Advertisement

ಸಾಲ ಮನ್ನಾ ಗೊಂದಲ ಬ್ಯಾಂಕ್‌ಗಳಿಗೆ ಭೇಟಿ

07:11 AM Dec 15, 2018 | Team Udayavani |

ವಿಧಾನ ಪರಿಷತ್ತು: ರೈತರ ಸಾಲಮನ್ನಾಕ್ಕೆ ಹಾಕಿರುವ ಷರತ್ತುಗಳ ಸಡಲಿಕೆ ಕುರಿತು ಮತ್ತು ಈ ಬಗ್ಗೆ ಇರುವ ಗೊಂದಲಗಳ ನಿವಾರಣೆಗೆ ಡಿಸಿಸಿ ಬ್ಯಾಂಕ್‌ವಾರು ಭೇಟಿಕೊಟ್ಟು ಪರಿಶೀಲನೆ ನಡೆಸುವುದಾಗಿ ಸಹಕಾರ ಸಚಿವ ಬಂಡೆಪ್ಪ ಖಾಶೆಂಪೂರ ಹೇಳಿದರು.

Advertisement

 ಬರಗಾಲ ಕುರಿತ ಚರ್ಚೆಯಲ್ಲಿ ಬಿಜೆಪಿ ಸದಸ್ಯ ಮಹಾಂತೇಶ ಕವಟಗಿಮಠ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ ಸಹಕಾರ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ ಗಳಲ್ಲಿನ ರೈತರ ಸಾಲವನ್ನು ಮನ್ನಾ ಮಾಡುವ ದಿಟ್ಟ ನಿರ್ಧಾರ ತೆಗೆದುಕೊಂಡಿದೆ. ರೈತರಿಗೆ ಋಣಮುಕ್ತ ಪತ್ರ ಕೊಡುತ್ತೇವೆ, ಈ ಬಗ್ಗೆ ಯಾವುದೇ ಆತಂಕ ಬೇಡ ಎಂದು ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಮಹಾಂತೇಶ ಕವಟಗಿಮಠ, ರೈತರಿಗೆ ಸಾಲಮನ್ನಾವನ್ನು ಮೂಗಿಗೆ ತುಪ್ಪ ಸವರಿದಂತೆ ಮಾಡಲಾಗಿದೆ. ಅನೇಕ ಷರತ್ತುಗಳನ್ನು ಹಾಕಿ ಕಡಿಮೆ ಜನರಿಗೆ ಸಾಲ ಮನ್ನಾದ ಲಾಭ ತಲುಪುವಂತೆ ಮಾಡುತ್ತಿದ್ದಾರೆ. ಸಾಲಮನ್ನಾದ ವಿವರ ತುಂಬಲು 52 ಬಗೆಯ ಪ್ರಶ್ನೆಗಳನ್ನು ಕೇಳಿದ್ದಾರೆ. ಇಷ್ಟೊಂದು ಅಗತ್ಯದೆಯೇ ಎಂದು ಪ್ರಶ್ನಿಸಿದರು.

ಇದಕ್ಕೆ ಧ್ವನಿಗೂಡಿಸಿದ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸದಸ್ಯರಾದ ತೇಜಸ್ವಿನಿಗೌಡ, ಹನುಮಂತ ನಿರಾಣಿ ಅವರು , ರೈತರ ಸಾಲ ಮನ್ನಾ ಮಾಡುವ ಇಚ್ಛಾಶಕ್ತಿ ಸರ್ಕಾರಕ್ಕೆ ಇದ್ದರೆ ಕೂಡಲೇ ಷರತ್ತುಗಳನ್ನು ಸಡಲಿಸಬೇಕು. ಈ ಹಿಂದೆ ಯಾವ ರೀತಿಯಾಗಿ ಸಾಲ ಮನ್ನಾ ಮಾಡಲಾಗಿತ್ತೋ ಅದೇ ಮಾದರಿಯಲ್ಲಿ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ಸಾಲಮನ್ನಾ ವಿಚಾರದಲ್ಲಿ ಸರ್ಕಾರ ರೈತರಿಗೆ ಮಾಹಿತಿ ಕೇಳಿದೆ ಅಷ್ಟೇ. ಈಗಾಗಲೇ ಸರ್ಕಾರ ಮಾಡಿರುವ ಸಾಲಮನ್ನಾದ ಪೈಕಿ 2019ರ ಜುಲೈ ಒಳಗಾಗಿ 9834 ಕೋಟಿ ರೂ.ಸಹಕಾರ ಬ್ಯಾಂಕ್‌ನಲ್ಲಿರುವ ಸಾಲವನ್ನು ಮನ್ನಾ ಮಾಡುತ್ತೇವೆ. ಈ ಬಗ್ಗೆ ಜಿಲ್ಲಾ ಸಹಕಾರ ಬ್ಯಾಂಕ್‌ಗಳಿಗೆ ಆತಂಕ, ಗೊಂದಲವಿದ್ದರೆ ಷರತ್ತುಗಳ ಸಡಿಲಿಕೆ ವಿಚಾರದಲ್ಲಿ ಖುದ್ದಾಗಿ ರಾಜ್ಯದ ಕೆಲವು ಡಿಸಿಸಿ ಬ್ಯಾಂಕ್‌ಗಳಿಗೂ ಭೇಟಿಕೊಟ್ಟು ಪರಿಶೀಲನೆ ನಡೆಸುತ್ತೇವೆ ಎಂದು ಹೇಳಿದರು.  

Advertisement

Udayavani is now on Telegram. Click here to join our channel and stay updated with the latest news.

Next