ಬೆಂಗಳೂರು: ಪ್ರಯಾಣ ದರ ಪರಿಷ್ಕರ ಣೆಗೆ ಅನುಮತಿ ಮತ್ತು 2 ಸಾವಿರ ಕೋಟಿ ರೂ.ಗಳಷ್ಟು ಸಾಲ ಪಡೆಯಲು ಖಾತ್ರಿ ನೀಡುವ ಮೂಲಕ ರಾಜ್ಯದ ಸಾರಿಗೆ ನಿಗಮ ಗಳಿಗೆ ನೆರವಿನ ಔದಾರ್ಯ ತೋರಿ ಸುತ್ತಿರುವ ಸರಕಾರವು ಸ್ವತಃ ಅದೇ ನಿಗಮಗಳ 1,700-1,800 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಅದನ್ನು ಪಾವತಿಸಿದರೆ ಸದ್ಯಕ್ಕೆ ಸಾಲವೂ ಬೇಕಿಲ್ಲ. ಸರಕಾರದಿಂದ ಸಾಲದ “ಗ್ಯಾರಂಟಿ’ಯೂ ಬೇಕಾಗುವುದಿಲ್ಲ!
ಸರಕಾರ ನೀಡಿದ ಮಾಹಿತಿ ಪ್ರಕಾರ ನಾಲ್ಕು ಸಾರಿಗೆ ನಿಗಮಗಳು ತಮ್ಮ ಮೇಲಿನ ಹೊಣೆಗಾರಿಕೆ ಮತ್ತು ಸಾಲ ಸೇರಿ ಒಟ್ಟು 5,039 ಕೋಟಿ ರೂ. ಪಾವತಿಸಬೇಕಿದೆ. ಈ ಪೈಕಿ ಭವಿಷ್ಯನಿಧಿ, ನಿವೃತ್ತ ನೌಕರರ ಬಾಕಿ, ಇಂಧನ ಬಾಕಿ ಸೇರಿದೆ. ಈ ಹೊರೆ ತಗ್ಗಿಸಲು ಸಾಲ ಪಡೆಯುವುದಕ್ಕೆ ಅನುಮತಿ ನೀಡಿರುವ ಸರಕಾರವು, ಅದಕ್ಕೆ ತಾನು “ಗ್ಯಾರಂಟಿ’ ನೀಡು ವುದಾಗಿ ಭರವಸೆ ನೀಡಿದೆ. ಆದರೆ ಗ್ಯಾರಂಟಿ “ಶಕ್ತಿ’ ಯೋಜನೆಯಡಿ ಬರಬೇಕಾದ ಮೊತ್ತವೇ 1,800 ಕೋಟಿ ರೂ. ಇದೆ. ಅದನ್ನು ಸಕಾಲದಲ್ಲಿ ಪಾವತಿಸಿದರೆ ಸದ್ಯಕ್ಕೆ ಸಾಲದ ಆವಶ್ಯಕತೆ ಇಲ್ಲ. ಬಡ್ಡಿಯ ಹೊರೆಯೂ ಇರುವುದಿಲ್ಲ.
2023ರ ಜೂನ್‌ನಲ್ಲಿ ಜಾರಿಗೆ ಬಂದ ಸರಕಾರದ ಮೊದಲ ಗ್ಯಾರಂಟಿ “ಶಕ್ತಿ’ಯಡಿ ಇದುವರೆಗೆ 363 ಕೋಟಿ ಬಾರಿ ಮಹಿಳಾ ಪ್ರಯಾಣಿಕರು ಸಂಚರಿಸಿದ್ದು, ಅದರ ಮೊತ್ತ 8,800 ಕೋಟಿ ರೂ. ಆಗಿದೆ. ಈ ಪೈಕಿ ಸರಕಾರ ಇದುವರೆಗೆ ಪಾವತಿಸಿದ್ದು ಅಂದಾಜು 7,000 ಕೋಟಿ ರೂ. ಪ್ರತೀ ತಿಂಗಳು ಒಟ್ಟು ಸಂಚರಿಸಿದ ಮಹಿಳಾ ಪ್ರಯಾಣಿಕರ ಟಿಕೆಟ್ ಮೊತ್ತದಲ್ಲಿ ಶೇ. 75-80ರಷ್ಟನ್ನು ಮಾತ್ರ ಸರಕಾರ ಪಾವತಿಸುತ್ತಿದೆ. ಈ ಪೈಕಿ 2023ರಲ್ಲಿ ಶೇ. 26ರಷ್ಟು ಮತ್ತು 2024ರ ಡಿಸೆಂಬರ್‌ವರೆಗೆ ಶೇ. 16ರಷ್ಟು ಹಿಂಬಾಕಿ ಇದೆ. ಇದರ ಜತೆಗೆ ವಿದ್ಯಾರ್ಥಿ, ಅಂಗವಿಕಲರ ಸಹಿತ ಹಲವು ರಿಯಾಯಿತಿ ಪಾಸ್‌ಗಳ ಬಾಕಿ ಕೂಡ ಇದೆ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಿರೀಕ್ಷೆ ಮೀರಿದ ಯೋಜನಾ ವೆಚ್ಚ
ಈ ಬಾಕಿ ಉಳಿಕೆಗೆ ಸಕಾರಣವೂ ಇದೆ. “ಶಕ್ತಿ’ ಯೋಜನೆ ಜಾರಿಗೆ ಬಂದದ್ದು 2023ರ ಜೂ. 11ರಂದು. ಇದಕ್ಕೆ ಅಂದಾಜು ಮಾಡಿ ಲೆಕ್ಕಹಾಕಿದ್ದು 2023ರ ಮೇ ತಿಂಗಳಿನಲ್ಲಿ. ಅಲ್ಲಿಂದ ಇದುವರೆಗೆ ಒಟ್ಟು ಸುಮಾರು 3 ಸಾವಿರ ಸಾಮಾನ್ಯ ಬಸ್‌ಗಳು ಎಲ್ಲ ಸಾರಿಗೆ ನಿಗಮಗಳಿಗೆ ಸೇರ್ಪಡೆಗೊಂಡಿವೆ. ಅದರ ಬೆನ್ನಲ್ಲೇ ಸುತ್ತುವಳಿಗಳ ಸಂಖ್ಯೆ ಏರಿಕೆಯಾಗಿದೆ. ಕಾರ್ಯಾಚರಣೆ ಮಾಡುವ ಕಿ.ಮೀ.ಗಳು ಜಾಸ್ತಿ ಆಗಿವೆ. ಇದೆಲ್ಲವೂ ನಿರೀಕ್ಷೆ ಮೀರಿದ್ದರಿಂದ ಆರ್ಥಿಕ ಇಲಾಖೆಯಿಂದ ಪೂರ್ಣಪ್ರಮಾಣದಲ್ಲಿ ಹಣ ಬಿಡುಗಡೆ ಆಗಲಿಲ್ಲ. ಅದು ಪರೋಕ್ಷವಾಗಿ ನಿಗಮಗಳ ಮೇಲೆಯೇ ಹೊರೆಯಾಗಿ ಪರಿಣಮಿಸಿತು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ.
“ಇದೇನೂ ಹೊಸದಲ್ಲ, ಸಾಮನ್ಯವಾಗಿ ಸರಕಾರದಿಂದ ರಿಯಾಯಿತಿ ಪಾಸ್‌ಗಳ ಸಹಿತ ನಿಗಮಗಳಿಗೆ ಬರಬೇಕಾದ ಅನುದಾನ ಅಥವಾ ಹಿಂಬಾಕಿ ಸಂಪೂರ್ಣವಾಗಿ ಮತ್ತು ನಿಯಮಿತವಾಗಿ ಬರುವುದಿಲ್ಲ. ನಿಗಮಗಳು ಸಲ್ಲಿಸಿದ ಪ್ರಸ್ತಾವನೆ ಪೈಕಿ ಶೇ.70ರಿಂದ 75ರಷ್ಟು ಬರುತ್ತದೆ. ಉಳಿದದ್ದು ಲೆಕ್ಕಪುಸ್ತಕದಲ್ಲಿ ಸೇರ್ಪಡೆ ಆಗುತ್ತದೆ. ಪೂರ್ಣಪ್ರಮಾಣದಲ್ಲಿ ಪಾವತಿಯಾದರೆ, ತಕ್ಕಮಟ್ಟಿಗೆ ನಿಗಮಗಳ ಹೊರೆ ಕಡಿಮೆ ಆಗುತ್ತದೆ’ ಎಂದು ಹೆಸರು ಹೇಳಲಿಚ್ಛಿಸದ KSRTC ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ವಿಜಯಕುಮಾರ ಚಂದರಗಿ