊಡ್ಡ ಜವಾಬ್ದಾರಿಯಿದೆ. ಅದನ್ನು ಅರಿತು ಗಾಮಾಭಿವೃದ್ಧಿಗೆ ಕೈಜೋಡಿಸಬೇಕು .
– ಸುಮತಿ ಜಯರಾಮ್‌ ಹೆಜಮಾಡಿ ಪ್ರಭಾರ ಪಿಡಿಒ

ದೂರದೃಷ್ಟಿ ಅಗತ್ಯ
ದೂರದೃಷ್ಟಿಯೊಂದಿಗೆ ಪರಸ್ಪರ ಹೊಂದಾಣಿಕೆಯಿಂದ ಪಂಚಾಯತ್‌ ವ್ಯವಸ್ಥೆ ಕರ್ತವ್ಯ ನಿರ್ವಹಿಸಬೇಕಿದೆ. ಜಿ. ಪಂ. ನಿಧಿಯಿಂದ ಗ್ರಾಮದ ಎಲ್ಲಾದರೂ ಪೈಪ್‌ಲೈನ್‌ನಂತಹ ಕಾಮಗಾರಿಯಾದಲ್ಲಿ ಪಂಚಾಯತ್‌ ಗಮನಕ್ಕೆ ಮೊದಲಾಗಿ ತರಬೇಕಿದೆ. ಬಳಿಕ ನಡೆಸಿದ ಕಾಮಗಾರಿಯ ನಕ್ಷೆಯನ್ನು ಪಂಚಾಯತ್‌ಗೆ ನೀಡಿದಲ್ಲಿ ಆ ಪೈಪ್‌ಲೈನ್‌ ಕುರಿತಾದ ಎಲ್ಲ ಮಾಹಿತಿಗಳು ಪಂಚಾಯತ್‌ಗೂ ಲಭಿಸುತ್ತವೆ. ಗ್ರಾಮದಲ್ಲಿನ ನೀರು ಸರಬರಾಜಿನ ಪೈಪ್‌ಲೈನ್‌ ಕುರಿತಾದ ನಕ್ಷೆಗಳು ಇಲ್ಲದಿರುವುದೇ ನೀರಿನ ಪೋಲು ತಡೆ, ಅಪೇಕ್ಷಿತ ಕಾಮಗಾರಿ ನಡೆಸಲು ಬಲು ದೊಡ್ಡ ಹಿಂಜರಿಕೆ ಎನಿಸಿದೆ.
– ಪ್ರಾಣೇಶ್‌ ಹೆಜಮಾಡಿ ಗ್ರಾ.ಪಂ. ಅಧ್ಯಕ್ಷ, ಹೆಜಮಾಡಿ

– ಆರಾಮ

Advertisement

Udayavani is now on Telegram. Click here to join our channel and stay updated with the latest news.

Next