Advertisement

New Way: ಸಾರಿಗೆ ನೌಕರರ ಸಮಸ್ಯೆ ಇತ್ಯರ್ಥಕ್ಕೆ “ತ್ರಿವಳಿ ಸೂತ್ರ’

03:23 AM Jan 01, 2025 | Team Udayavani |

ಬೆಂಗಳೂರು: ಸಾರಿಗೆ ನೌಕರರ ಸಮಸ್ಯೆಗೆ ಸರಕಾರ ತ್ರಿವಳಿ ಸೂತ್ರ ಮುಂದಿಡಲು ಚಿಂತನೆ ನಡೆಸಿದ್ದು, ಇದು ಯಶಸ್ವಿಯಾದರೆ ಸಮಸ್ಯೆ ಭಾಗಶಃ ಪರಿಹಾರ ಆಗಲಿದೆ.

Advertisement

ಮುಖ್ಯವಾಗಿ ಸಾರಿಗೆ ನೌಕರರ ವೇತನ ಪರಿಷ್ಕರಣೆಗೆ ಅಸ್ತು ಎನ್ನುವುದು. ಇದರ ಜತೆಗೆ ಈ ಹಿಂದಿನ ವೇತನ ಪರಿಷ್ಕರಣೆ ಬಾಕಿ, ಭವಿಷ್ಯ ನಿಧಿ ಮತ್ತಿತರ ಬಾಕಿ ಪಾವತಿಸುವುದು. ಇದರಿಂದಾಗುವ ಆರ್ಥಿಕ ಹೊರೆಯನ್ನು ಪ್ರಯಾಣ ದರ ಪರಿಷ್ಕರಣೆ ಮೂಲಕ ತಕ್ಕಮಟ್ಟಿಗೆ ತಗ್ಗಿಸುವ ಲೆಕ್ಕಾಚಾರ ಸರಕಾರದ ಮುಂದಿದೆ ಎನ್ನಲಾಗಿದೆ.

ಸರಕಾರ ಮತ್ತು ಸಾರಿಗೆ ಸಂಸ್ಥೆಗಳು ಹಾಗೂ ನೌಕರರ ಸಮಸ್ಯೆ ಮೂರೂ ಒಂದಕ್ಕೊಂದು ತಳಕು ಹಾಕಿಕೊಂಡಿವೆ. ಈಗಾಗಲೇ ಸಂಕಷ್ಟದಲ್ಲಿರುವ ಕೆಎಸ್ಸಾರ್ಟಿಸಿ ಸೇರಿದಂತೆ ನಾಲ್ಕೂ ಸಾರಿಗೆ ನಿಗಮಗಳು ತನ್ನ ನೌಕರರಿಗೆ ವೇತನ ಪರಿಷ್ಕರಣೆ ಮಾಡಬೇಕಿದೆ. ಇದಕ್ಕಾಗಿ ಸರಕಾರದಿಂದ ಆರ್ಥಿಕ ನೆರವು ಎದುರು ನೋಡುತ್ತಿವೆ. ಆದರೆ ಸರಕಾರ ಕೂಡ “ಶಕ್ತಿ’ ಒಳಗೊಂಡಂತೆ 5 ಗ್ಯಾರಂಟಿಗಳಿಗೆ ಹಣ ಹೊಂದಿಸುವಲ್ಲಿಯೇ ಸುಸ್ತಾಗಿದೆ. ಈ ಮಧ್ಯೆ ಸಾರಿಗೆ ನಿಗಮಗಳಿಗೆ ನೆರವು ನೀಡುವುದು ಕಷ್ಟಸಾಧ್ಯ. ಈ ಹಿನ್ನೆಲೆಯಲ್ಲಿ ಸಮಸ್ಯೆ ಪರಿಹಾರದ ಜತೆಗೆ ಸಂಸ್ಥೆ ಮತ್ತು ಸರಕಾರಕ್ಕೂ ಅಷ್ಟಾಗಿ ಹೊರೆಯಾಗದ ರೀತಿಯಲ್ಲಿ ಈ ತ್ರಿವಳಿ ಸೂತ್ರ ರೂಪಿಸಲಾಗುತ್ತಿದೆ ಎಂದು ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

ಸಾರಿಗೆ ನೌಕರರ ಸಂಘಟನೆಗಳು ಶೇ. 25ರಷ್ಟು ವೇತನ ಪರಿಷ್ಕರಣೆಗೆ ಪಟ್ಟುಹಿಡಿದಿವೆ. ಆದರೆ ನಿಗಮಗಳು ಶೇ. 12ರಷ್ಟು ನೀಡುವುದಾಗಿ ಹೇಳುತ್ತಿವೆ. ಇವೆರಡರ ನಡುವೆ ಅಂದರೆ ಶೇ. 16ರಿಂದ 17ರಷ್ಟು ಪರಿಷ್ಕರಣೆಗೆ ಸಂಘಟನೆಗಳ ಮುಖಂಡರ ಮನವೊಲಿಸಲು ಉದ್ದೇಶಿಸಲಾಗಿದೆ. ಸಂಕ್ರಾಂತಿ ಅನಂತರ ಇದಕ್ಕೆ ಮುಹೂರ್ತ ನಿಗದಿ ಮಾಡಲಾಗುತ್ತದೆ.

ನಿಗಮಗಳ ಸಾಲಕ್ಕೆ ಸರಕಾರದ ಖಾತ್ರಿ
ಸಾಲ, ತುಟ್ಟಿಭತ್ತೆ, ಭವಿಷ್ಯನಿಧಿ, ಡೀಸೆಲ್‌ ಬಾಕಿ ಸೇರಿದಂತೆ ನಾಲ್ಕೂ ನಿಗಮಗಳ ಮೇಲೆ ಸುಮಾರು 6,330 ಕೋಟಿ ರೂ. ಹೊಣೆಗಾರಿಕೆ ಇದೆ. ಇಂತಹ ಸಂದರ್ಭದಲ್ಲಿ ಅದನ್ನು ಪಾವತಿ ಮಾಡಲು ಸರಕಾರಕ್ಕೂ ಸದ್ಯದ ಸ್ಥಿತಿಯಲ್ಲಿ ಸಾಧ್ಯವಿಲ್ಲ. ಬದಲಿಗೆ 2 ಸಾವಿರ ಕೋಟಿ ರೂ. ವರೆಗೆ ಸಾಲದ ಖಾತರಿ ನೀಡಲು ಸರಕಾರ ಈಗಾಗಲೇ ಅನುಮತಿ ನೀಡಿದೆ.

Advertisement

ಜತೆಗೆ ದರ ಪರಿಷ್ಕರಣೆ ಮಾಡಿ 4 ವರ್ಷಗಳು ಕಳೆದಿದ್ದು, ಈ ಅವಧಿಯಲ್ಲಿ ಆಟೋ, ಆ್ಯಪ್‌ ಆಧಾರಿತ ಟ್ಯಾಕ್ಸಿಗಳ ದರ ಎಷ್ಟಿತ್ತು? ಈಗ ಎಷ್ಟಾಗಿದೆ? ಡೀಸೆಲ್‌ ಬೆಲೆ ಎಷ್ಟಿತ್ತು? ಮತ್ತು ಎಷ್ಟಾಗಿದೆ? ಎಂಬುದನ್ನು ಹೋಲಿಕೆ ಮಾಡಿ, ಪರಿಷ್ಕರಣೆಗೆ ಕ್ರಮ ಕೈಗೊಳ್ಳುವ ಚಿಂತನೆ ಇದೆ. ಇವೆರಡರ ಸಹಾಯದಿಂದ ವೇತನ ಪರಿಷ್ಕರಣೆ ಮತ್ತು ಬಾಕಿ ಪಾವತಿಯ ಲೆಕ್ಕಾಚಾರ ಹಾಕಲಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಮಾನ ವೇತನದ ಬೇಡಿಕೆ ನೇಪಥ್ಯಕ್ಕೆ?
ಈ ಮಧ್ಯೆ ಸಂಕ್ರಾಂತಿ ಅನಂತರ ಸಾರಿಗೆ ನೌಕರರ ಸಂಘಟನೆಗಳ ಮುಖಂಡರ ಮನವೊಲಿಸಿ ಬಜೆಟ್‌ವರೆಗೆ ತಳ್ಳುವ ಮತ್ತೂಂದು ಲೆಕ್ಕಾಚಾರವೂ ಇದೆ. ಬಜೆಟ್‌ನಲ್ಲೇ ನಿಗಮಗಳಿಗೆ ಅನುದಾನ ಮೀಸಲಿಟ್ಟು, ಆ ಮೂಲಕ ಬಳಕೆಗೆ ಅವಕಾಶ ಕಲ್ಪಿಸುವ ಅಭಯ ನೀಡುವ ಚಿಂತನೆ ನಡೆದಿದೆ. ಆದರೆ ಇದು ಸಂಘಟನೆಗಳು ಎಷ್ಟರಮಟ್ಟಿಗೆ ಸಹಕಾರ ನೀಡುತ್ತವೆ ಎಂಬುದರ ಮೇಲೆ ಅವಲಂಬಿತವಾಗಿದೆ. ಈ ಪರಿಷ್ಕರಣೆಗೆ ಒಪ್ಪಿಕೊಂಡರೆ ಸರಕಾರಿ ನೌಕರರಿಗೆ ನೀಡುವಂತೆ ಸಮಾನ ವೇತನದ ಬೇಡಿಕೆ ನೇಪಥ್ಯಕ್ಕೆ ಸರಿದಂತಾಗಲಿದೆ. ಆಗ ಕರ್ನಾಟಕ ರಜ್ಯ ರಸ್ತೆ ಸಾರಿಗೆ ನಿಗಮಗಳ ಸಂಘಟನೆಗಳ ಒಕ್ಕೂಟದಿಂದ ವಿರೋಧ ವ್ಯಕ್ತವಾಗುವ ಸಾಧ್ಯತೆಯೂ ಇದೆ.

– ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next